ADVERTISEMENT

ಶಿವಪುರ: ರಸ್ತೆ, ಚರಂಡಿ ಸಮಸ್ಯೆ

ಅವ್ಯವಸ್ಥೆಯ ಕಾರಣ ದುರ್ನಾತ; ಹೆಚ್ಚಿದ ಸೊಳ್ಳೆ ಕಾಟ

ಮಾಣಿಕ ಆರ್ ಭುರೆ
Published 14 ಸೆಪ್ಟೆಂಬರ್ 2021, 7:18 IST
Last Updated 14 ಸೆಪ್ಟೆಂಬರ್ 2021, 7:18 IST
ಬಸವಕಲ್ಯಾಣ ತಾಲ್ಲೂಕಿನ ಶಿವಪುರದ ಮದೀನಾ ಮಸೀದಿ ಪಕ್ಕದ ರಸ್ತೆಯಲ್ಲಿ ಚರಂಡಿ ಇಲ್ಲದೆ ರಸ್ತೆಯಲ್ಲಿಯೇ ನೀರು ಸಂಗ್ರಹಗೊಂಡಿದೆ
ಬಸವಕಲ್ಯಾಣ ತಾಲ್ಲೂಕಿನ ಶಿವಪುರದ ಮದೀನಾ ಮಸೀದಿ ಪಕ್ಕದ ರಸ್ತೆಯಲ್ಲಿ ಚರಂಡಿ ಇಲ್ಲದೆ ರಸ್ತೆಯಲ್ಲಿಯೇ ನೀರು ಸಂಗ್ರಹಗೊಂಡಿದೆ   

ಬಸವಕಲ್ಯಾಣ: ತಾಲ್ಲೂಕಿನ ಶಿವಪುರದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಇಲ್ಲದ್ದರಿಂದ ಎಲ್ಲೆಡೆ ಮನೆ ಬಳಕೆಯ ನೀರು ಸಂಗ್ರಹಗೊಂಡು ಕೆಸರುಮಯ ವಾತಾವರಣ ಸೃಷ್ಟಿಯಾಗಿದೆ.

ನಾರಾಯಣಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಗ್ರಾಮವಿದೆ. ಮುಖ್ಯವೆಂದರೆ, ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡ ಈ ಊರಲ್ಲೇ ಇದ್ದು, ಅದರ ಸುತ್ತಲಿನ ಓಣಿಗಳಲ್ಲಿ ಕಚ್ಚಾ ರಸ್ತೆಗಳಿವೆ. ಚರಂಡಿ ಇಲ್ಲದೆ ಮನೆ ಬಳಕೆ ಹಾಗೂ ಮಳೆ ನೀರು ಸರಾಗವಾಗಿ ಮುಂದಕ್ಕೆ ಸಾಗುತ್ತಿಲ್ಲ. ಬಸವಕಲ್ಯಾಣ ನಗರ ಕೂಡ ಸಮೀಪದಲ್ಲಿಯೇ ಇದೆ. ಆದ್ದರಿಂದ ಅನೇಕರು ಇಲ್ಲಿ ಮನೆಗಳನ್ನು ಕಟ್ಟಿದ್ದಾರೆ. ಅವುಗಳ ಎದುರಲ್ಲಿ ಗಲೀಜು ನೀರು ಹರಡಿರುತ್ತದೆ.

ರೇವಣಸಿದ್ದೇಶ್ವರ ಜನರಲ್ ಸ್ಟೋರ್‌ನಿಂದ ದಕ್ಷಿಣಕ್ಕೆ ಹೋಗುವ ರಸ್ತೆ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆ ಪಕ್ಕದಿಂದ ಊರೊಳಗೆ ಹೋಗುವ ರಸ್ತೆಯಲ್ಲಿ ಬರೀ ಕೆಂಪು ಮಣ್ಣು ಇದೆ. ಮದೀನಾ ಮಸೀದಿ ಪಕ್ಕದಲ್ಲಿ ಹಾಗೂ ಹಿಂದುಗಡೆಯ ಓಣಿಯಲ್ಲಿನ ರಸ್ತೆಯಲ್ಲಿ ಎಲ್ಲಿ ನೋಡಿದರಲ್ಲಿ ನೀರು ಹರಡಿರುತ್ತದೆ.

