ಹುಮನಾಬಾದ್: ಪುರಸಭೆಯಲ್ಲಿ ಸಾಮಾನ್ಯ ಸಭೆ ಕರೆಯುತ್ತಿಲ್ಲ, ಮೂಲ ಸೌಕರ್ಯಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇಂತಹ ಪುರಸಭೆ ಅಧ್ಯಕ್ಷರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ ಪುರಸಭೆ ಸದಸ್ಯರಿಂದ ಪುರಸಭೆ ಆವರಣದಲ್ಲಿ ಬುಧವಾರ ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗಿತ್ತು.
ಈ ಬಗ್ಗೆ ಮನವಿ ಪತ್ರವನ್ನು ತಹಶೀಲ್ದಾರ್ ಅಂಜುಂ ತಬಸುಮ್ ಅವರ ಮೂಲಕ ಬಸವಕಲ್ಯಾಣ ಸಹಾಯಕ ಆಯುಕ್ತ ಮುಕುಲ್ ಜೈನ್ ಅವರಿಗೆ ಸಲ್ಲಿಸಲಾಯಿತು.
ನಂತರ ಪುರಸಭೆ ಸದಸ್ಯ ರಮೇಶ ಕಲ್ಲೂರ್ ಮಾತನಾಡಿ, ಪುರಸಭೆ ವ್ಯಾಪ್ತಿಯ ಬಹುತೇಕ ಬಡಾವಣೆಗಳಲ್ಲಿ ಸಿಸಿ ರಸ್ತೆ, ಚರಂಡಿ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಬಗ್ಗೆ ಪುರಸಭೆ ಅಧ್ಯಕ್ಷರು ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ. ಇಲ್ಲಿನ ಕೆಲ ಬಡಾವಣೆಗಳಲ್ಲಿ ಯಾವುದೇ ಖಾತೆಗಳನ್ನು ನೀಡುತ್ತಿಲ್ಲ. ಈ ಕುರಿತು ಅನೇಕ ಬಾರಿ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆಯಲ್ಲಿ ಸರಿಯಾಗಿ ಸಾಮಾನ್ಯ ಸಭೆಗಳನ್ನು ಸಹ ಕರೆಯುತ್ತಿಲ್ಲ. ಮೂಲಭೂತ ಸೌಕರ್ಯಗಳು ಒದಗಿಸುವಲ್ಲಿ ಪುರಸಭೆ ವಿಫಲವಾಗಿದ್ದು, ಅಧ್ಯಕ್ಷರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ವಿಜಯ್ ಕುಮಾರ್ ದುರ್ಗಾದ್, ಸುನೀಲ ಪಾಟೀಲ, ವೀರೇಶ್ ಸೀಗಿ, ಧನಲಕ್ಷ್ಮಿ ಗೋಡೆಖೆ, ಭೀಮಾಬಾಯಿ ಭೀಮರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.