ADVERTISEMENT

ಸನ್ಮಾನ ಸಮಾರಂಭಕ್ಕೆ ಖರ್ಗೆ, ಅಜರುದ್ದಿನ್

ಕಬುರ್ಗಿಯ ಕೆಬಿಎನ್ ಸಂಸ್ಥೆಗೆ ವಿಶ್ವವಿದ್ಯಾಲಯ ಮಂಜೂರು

​ಪ್ರಜಾವಾಣಿ ವಾರ್ತೆ
Published 13 ಜನವರಿ 2019, 14:17 IST
Last Updated 13 ಜನವರಿ 2019, 14:17 IST
ಸೈಯದ್ ಶಾ ಗೇಸುದರಾಜ್ ಹುಸೇನಿ
ಸೈಯದ್ ಶಾ ಗೇಸುದರಾಜ್ ಹುಸೇನಿ   

ಬೀದರ್‌: ಕಲಬುರ್ಗಿಯ ಖಾಜಾ ಬಂದೇ ನವಾಜ್ ಶಿಕ್ಷಣ ಸಂಸ್ಥೆಗೆ ವಿಶ್ವವಿದ್ಯಾಲಯದ ಮಾನ್ಯತೆ ದೊರೆತ ಪ್ರಯುಕ್ತ
ಹೈದರಾಬಾದ್ ಕರ್ನಾಟಕ ಪಾಲಿಟಿಕಲ್ ಫೋರಂ ವತಿಯಿಂದ ನಗರದ ಹಳೆಯ ಸರ್ಕಾರಿ ಆಸ್ಪತ್ರೆ ಸಮೀಪದ ಮೈದಾನದಲ್ಲಿ ಇದೇ 19 ರಂದು ಸಂಜೆ 7.30 ಗಂಟೆಗೆ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿ ಸೈಯದ್ ಶಾ ಗೇಸುದರಾಜ್ ಹುಸೇನಿ ಅಲಿಯಾಸ್ ಖುಸ್ರೊ ಹುಸೇನಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.

ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜರುದ್ದಿನ್, ಮಾಜಿ ಸಂಸದ ಮೌಲಾನಾ ಒಬೆದುಲ್ಲಾ ಖಾನ್ ಆಜ್ಮಿ, ನೀಲಂಗಾದ ದರ್ಗಾ ಹೈದರ್ ವಲಿ ಸಜ್ಜಾದೆ ಸೈಯದ್ ಹೈದರ್ ಪಾಶಾ ಖಾದ್ರಿ ಪಾಲ್ಗೊಳ್ಳಲಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ರಹೀಂ ಖಾನ್, ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ. ನಾರಾಯಣರಾವ್, ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶೋಕರಾವ್ ನೀಲಂಗೆಕರ್, ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್, ಅರವಿಂದ ಅರಳಿ, ಡಾ. ಚಂದ್ರಶೇಖರ ಪಾಟೀಲ, ಶಾಸಕರಾದ ಅಜಯಸಿಂಗ್, ಉಮೇಶ ಜಾಧವ್, ಕನೀಸ್ ಫಾತಿಮಾ, ಮಾಜಿ ಸಂಸದರು, ಮಾಜಿ ಶಾಸಕರು, ವಿಧಾನ ಪರಿಷತ್ ಮಾಜಿ ಸದಸ್ಯರು ಹಾಗೂ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ADVERTISEMENT

ಬೀದರ್‌ನ ಮುಖ್ಯ ಕಾಜಿ ಲತಿಫೊದ್ದಿನ್ ಖುಸ್ರೊ ಅಧ್ಯಕ್ಷತೆ ವಹಿಸಲಿದ್ದಾರೆ

ಸೈಯದ್ ಶಾ ಗೇಸುದರಾಜ್ ಹುಸೇನಿ ಅಲಿಯಾಸ್ ಖುಸ್ರೊ ಹುಸೇನಿ ಅವರು ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ನರ್ಸರಿಯಿಂದ ಸ್ನಾತಕೋತ್ತರ ಪದವಿ, ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕಾಲೇಜುಗಳನ್ನು ಆರಂಭಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಕರ್ನಾಟಕ ರಾಜ್ಯೋತ್ಸವ, ಅಲಿಗಡ ವಿಶ್ವವಿದ್ಯಾಲಯದ ಪ್ರಶಸ್ತಿ ಸೇರಿದಂತೆ ಅವರಿಗೆ ಅನೇಕ, ಪ್ರಶಸ್ತಿ ಸನ್ಮಾನಗಳು ಸಂದಿವೆ. ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಯನ್ನು ಪರಿಗಣಿಸಿ ಇದೀಗ ಅವರ ಸಂಸ್ಥೆಗೆ ವಿಶ್ವವಿದ್ಯಾಲಯ ಮಂಜೂರಾಗಿದೆ. ಈ ಪ್ರಯುಕ್ತ ಅವರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಫೋರಂನ ಸಂಚಾಲಕ ಡಾ. ಮಕ್ಸೂದ್ ಚಂದಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.