ADVERTISEMENT

ಭಾಲ್ಕಿ: ಮದುವೆ ಸಂಬಂಧ ಜಗಳ; ಸಹೋದರಿಯರ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 11:15 IST
Last Updated 16 ಮಾರ್ಚ್ 2022, 11:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭಾಲ್ಕಿ (ಬೀದರ್): ತಾಲ್ಲೂಕಿನ ಅಟ್ಟರಗಾ ಗ್ರಾಮದ ಒಂದೇ ಕುಟುಂಬದ ಸಹೋದರಿಯರಾದ ಅಂಕಿತಾ (16), ಶ್ರದ್ಧಾ ಗೋವಿಂದರಾವ್ ಮೋರೆ (20) ಎಂಬುವರು ಮಂಗಳವಾರ ಸ್ವಂತ ಹೊಲದ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುಂಜರಗಾ ಗ್ರಾಮದ ಸಂಜುಕುಮಾರ ಜೊತೆ ಹಿರಿಯ ಸಹೋದರಿ ಶ್ರದ್ಧಾಳ ಮದುವೆ ಸಂಬಂಧ ಮಾತುಕತೆ ಆಗಿತ್ತು. ಹುಡುಗನ ತಂದೆ ಮತ್ತು ಕುಟುಂಬ ಸದಸ್ಯರು ಮದುವೆಗೆ ಅಸಮ್ಮತಿ ವ್ಯಕ್ತಪಡಿಸಿದ್ದರು. ಈ ಸಂಬಂಧ ಮಂಗಳವಾರ ಸಂಜುಕುಮಾರ ಮತ್ತು ಆತನ ಕುಟುಂಬ ಸದಸ್ಯರು ಹಾಗೂ ಶ್ರದ್ಧಾಳ ತಂದೆ ಗೋವಿಂದರಾವ್ ಮಧ್ಯೆ ನಡೆದ ಜಗಳದಲ್ಲಿ ಗೋವಿಂದರಾವ್‌ಗೆ ಹೊಡೆಯಲಾಗಿದೆ. ಈ ವಿಷಯದಿಂದ ಮನನೊಂದು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಿರಿಯ ಸಹೋದರಿ ಅಂಕಿತಾ ಮೆಹಕರ್ ಗ್ರಾಮದ ಶಾಲೆಯೊಂದರಲ್ಲಿ 9ನೇ ತರಗತಿ ಮತ್ತು ಹಿರಿಯ ಸಹೋದರಿ ಶ್ರದ್ಧಾ ವಲಂಡಿಯ ಕಾಲೇಜೊಂದರಲ್ಲಿ ಪಿಯು ದ್ವಿತೀಯ ವರ್ಷದಲ್ಲಿ ಓದುತ್ತಿದ್ದಳು. ಮೃತ ಸಹೋದರಿಯರ ತಂದೆ ಗೋವಿಂದರಾವ್ ಮೋರೆ ನೀಡಿರುವ ದೂರಿನ ಮೇರೆಗೆ ಮೆಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ ಎಂದು ಗ್ರಾಮೀಣ ಠಾಣೆ ಸಿಪಿಐ ವೀರಣ್ಣ ದೊಡ್ಡಮನಿ ತಿಳಿಸಿದ್ದಾರೆ.

ADVERTISEMENT

ಈ ಘಟನೆ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಮಾತನಾಡಿದ್ದು, ಆತ್ಮಹತ್ಯೆ ಅನುಮಾನಾಸ್ಪದದಿಂದ ಕೂಡಿದ್ದು, ಪ್ರಕರಣದ ಗಂಭೀರತೆ ಪರಿಗಣಿಸಿ ಘಟನೆ ಹಿಂದೆ ಯಾರದೇ ಕೈವಾಡವಿದ್ದರೂ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಈಶ್ವರ ಖಂಡ್ರೆ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.