ADVERTISEMENT

ಬಸವಕಲ್ಯಾಣ | 'ಕಸಾಯಿಖಾನೆಗೆ ಜಾನುವಾರು ಮಾರಾಟ ಸಲ್ಲದು'

ಗ್ರಾಮಸ್ಥರಿಗೆ ಪ್ರತಿಜ್ಞೆಗೈಯಲು ಶಾಸಕ ಶರಣು ಸಲಗರ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 6:31 IST
Last Updated 2 ಆಗಸ್ಟ್ 2025, 6:31 IST
ಬಸವಕಲ್ಯಾಣ ತಾಲ್ಲೂಕಿನ ಜಾಫರವಾಡಿ ಗ್ರಾಮದಲ್ಲಿ ಶುಕ್ರವಾರ ನಡೆದ ಹನುಮಾನ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮದಲ್ಲಿ ಹಾರಕೂಡ ಚನ್ನವಿರ ಶಿವಾಚಾರ್ಯರು ದೀಪ ಬೆಳಗಿಸಿದರು. ಶಾಸಕ ಶರಣು ಸಲಗರ ಇದ್ದರು 
ಬಸವಕಲ್ಯಾಣ ತಾಲ್ಲೂಕಿನ ಜಾಫರವಾಡಿ ಗ್ರಾಮದಲ್ಲಿ ಶುಕ್ರವಾರ ನಡೆದ ಹನುಮಾನ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮದಲ್ಲಿ ಹಾರಕೂಡ ಚನ್ನವಿರ ಶಿವಾಚಾರ್ಯರು ದೀಪ ಬೆಳಗಿಸಿದರು. ಶಾಸಕ ಶರಣು ಸಲಗರ ಇದ್ದರು    

ಬಸವಕಲ್ಯಾಣ: ‘ಆಕಳು, ಎತ್ತುಗಳು ಸೇರಿದಂತೆ ಯಾವುದೇ ಜಾನುವಾರು ಕಸಾಯಿಖಾನೆಗೆ ಮಾರಾಟ ಮಾಡುವುದಿಲ್ಲ’ ಎಂದು ಗ್ರಾಮಸ್ಥರು ಪ್ರತಿಜ್ಞೆಗೈಯಬೇಕು ಎಂದು ಶಾಸಕ ಶರಣು ಸಲಗರ ಸಲಹೆ ನೀಡಿದರು.

ತಾಲ್ಲೂಕಿನ ಜಾಫರವಾಡಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಹನುಮಾನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹೊಲ ಊಳಿ ಅನ್ನ ನೀಡುವ, ಹಾಲು ಕೊಡುವ ಜಾನುವಾರುಗಳನ್ನು ಕಸಾಯಿಖಾನೆಗೆ ಕಳಿಸುವವರಿಗೆ ಜೀವನದಲ್ಲಿ ನೆಮ್ಮದಿ ಸಿಗಲಾರದು. ಹನುಮಾನ ದೇವರು ಇಂತಹದ್ದನ್ನು ಒಪ್ಪುವುದಿಲ್ಲ. ನಾನು ಎರಡು ಸಲ ಶಾಸಕನಾಗಲು ಈ ಗ್ರಾಮಸ್ಥರು ಸಾಕಷ್ಟು ಶ್ರಮಿಸಿದ್ದಾರೆ. ಪಾದಯಾತ್ರೆ ನಡೆಸಿದ್ದರು. ಆದ್ದರಿಂದ ಇಲ್ಲಿನ ಅಭಿವೃದ್ಧಿಗೆ ಸತತವಾಗಿ ಪ್ರಯತ್ನಿಸುತ್ತೇನೆ’ ಎಂದರು.

ADVERTISEMENT

ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ‘ಧರ್ಮ ಮಾರ್ಗದಲ್ಲಿ ನಡೆದರೆ ಜೀವನದಲ್ಲಿ ಸುಖ, ಶಾಂತಿ ಲಭಿಸುತ್ತದೆ’ ಎಂದರು.

