ಭಾಲ್ಕಿ: ತಾಲ್ಲೂಕಿನ ಕೋನಮೇಳಕುಂದಾ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನಲ್ಲಿ ಶುಕ್ರವಾರ ಮುಂಗಾರು ಹಂಗಾಮಿನ ಬಿತ್ತನೆಗಾಗಿ ಸೋಯಾ, ಅವರೆ ಬೀಜ ವಿತರಣೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ ಮಾನಕಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ‘ಈ ಬಾರಿಯ ಮುಂಗಾರು ಆಶಾದಾಯಕವಾಗಿದೆ. ಉತ್ತಮ ಮಳೆಯಾಗುವ ನಿರೀಕ್ಷೆಯಿದ್ದು, ಈಗಾಗಲೇ ರೈತರು ಬೀಜ, ರಸಗೊಬ್ಬರ ಸಂಗ್ರಹಿಸಿ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಗ್ರಾಮದಲ್ಲಿ ರೈತರ ಅನುಕೂಲಕ್ಕಾಗಿ ಬೀಜ ವಿತರಣೆ ಕೇಂದ್ರ ತೆರೆಯಲಾಗಿದೆ. ಹಾಗಾಗಿ ಕೃಷಿ ಇಲಾಖೆ ವತಿಯಿಂದ ಗುಣಮಟ್ಟದ ಸೋಯಾ, ಅವರೆ ಬೀಜ ವಿತರಿಸಲಾಗುತ್ತಿದ್ದು ಎಲ್ಲ ರೈತರು ರಿಯಾಯಿತಿ ದರದಲ್ಲಿ ಸಿಗುವ ಬೀಜ ಪಡೆದುಕೊಳ್ಳಬೇಕು. ಬಿತ್ತನೆಗೆ ಆತುರದ ನಿರ್ಧಾರ ಕೈಗೊಳ್ಳದೆ ಭೂಮಿಯ ತೇವಾಂಶ ಗಮನಿಸಿ ಬಿತ್ತನೆ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು. ಪಿಕೆಪಿಎಸ್ ಕಾರ್ಯದರ್ಶಿ ಸಂಗ್ರಾಮ, ಕೃಷಿ ಇಲಾಖೆ ಅಧಿಕಾರಿಗಳು, ರೈತರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.