ADVERTISEMENT

ಸಾಹಿತ್ಯ ಸೇವೆಗೈದ ಮೇಧಾವಿ ಸೀಮಂಡ್ಸ್

ನಿವೃತ್ತ ಉಪನ್ಯಾಸಕ ಟಿ.ಜೆ.ಹಾದಿಮನಿ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 16:09 IST
Last Updated 27 ನವೆಂಬರ್ 2022, 16:09 IST
ಬೀದರ್‌ನ ಚಿಯೋನ್ ಮೆಥೋಡಿಸ್ಟ್‌ ಚರ್ಚ್‌ ಸಭಾಂಗಣದಲ್ಲಿ ನಡೆದ ಕ್ರೈಸ್ತ ಮಿಷನರಿ ರೆವರೆಂಡ್ ಜೆ.ಟಿ.ಸೀಮಂಡ್ಸ್ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಸಾಹಿತಿ ಪ್ರೊ.ಶಿವಕುಮಾರ ಕಟ್ಟೆ ಉದ್ಘಾಟಿಸಿದರು
ಬೀದರ್‌ನ ಚಿಯೋನ್ ಮೆಥೋಡಿಸ್ಟ್‌ ಚರ್ಚ್‌ ಸಭಾಂಗಣದಲ್ಲಿ ನಡೆದ ಕ್ರೈಸ್ತ ಮಿಷನರಿ ರೆವರೆಂಡ್ ಜೆ.ಟಿ.ಸೀಮಂಡ್ಸ್ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಸಾಹಿತಿ ಪ್ರೊ.ಶಿವಕುಮಾರ ಕಟ್ಟೆ ಉದ್ಘಾಟಿಸಿದರು   

ಬೀದರ್‌: ‘ರೆವರೆಂಡ್ ಜೆ.ಟಿ.ಸೀಮಂಡ್ಸ್ ಬೈಬಲ್ ಸಂದೇಶದ ಸಾರಾಂಶವನ್ನು ಕಥೆಗಳ ರೂಪದಲ್ಲಿ ಪ್ರಕಟಿಸಿದ ಹಾಗೂ ಕನ್ನಡದಲ್ಲಿಯೇ ಹಾಡು ರಚಿಸಿದ ಕನ್ನಡ ಸಾಹಿತ್ಯ ಸೇವೆಗೈದ ಮೇಧಾವಿ’ ಎಂದು ಬೀದರ್ ಡಯಟ್ ಕಾಲೇಜಿನ ನಿವೃತ್ತ ಉಪನ್ಯಾಸಕ ಟಿ.ಜೆ.ಹಾದಿಮನಿ ಬಣ್ಣಿಸಿದರು.

ನಗರದ ಚಿಯೋನ್ ಮೆಥೋಡಿಸ್ಟ್‌ ಚರ್ಚ್‌ ಸಭಾಂಗಣದಲ್ಲಿ ಕ್ರೈಸ್ತ ಮಿಷನರಿ ರೆವರೆಂಡ್ ಜೆ.ಟಿ.ಸೀಮಂಡ್ಸ್ 106ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೀದರ್ ಡಯಟ್ ಕಾಲೇಜಿನ ನಿವೃತ್ತ ಉಪನ್ಯಾಸಕ ಟಿ.ಜೆ.ಹಾದಿಮನಿ ಮಾತನಾಡಿ,‘ರೆವರೆಂಡ್ ಡಾ.ಜೆ.ಟಿ.ಸೀಮಂಡ್ಸ್ ಅವರು ಕನ್ನಡ ಸಾಹಿತ್ಯ ಪ್ರೇಮಿ, ಬಹುಭಾಷಾ ಪಂಡಿತ ಮತ್ತು ಉತ್ತಮ ಸಂಗೀತಗಾರರಾಗಿದ್ದರು. ಸಮಾಜ ಸೇವೆಗೆ ತಮ್ಮನ್ನು ತೊಡಗಿಸಿಕೊಳ್ಳಲು ಅಡ್ಡಿಯಾದ ಭಾಷೆ ಸಮಸ್ಯಗೆ ಸೂಕ್ತ ಪರಿಹಾರವಾಗಿ ಕನ್ನಡವನ್ನು ಕಲಿತರು’ ಎಂದರು.

ADVERTISEMENT

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಸಾಹಿತಿ ಪ್ರೊ.ಶಿವಕುಮಾರ ಕಟ್ಟೆ ಮಾತನಾಡಿ,‘ಮಿಷನರಿಗಳು ತಳ ಸಮುದಾಯದ, ಶೋಷಿತರ ಧ್ವನಿಯಾಗಿ ಅಕ್ಷರ ಅರಿವು ಮತ್ತು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಕಾರ್ಯ ಮಾಡಿವೆ’ ಎಂದು ತಿಳಿಸಿದರು.

ಸಾನಿಧ್ಯ ವಹಿಸಿದ್ದ ಚಿಯೋನ್ ಮೆಥೊಡಿಸ್ಟ್ ಕೇಂದ್ರ ಸಭೆಯ ಜಿಲ್ಲಾ ಮೇಲ್ವಿಚಾರಕ ರೆ.ಎಂ.ಪಿ.ಜಯಪೌಲ್ ಮಾತನಾಡಿ, ‘ಕ್ರೈಸ್ತ ಮಿಷನರಿಗಳು ಧಾರ್ಮಿಕ ಕಾರ್ಯಗಳೊಡನೆ ಶೈಕ್ಷಣಿಕ ಸಾಮಾಜಿಕ ಮತ್ತು ಸಾಹಿತ್ಯಕ ಸೇವೆಯಲ್ಲಿ ಸವೆದಿವೆ’ ಎಂದು ಹೇಳಿದರು.

ಬಿ.ಕೆ.ಸುಂದರಾಜ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಸಭಾಪಾಲಕ ರೆ.ಯೇಸು ಲಕ್ಷ್ಮಣ ಇದ್ದರು. ಟಿ.ಎಂ. ಮಚ್ಚೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಮಣಿ ಸ್ವಾಮಿ ದಾಸ ಸ್ವಾಗತಿಸಿದರು. ಸುದರ್ಶನ ಅಬ್ರಹಾಂ ನಿರೂಪಿಸಿದರು. ಸುನೀಲ ಮಾಳಗೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.