ADVERTISEMENT

`ನೀರು ಮನೆಗಳ ಎದುರಲ್ಲೇ ನಿಲ್ಲುತ್ತಿರುವ ಕಾರಣ ಸೊಳ್ಳೆ, ನೊಣಗಳ ಕಾಟ ಹೆಚ್ಚಿದೆ. ಅಲ್ಲಲ್ಲಿ ಗಿಡಗಳು, ಹುಲ್ಲು ಬೆಳೆದಿದೆ. ಮಳೆ ಬಂದಾಗ ಕೆಸರಾಗಿ ಮನೆಗಳಿಂದ ಹೊರ ಬರಬೇಕಾದರೆ ತೊಂದರೆ ಆಗುತ್ತಿದೆ’ ಎಂದು ಪ್ರಮುಖರಾದ ವಿಜಯಕುಮಾರ ಪಾಟೀಲ ಹೇಳಿದ್ದಾರೆ.

`ಮದೀನಾ ಮಸೀದಿ ಎದುರಿನ ರಸ್ತೆ ಅಕ್ಕಪಕ್ಕದಲ್ಲಿ ಪೂರ್ಣ ಪ್ರಮಾಣದ ಚರಂಡಿ ವ್ಯವಸ್ಥೆ ಇಲ್ಲ. ಅಲ್ಲಲ್ಲಿ ಚರಂಡಿ ನಿರ್ಮಿಸಿದರೂ ಪ್ರಯೋಜನ ಆಗಿಲ್ಲ. ಮಸೀದಿ ಪಕ್ಕದಲ್ಲಿ ಹಾಗೂ ಪ್ರಾಥಮಿಕ ಶಾಲೆಯ ಆವರಣಗೋಡೆಗೆ ಹತ್ತಿಕೊಂಡು ನೀರು ಸಂಗ್ರಹಗೊಳ್ಳುತ್ತಿದೆ. ಕೆಲವೆಡೆ ಚರಂಡಿಗಾಗಿ ಅಗೆದ ತಗ್ಗು ಮುಚ್ಚಿದ್ದರಿಂದ ನೀರು ಹೋಗುವುದಕ್ಕೆ ದಾರಿಯೇ ಇಲ್ಲದಂತಾಗಿದೆ’ ಎಂದು ಇಸಾಮುದ್ದೀನ್ ಹಾಗೂ ಇಸ್ಮಾಯಿಲಸಾಬ್ ತಿಳಿಸಿದ್ದಾರೆ.

`ಬಸವೇಶ್ವರ ವೃತ್ತದಿಂದ ಉತ್ತರಕ್ಕೆ ಹೋಗುವ ಕೆಲ ರಸ್ತೆಗಳು ಕೂಡ ಕಚ್ಚಾ ರಸ್ತೆಗಳಾಗಿವೆ. ನಾರಾಯಣಪುರಕ್ಕೆ ಹೋಗುವ ರಸ್ತೆ ಅಕ್ಕಪಕ್ಕದ ಬಡಾವಣೆಯಲ್ಲೂ ಚರಂಡಿ ಹಾಗೂ ಸಿಸಿ ರಸ್ತೆ ಇಲ್ಲದೆ ಸಮಸ್ಯೆ ಆಗಿದೆ. ಊರಿನ ಸಮಗ್ರ ವಿಕಾಸಕ್ಕೆ ಯೋಜನೆ ರೂಪಿಸಬೇಕು’ ಎಂದು ಶಿವಪ್ಪ ಒತ್ತಾಯಿಸಿದ್ದಾರೆ.

ಇಲ್ಲಿನ ಕೆರೆ ದಂಡೆಯಲ್ಲಿ ಶಿವ ಮಂದಿರದ ಸಮೀಪದ ರಸ್ತೆಯಲ್ಲಿ ಉತ್ತಮ ಸೇತುವೆ ನಿರ್ಮಿಸಿ ಹೆಚ್ಚಾದ ಕೆರೆಯ ನೀರು ಬೇರೆಡೆ ಹೋಗುವುದಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವೇ ಕೆರೆಯ ಏರಿ ಎತ್ತರಿಸಬೇಕು. ಕೆರೆಯಲ್ಲಿನ ಹುಲ್ಲು, ಮುಳ್ಳು ಕಂಟೆಗಳನ್ನು ತೆಗೆದು ಸ್ವಚ್ಛಗೊಳಿಸಬೇಕು. ಕೆರೆಯ ಹೂಳು ಕೂಡ ತೆಗೆಯಬೇಕು ಎಂದು ಸಂಗಮ್ಮ ಕೇಳಿಕೊಂಡಿದ್ದಾರೆ.

‘ಗ್ರಾಮದಲ್ಲಿನ ಸಮಸ್ಯೆ ಬಗೆಹರಿಸಲು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಗ್ರಾ.ಪಂ. ಕಾರ್ಯದರ್ಶಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.