ADVERTISEMENT

ಶಿವಾಜಿಯಿಂದ ಸ್ವತಂತ್ರ ಸ್ವರಾಜ್ಯ ಸ್ಥಾಪನೆ

ರಾಜ್ಯಾಭಿಷೇಕದ ವಾರ್ಷಿಕೋತ್ಸವದಲ್ಲಿ ಶಿವಾನಂದ ಜಾಧವ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 15:47 IST
Last Updated 6 ಜೂನ್ 2025, 15:47 IST
ಬಸವಕಲ್ಯಾಣದಲ್ಲಿ ಕರ್ನಾಟಕ ಮರಾಠಾ ನೌಕರರ ಸಂಘ ತಾಲ್ಲೂಕು ಘಟಕದಿಂದ ಶುಕ್ರವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜರ ರಾಜ್ಯಾಭಿಷೇಕದ ವಾರ್ಷಿಕೋತ್ಸವದಲ್ಲಿ ಮಂಠಾಳ ಠಾಣೆ ಸಿಪಿಐ ಕೃಷ್ಣಕುಮಾರ ಪಾಟೀಲ ಪ್ರತಿಮೆಗೆ ಪೂಜೆ ಸಲ್ಲಿಸಿದರು
ಬಸವಕಲ್ಯಾಣದಲ್ಲಿ ಕರ್ನಾಟಕ ಮರಾಠಾ ನೌಕರರ ಸಂಘ ತಾಲ್ಲೂಕು ಘಟಕದಿಂದ ಶುಕ್ರವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜರ ರಾಜ್ಯಾಭಿಷೇಕದ ವಾರ್ಷಿಕೋತ್ಸವದಲ್ಲಿ ಮಂಠಾಳ ಠಾಣೆ ಸಿಪಿಐ ಕೃಷ್ಣಕುಮಾರ ಪಾಟೀಲ ಪ್ರತಿಮೆಗೆ ಪೂಜೆ ಸಲ್ಲಿಸಿದರು   

ಬಸವಕಲ್ಯಾಣ: ‘ಛತ್ರಪತಿ ಶಿವಾಜಿ ಮಹಾರಾಜರು ಸ್ವತಂತ್ರವಾದ ಸ್ವರಾಜ್ಯ ಸ್ಥಾಪಿಸಿ ಪಟ್ಟಕ್ಕೇರಿದರು. ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಪ್ರಾಮುಖ್ಯತೆ ನೀಡಿದರು’ ಎಂದು ಮಹಾರಾಷ್ಟ್ರದ ಖರ್ಡಾ ಗಜಾನಂದ ಮಹಾರಾಜ ಕಾಲೇಜಿನ ಪ್ರಾಚಾರ್ಯ ಶಿವಾನಂದ ಜಾಧವ ಅಭಿಪ್ರಾಯಪಟ್ಟರು.

ನಗರದ ಶಿವಾಜಿ ಮಹಾರಾಜ ಪಾರ್ಕ್‌ನಲ್ಲಿ ಶುಕ್ರವಾರ ಕರ್ನಾಟಕ ಮರಾಠಾ ನೌಕರರ ಸಂಘದ ತಾಲ್ಲೂಕು ಘಟಕದಿಂದ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ರಾಜ್ಯಾಭಿಷೇಕದ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.

‘ಶಿವಾಜಿ ಭೂಮಿಪುತ್ರರಾದ ಕೃಷಿಕರ ಹಿತ ಬಯಸಿದ್ದರಿಂದ ರೈತೇಚಾ ರಾಜಾ ಎಂದೇ ಅವರನ್ನು ಗುರುತಿಸಲಾಗುತ್ತದೆ. ಅನೇಕ ಕೋಟೆಗಳನ್ನು ಗೆದ್ದುಕೊಂಡು ಪ್ರಜಾರಾಜ್ಯ ನಿರ್ಮಿಸಿದ್ದರಿಂದ ನಾಲ್ಕು ಶತಕಗಳ ನಂತರವೂ ಅವರನ್ನು ಇಡೀ ಭಾರತ ನೆನಪಿಸುತ್ತಿದೆ’ ಎಂದರು.

