ADVERTISEMENT

‘22ಕ್ಕೆ ದಕ್ಷಿಣ ಭಾರತದ ಉದ್ದಿಮೆದಾರರ ಸಭೆ’

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 3:52 IST
Last Updated 4 ಸೆಪ್ಟೆಂಬರ್ 2021, 3:52 IST
ಬೀದರ್ ತಾಲ್ಲೂಕಿನ ಆಣದೂರು ಗ್ರಾಮದಲ್ಲಿ ಶುಕ್ರವಾರ ಎಫ್‍ಎಕ್ಯೂ ಗುಣಮಟ್ಟದ ಉದ್ದು ಮತ್ತು ಹೆಸರು ಖರೀದಿ ಕೇಂದ್ರಕ್ಕೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ ನೀಡಿದರು
ಬೀದರ್ ತಾಲ್ಲೂಕಿನ ಆಣದೂರು ಗ್ರಾಮದಲ್ಲಿ ಶುಕ್ರವಾರ ಎಫ್‍ಎಕ್ಯೂ ಗುಣಮಟ್ಟದ ಉದ್ದು ಮತ್ತು ಹೆಸರು ಖರೀದಿ ಕೇಂದ್ರಕ್ಕೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ ನೀಡಿದರು   

ಜನವಾಡ: ಕೃಷಿ ಉತ್ಪನ್ನಗಳ ರಫ್ತು ವಹಿವಾಟಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 22 ರಂದು ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಉದ್ದಿಮೆದಾರರು ಹಾಗೂ ಪರಿಣಿತರ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಬೀದರ್ ತಾಲ್ಲೂಕಿನ ಆಣದೂರು ಗ್ರಾಮದಲ್ಲಿ ಶುಕ್ರವಾರ ಎಫ್‍ಎಕ್ಯೂ ಗುಣಮಟ್ಟದ ಉದ್ದು ಮತ್ತು ಹೆಸರು ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಹಾಗೂ ರೈತರಿಂದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

ಪ್ರಸ್ತುತ ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಹಾರಧಾನ್ಯ ಬೆಳೆಯ ಲಾಗುತ್ತಿದೆ. ದೇಶಕ್ಕೆ ಅಗತ್ಯ ಇರುವಷ್ಟನ್ನು ಇಟ್ಟುಕೊಂಡು, ಉಳಿದದ್ದನ್ನು ಬೇರೆ ದೇಶಗಳಿಗೆ ರಫ್ತು ಮಾಡಲು ಗಮನ ಹರಿಸಬೇಕಾಗಿದೆ. ಇದರಿಂದ ಕೃಷಿ ಉತ್ಪನ್ನಗಳಿಗೆ ಹೆಚ್ಚು ಬೆಲೆ ದೊರಕಲು ಸಾಧ್ಯವಾಗಲಿದೆ ಎಂದು ಹೇಳಿದರು.

ADVERTISEMENT

ತೈಲ ಬೀಜ ಉತ್ಪಾದನೆಗೆ ಹೆಚ್ಚಿನ ಆದ್ಯತೆ ಕೊಡಲಾಗುವುದು. ಕೃಷಿ ಯೋಜನೆಗಳು ಹಾಗೂ ತಂತ್ರಜ್ಞಾನಗಳನ್ನು ಕಟ್ಟ ಕಡೆಯ ರೈತನಿಗೂ ತಲುಪಿಸುವ ಗುರಿ ಕೇಂದ್ರ ಸರ್ಕಾರದ್ದಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ರೈತರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಿವೆ ಎಂದು ಹೇಳಿದರು.

ತೊಗರಿ ಬೆಳೆಗಾರರಿಗೆ ಅನುಕೂಲ: ಕಲಬುರ್ಗಿ ಸೇರಿದಂತೆ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ರೈತರು ತೊಗರಿ ಬೆಳೆಯುತ್ತಾರೆ. ಹೀಗಾಗಿ ತೊಗರಿ ಬೆಳೆಗಾರರಿಗೂ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುಕೂಲ ಕಲ್ಪಿಸಿಕೊಡಲಾಗುವುದುಎಂದರು.

ರೈತರ ಮನವಿ: ಬೀದರ್ ಜಿಲ್ಲೆಯಲ್ಲಿ ಹಸಿ ಶುಂಠಿಯನ್ನು ಹೆಚ್ಚಿನ ರೈತರು ಬೆಳೆಯುತ್ತಾರೆ. ಕಬ್ಬು ಬಿಟ್ಟರೆ ಹಸಿ ಶುಂಠಿಯು ಎರಡನೇ ಮಹತ್ವದ ವಾಣಿಜ್ಯ ಬೆಳೆಯಾಗಿದೆ. ಹೀಗಾಗಿ ಬೀದರ್ ಜಿಲ್ಲೆಯಲ್ಲಿ ಕೂಡ ಕೇಂದ್ರ ಸರ್ಕಾರದಿಂದ ಹಸಿ ಶುಂಠಿಗೆ ಖರೀದಿ ಕೇಂದ್ರವನ್ನು ತೆರೆಯಬೇಕು ಎಂದು ಜಿಲ್ಲೆಯ ಕೆಲವು ರೈತರು
ಮನವಿ ಮಾಡಿದರು.

ಗೋದಾಮು ವ್ಯವಸ್ಥೆ ಮಾಡಿ: ಜಿಲ್ಲೆಯಲ್ಲಿ ಒಟ್ಟು 171 ಸೊಸೈಟಿಗಳಿವೆ. ತೊಗರಿ, ಉದ್ದು, ಹೆಸರು ಖರೀದಿಸಿದ ಬಳಿಕ ಅದನ್ನು ಸಂಗ್ರಹಿಸಿಡಲು ಅನುಕೂಲವಾಗುವಂತೆ ಜಿಲ್ಲೆಯ ಎಲ್ಲ 171 ಸೋಸೈಟಿಗಳಲ್ಲಿ ಗೋದಾಮು ವ್ಯವಸ್ಥೆಯನ್ನು ಮಾಡಿಸಿಕೊಡಬೇಕು ಎಂದು ರೈತರು ಸಚಿವರಿಗೆ ಮನವಿ ಮಾಡಿಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್, ಶಾಸಕ ಬಂಡೆಪ್ಪ ಕಾಶೆಂಪೂರ್, ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.