ಬಿಜೆಪಿ ಶಾಸಕ ಶೈಲೇಂದ್ರ ಬೆಲ್ದಾಳೆ, ಸಚಿವ ಈಶ್ವರ್ ಖಂಡ್ರೆ
ಬೀದರ್: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ರಾತ್ರಿ ಏರ್ಪಡಿಸಿದ್ದ ಬಾಬಾ ಸಾಹೇಬರ 134ನೇ ಜಯಂತಿ ಕಾರ್ಯಕ್ರಮವು ಬಿಜೆಪಿ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರ ಮಾತಿನ ಜಟಾಪಟಿಗೆ ಸಾಕ್ಷಿಯಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಖಂಡ್ರೆಯವರು, ‘ಡಾ.ಅಂಬೇಡ್ಕರ್ ಅವರು ಈ ದೇಶಕ್ಕೆ ಕೊಟ್ಟ ಕೊಡುಗೆ ಅನನ್ಯ. ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮಹತ್ವ ತಿಳಿಸಿದರು. ಗ್ಯಾರಂಟಿ ಯೋಜನೆಗಳ ಮೂಲಕ ದುರ್ಬಲ ವರ್ಗದವರನ್ನು ಮೇಲೆತ್ತುವ ಕೆಲಸ ಸರ್ಕಾರ ಮಾಡುತ್ತಿದೆ. ನೀವು ಕೂಡ ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದ ಸಾಗರ್ ಖಂಡ್ರೆ ಅವರನ್ನು ಗೆಲ್ಲಿಸಿ ಬಲ ತುಂಬಿದ್ದೀರಿ. ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿ ಮಾತು ಮುಗಿಸಿದರು.
ಬಳಿಕ ಮಾತನಾಡಿದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಅವರು, ಉಸ್ತುವಾರಿ ಸಚಿವರು ಚುನಾವಣಾ ಭಾಷಣ ಮಾಡಿದ್ದಾರೆ. ಯಾರೂ ಅನ್ಯಥಾ ಭಾವಿಸಬಾರದು. ಇನ್ನೂ ಚುನಾವಣೆಗೆ ಮೂರು ವರ್ಷಗಳಿವೆ. ಜಿಲ್ಲೆಗೆ ನಾಳೆ (ಏ.16) ಮುಖ್ಯಮಂತ್ರಿ ಬರಲಿದ್ದಾರೆ ಅವರ ಎದುರು ಈ ವಿಷಯ ಹೇಳಬಹುದಿತ್ತು. ಇಂದು ಬಹಳ ಮಹತ್ವದ ದಿನ. ಬಾಬಾ ಸಾಹೇಬರ ಐದು ಪಂಚಕ್ಷೇತ್ರಗಳಿವೆ. ಅವುಗಳನ್ನು ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿಪಡಿಸಿದ್ದಾರೆ ಎಂದು ಹೇಳಿದರು.
ಶೈಲೇಂದ್ರ ಬೆಲ್ದಾಳೆ ಅವರು ಭಾಷಣ ಮುಗಿಸಿ ತಮ್ಮ ಆಸನದ ಮೇಲೆ ಹೋಗಿ ಕುಳಿತರು. ಅವರ ಪಕ್ಕದಲ್ಲೇ ಕುಳಿತಿದ್ದ ಸಚಿವ ಖಂಡ್ರೆ ಅವರು ಪೋಡಿಯಂಗೆ ಬಂದು, ‘
ಶೈಲೇಂದ್ರ ಕೆ. ಬೆಲ್ದಾಳೆ ಅವರು, ನಾನು ರಾಜಕೀಯ ಭಾಷಣ ಮಾಡಿದ್ದೇನೆ ಎಂದು ಹೇಳಿದ್ದಾರೆ. ಇದು ಒಂದು ಪವಿತ್ರ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ನಾನು ಯಾರ ಹೆಸರು ತೆಗೆದುಕೊಂಡಿಲ್ಲ. ಸತ್ಯ ಇರುವುದನ್ನು ಹೇಳಿದ್ದೇನೆ. ಸತ್ಯ ಹೇಳಿದರೆ ಯಾಕೆ ಹೆಗಲು ಮುಟ್ಟಿಕೊಂಡು ನೋಡಬೇಕು. ನಿಮಗೆ ಏನಾದರೂ ಹೇಳಿದ್ದೇನಾ? ನಾನು ಇನ್ನೂ ಕೆಲವು ವಿಚಾರಗಳನ್ನು ಹೇಳಿದರೆ ನೀವು ವೇದಿಕೆಯಿಂದ ನಿರ್ಗಮಿಸುತ್ತೀರಿ. ವಿವಾದದ ಹೇಳಿಕೆ ಕೊಟ್ಟಿಲ್ಲ’ ಎಂದು ತಮ್ಮ ಭಾಷಣವನ್ನು ಸಮರ್ಥಿಸಿಕೊಂಡರು.