ADVERTISEMENT

ಸಂಪನ್ಮೂಲ ವ್ಯಕ್ತಿ ಬಾಲಕೃಷ್ಣ ಪಾಟೀಲ ಕೊಹಿನೂರ ಮಾತನಾಡಿ, ‘ನೌಕರರ ಸಂಘದಿಂದ ಶೀಘ್ರದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಹಾಗೂ ಸಿಇಟಿ, ನೀಟ್, ಜೆಇಇ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಪಡೆದವರ ಸನ್ಮಾನ ಹಮ್ಮಿಕೊಳ್ಳಲಾಗುತ್ತದೆ. ಎರಡು ವರ್ಷದ ಹಿಂದೆ ಬಡ ಕುಟುಂಬದ ವಿದ್ಯಾರ್ಥಿನಿಗೆ ವೈದ್ಯಕೀಯ ಕೋರ್ಸ್‌ಗಾಗಿ ₹4 ಲಕ್ಷ ದೇಣಿಗೆ ಸಂಗ್ರಹಿಸಿ ನೀಡಲಾಗಿದೆ. ರಚನಾತ್ಮಕ ಕಾರ್ಯಗಳಿಗೆ ಎಲ್ಲರೂ ಸಹಕರಿಸಬೇಕು’ ಎಂದು ಕೇಳಿಕೊಂಡರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಮಹೇಶ ಮುಳೆ ಮಾತನಾಡಿ, ‘ಶಿವಾಜಿ ಮಹಾರಾಜರು ಸ್ವಂತ ಬಲ ಮತ್ತು ಸಾಕಷ್ಟು ಕಷ್ಟಪಟ್ಟು ರಾಜ್ಯಾಭಿಷೇಕ ಮಾಡಿಸಿಕೊಂಡರು’ ಎಂದರು.

ದತ್ತಾತ್ರೇಯ ಪವಾರ ಮಾತನಾಡಿ, ‘ಕಾಶ್ಮೀರದಲ್ಲಿ ಸಾವಿರಾರು ವರ್ಷಗಳಿಂದ ದಾಖಲೆ ಬರೆದಿಡುವ ಕಟ್ಟಿಗೆಯ ಮೇಲೆ ಶಿವಾಜಿಯವರ ರಾಜ್ಯಾಭಿಷೇಕದ ಬಗ್ಗೆಯೂ ಮಾಹಿತಿ ಇದೆ’ ಎಂದರು.

ಮಂಠಾಳ ಠಾಣೆ ಸಿಪಿಐ ಕೃಷ್ಣಕುಮಾರ ಪಾಟೀಲ ಶಿವಾಜಿ ಮಹಾರಾಜರ ಪ್ರತಿಮೆಗೆ ಪೂಜೆ ನೆರವೆರಿಸಿದರು. ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯಕುಮಾರ ಮಾನೆ, ಅನುದಾನಿತ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಅಶೋಕ ರಾಯಪಳ್ಳೆ, ಉಪನ್ಯಾಸಕ ಶ್ರೀಕಾಂತ ಚವಾಣ್, ಆಹಾರ ಸರಬರಾಜು ಇಲಾಖೆ ಅಧಿಕಾರಿ ರಾಮರತನ ದೇಗಲೆ, ಭಾನುದಾಸ ಪಾಟೀಲ, ಮದನ ಪಾಟೀಲ, ದಿಲೀಪ ಬಿರಾದಾರ, ಗಿರಿಧರ ಧಾನೂರೆ, ನೂರ್ ಮಹಮ್ಮದ್, ಲಕ್ಷ್ಮಣ ಬೇಡಗೆ, ಶಾಮ ಕಾರಭಾರಿ, ವಸಂತ ಮಾನೆ, ತಾನಾಜಿ ಬಿರಾದಾರ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.