ಔರಾದ್: ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸೂಕ್ತ ಶೌಚಾಲಯ ಸೌಲಭ್ಯದ ಕೊರತೆಯಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರದಾಡುತ್ತಿದ್ದಾರೆ.
8ರಿಂದ 10ನೇ ತರಗತಿವರೆಗಿನ ಈ ಶಾಲೆಯಲ್ಲಿ ಕನ್ನಡ, ಉರ್ದು, ಮರಾಠಿ ಮಾಧ್ಯಮ ಸೇರಿ 485 ವಿದ್ಯಾರ್ಥಿಗಳ ಹಾಜರಾತಿ ಇದೆ. ಇವರಲ್ಲಿ 300 ವಿದ್ಯಾರ್ಥಿನಿಯರು ಹಾಗೂ ಏಳು ಜನ ಮಹಿಳಾ ಶಿಕ್ಷಕಿಯರು ಇದ್ದಾರೆ. ಇವರೆಲ್ಲಗೂ ಮಧ್ಯಾಹ್ನ ಶಾಲೆ ಬಿಟ್ಟಾಗ ಶೌಚಾಲಯ ಬಳಸಲು ಸರತಿಯಲ್ಲಿ ನಿಲ್ಲಬೇಕಾಗುತ್ತದೆ. ಕೆಲ ವಿದ್ಯಾರ್ಥಿನಿಯರಿಗೆ ಶೌಚಾಲಯ ಬಳಸಲು ಸಮಯ ಸಿಗದೆ ಹಾಗೆಯೇ ತರಗತಿಗೆ ಹೋಗುತ್ತಾರೆ ಎಂದು ಶಾಲೆ ಮಹಿಳಾ ಶಿಕ್ಷಕಿಯರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ನಮ್ಮ ಶಾಲೆಯಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದರೂ ಸೂಕ್ತ ಶೌಚಾಲಯ ಸೌಲಭ್ಯ ಇಲ್ಲದೆ ಪಾಲಕರು ಸಹ ಕಿರಿಕಿರಿ ಮಾಡುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ ದಾನಿಯೊಬ್ಬರು ಒಂದು ಸಣ್ಣ ಕಟ್ಟಡ ಶೌಚಾಲಯ ಕಟ್ಟಿಕೊಟ್ಟಿದ್ದಾರೆ. ಅದರಲ್ಲಿ ಒಟ್ಟಿಗೆ ಕೇವಲ ಮೂವರು ವಿದ್ಯಾರ್ಥಿನಿಯರು ಬಳಸಬಹದು. ಮಧ್ಯಾಹ್ನ ಊಟಕ್ಕೆ ಬಿಟ್ಟಾಗ ಎಲ್ಲ 300 ವಿದ್ಯಾರ್ಥಿನಿಯರು ಹೊರಗೆ ಬರುತ್ತಾರೆ. ಅವರೆಲ್ಲ ಎಲ್ಲಿಗೆ ಹೋಗಬೇಕು ಎಂದು ಶಾಲೆ ಶಿಕ್ಷಕ ಸಿಬ್ಬಂದಿ ಪ್ರಶ್ನೆ ಮಾಡುತ್ತಾರೆ.
ಪಟ್ಟಣ ಪಂಚಾಯಿತಿಯವರು ಕಟ್ಟಿರುವ ಒಂದು ಸಣ್ಣ ಶೌಚಾಲಯ ಇದೆ. ಅದನ್ನು ಇಷ್ಟು ದಿನ ಮಹಿಳಾ ಸಿಬ್ಬಂದಿ ಬಳಸುತ್ತಿದ್ದರು. ಈಗ ವಿದ್ಯಾರ್ಥಿನಿಯರ ಸಂಖ್ಯೆ ಜಾಸ್ತಿ ಆಗಿರುವುದರಿಂದ ಅದನ್ನು ಅವರಿಗೆ ಬಿಟ್ಟು ಕೊಡಲಾಗಿದೆ. ಇನ್ನು ಪುರುಷ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬಯಲೇ ಅನಿವಾರ್ಯ ಎಂದು ಪ್ರಭಾರಿ ಮುಖ್ಯ ಶಿಕ್ಷಕ ಮಹಾದು ಬಿ.ಎಂ. ಹೇಳುತ್ತಾರೆ.
ಶೌಚಾಲಯ ಕೊರತೆಗೆ ಪಾಲಕರಿಂದಲೂ ಆಕ್ಷೇಪ ನಗರ ಪ್ರದೇಶದಂತೆ ಹೈಟೆಕ್ ಶೌಚಾಲಯ ಅಗತ್ಯ ಸೂಕ್ತ ಶೌಚಾಲಯ ವ್ಯವಸ್ಥೆ ಮಾಡಿದಿದ್ದರೆ ಹೋರಾಟದ ಎಚ್ಚರಿಕೆ
ಶಾಲೆಗಳಲ್ಲಿ ಮಕ್ಕಳಿಗೆ ಕಡ್ಡಾಯವಾಗಿ ಶೌಚಾಲಯ ಇರಬೇಕು ಎಂದು ಸರ್ಕಾರದ ಆದೇಶ ಇದೆ. ನ್ಯಾಯಾಲಯವೂ ಇದನ್ನೇ ಹೇಳಿದೆ. ಆದರೂ ಇಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳಿದ್ದರೂ ಅವರಿಗೆ ಸೂಕ್ತ ಶೌಚಾಲಯ ಸೌಲಭ್ಯ ಕಲ್ಪಿಸಿಲ್ಲರಹೀಂಸಾಬ್ ಸಾಮಾಜಿಕ ಕಾರ್ಯಕರ್ತ
ಮುಖ್ಯ ಶಿಕ್ಷಕರ ಸಭೆಯಲ್ಲೂ ಪ್ರಸ್ತಾಪ ಪಟ್ಟಣದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಈಚೆಗೆ ನಡೆದ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕರ ಸಭೆಯಲ್ಲೂ ಶೌಚಾಲಯ ಕೊರತೆ ಬಗ್ಗೆ ಪ್ರಸ್ತಾಪವಾಗಿದೆ. ಶೌಚಾಲಯ ಇಲ್ಲದ ಕಾರಣ ಅನೇಕ ಪಾಲಕರು ತಮ್ಮ ಹೆಣ್ಣು ಮಕ್ಕಳಿಗೆ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕೆಲ ಪ್ರೌಢ ಶಾಲೆ ಮುಖ್ಯ ಶಿಕ್ಷಕರು ಸಭೆಯ ಗಮನಕ್ಕೆ ತಂದಿದ್ದಾರೆ. ನನಗೂ ಅನೇಕ ಪಾಲಕರು ಈ ವಿಷಯ ತಿಳಿಸಿದ್ದಾರೆ. ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ಶೌಚಾಲಯ ಇರಬೇಕು ಎಂದು ಶಾಸಕ ಪ್ರಭು ಚವಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.