‘ಈ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ನಮ್ಮ ಸರ್ಕಾರ ಏನು ಮಾಡಿದೆ, ನಾವೇನೂ ಕಾರ್ಯಕ್ರಮ ಕೊಡುತ್ತಿದ್ದೇವೆ ಎನ್ನುವುದರ ಬಗ್ಗೆ ಹೇಳಿದ್ದೇನೆ. ಕೊಟ್ಟ ಭರವಸೆ ಈಡೇರಿಸಿದ್ದೇವೆ ಎಂದಿದ್ದೇನೆ. ಅದು ಹೇಳುವುದು ನನ್ನ ಕರ್ತವ್ಯ ಹಾಗೂ ಧರ್ಮ. ಅದನ್ನು ಹೇಳಿದ್ದೇನೆ. ಇನ್ನೂ ನೀವು ಹೊಸದಾಗಿ ಶಾಸಕರಾಗಿದ್ದೀರಿ. ಯಾವ ವೇದಿಕೆ ಮೇಲೆ ಏನು ಹೇಳಬೇಕು, ಮಾತನಾಡಬೇಕು ಎಂಬುದನ್ನು ಅರ್ಥ ಮಾಡಿಕೊಂಡು ಮಾತನಾಡಬೇಕು ಎಂದು ಸಲಹೆ ನೀಡಲು ಬಯಸುತ್ತೇನೆ. ಇದನ್ನು ಮತ್ತಷ್ಟು ಬೆಳೆಸಲು ಹೋಗುವುದಿಲ್ಲ’ ಎಂದು ಮಾತು ಮುಗಿಸಿದರು. ಬೆಲ್ದಾಳೆ ಪಕ್ಕದ ಆಸನದ ಮೇಲೆ ಆಸೀನರಾದ ಖಂಡ್ರೆಯವರು, ಪುನಃ ಬೆಲ್ದಾಳೆ ಅವರಿಗೆ, ಯೋಚಿಸಿ ಮಾತನಾಡಬೇಕು ಎಂದು ಹೇಳಿದರು. ಪಕ್ಕದ ಆಸನದಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್ ಆಸೀನರಾಗಿದ್ದರು. ಈ ಘಟನೆ ನಡೆದ ಕೆಲ ನಿಮಿಷಗಳ ನಂತರ ಬೆಲ್ದಾಳೆ ಅವರು ವೇದಿಕೆಯಿಂದ ನಿರ್ಗಮಿಸಿದರು. ಬಳಿಕ ಕಾರ್ಯಕ್ರಮ ಮುಂದುವರೆಯಿತು.
ಮುಂಡರಗಿ ತೋಂಟದಾರ್ಯ ಮಠದ ನಿಜಗುಣಪ್ರಭು ಸ್ವಾಮೀಜಿ, ಆಣದೂರ ವೈಶಾಲಿ ನಗರದ ಭಂತೆ ಜ್ಞಾನಸಾಗರ, ನಗರಸಭೆ ಅಧ್ಯಕ್ಷ ಮುಹಮ್ಮದ್ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಸಿಂಧು, ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಬ್ದುಲ್ ಖದೀರ್ ಹಾಜರಿದ್ದರು. ನೂರಾರು ಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೂ ಮುನ್ನ ಸಂವಿಧಾನದ ಪೀಠಿಕೆ ಓದಲಾಯಿತು. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.