ಮಳಖೇಡ ಕಾರ್ತಿಕೇಶ್ವರ ಶಿವಾಚಾರ್ಯರು ಮಾತನಾಡಿ, ‘ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ನಡೆಯಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು' ಎಂದರು.

ಹಾರಕೂಡ ಚನ್ನವೀರ ಶಿವಾಚಾರ್ಯರು ದೀಪ ಬೆಳಗಿಸಿದರು. ಹಿರೇನಾಗಾಂವ ಜಯಶಾಂತಲಿಂಗ ಸ್ವಾಮೀಜಿ, ಬಬಲಾದ ಗುರುಪಾದಲಿಂಗ ಸ್ವಾಮೀಜಿ, ಶಿವಪ್ರಸಾದ ಸ್ವಾಮೀಜಿ, ಮುಖಂಡರಾದ ಜಗನ್ನಾಥ ಪಾಟೀಲ ಮಂಠಾಳ, ಬಾಬು ಹೊನ್ನಾನಾಯಕ್, ದಿಲೀಪ ಗಿರಗಂಟೆ, ನಿರಂಜನಪ್ಪ ಬಿರಾದಾರ, ಮಹಾರಾಜಪ್ಪ ಮುಳೆ, ಶಾಂತವಿಜಯ ಪಾಟೀಲ, ಸುರೇಶ ಮುಳೆ, ಅಂಬಾರಾಯ ಮೇತ್ರೆ, ಚಂದ್ರಕಾಂತ ಮುಳೆ, ಉದಯಕುಮಾರ ಮುಳೆ, ಮಲ್ಲಿಕಾರ್ಜುನ ಬಂಡೆ, ಮಲ್ಲಿಕಾರ್ಜುನ ಆಲಗೂಡೆ, ಶಾಸ್ತ್ರೀ ಬಿರಾದಾರ, ಅಣವೀರ ಬಿರಾದಾರ, ಬಲವಂತ ಚಾಕೂರೆ, ಹಣಮಂತ ದಾಸೂರೆ, ರಮೇಶ ಗೊಂದಳಿ ಉಪಸ್ಥಿತರಿದ್ದರು. ಕಾರ್ತಿಕಯ್ಯ ಯಲ್ಲದಗುಂಡಿ, ಶರಣಪ್ಪ ಸುಂಠಾಣ ಸಂಗೀತ ಪ್ರಸ್ತುತ ಪಡಿಸಿದರು. 

ಊರ ಹೆಣ್ಣುಮಕ್ಕಳ ಸಮಾವೇಶ ದೇವಸ್ಥಾನದ ಕಳಸಕ್ಕೆ ಬೇರೆ ಗ್ರಾಮಗಳಿಗೆ ಮದುವೆ ಮಾಡಿಕೊಟ್ಟಿರುವ ಊರಿನ ಎಲ್ಲ ಮಹಿಳೆಯರು ದೇಣಿಗೆ ಕೊಟ್ಟಿದ್ದರು. ಹೀಗಾಗಿ ಈ ಎಲ್ಲ ಮಹಿಳೆಯರು ಕುಟುಂಬ ಸಮೇತರಾಗಿ ಪಾಲ್ಗೊಂಡಿದ್ದರಿಂದ ಕಾರ್ಯಕ್ರಮ ಮಹಿಳಾ ಸಮಾವೇಶದಂತೆ ಕಂಡು ಬಂತು. ಮೂರ್ತಿ ಮೆರವಣಿಗೆಯಲ್ಲೂ ಎಲ್ಲರೂ ಪಾಲ್ಗೊಂಡಿದ್ದರು. ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ‘ಪ್ರತಿ ವರ್ಷದ ಈ ದಿನದಂದು ದೇವಸ್ಥಾನದ ಜಾತ್ರೆ ಹಮ್ಮಿಕೊಳ್ಳಬೇಕು’ ಎಂದು ಶಾಸಕ ಶರಣು ಸಲಗರ ಸಲಹೆ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.