ADVERTISEMENT

ಬೀದರ್ ಜಿಲ್ಲೆಯಲ್ಲಿ 20 ಲಕ್ಷ ಸಸಿ ನೆಡುವ ಗುರಿ

ಜಿಲ್ಲಾ ಪಂಚಾಯಿತಿ ಸಿಇಒ ಹೇಳಿಕೆ ಗ್ಯಾನೇಂದ್ರಕುಮಾರ ಗಂಗ್ವಾರ್

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 16:10 IST
Last Updated 5 ಜೂನ್ 2020, 16:10 IST
ಬೀದರ್ ತಾಲ್ಲೂಕಿನ ಮಿರ್ಜಾಪುರ (ಎಂ) ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ್ ಅವರು ಶುಕ್ರವಾರ ಸಸಿ ನೆಟ್ಟು ಸಾರ್ವಜನಿಕರ ಮನೆಯಂಗಳಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಬೀದರ್ ತಾಲ್ಲೂಕಿನ ಮಿರ್ಜಾಪುರ (ಎಂ) ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ್ ಅವರು ಶುಕ್ರವಾರ ಸಸಿ ನೆಟ್ಟು ಸಾರ್ವಜನಿಕರ ಮನೆಯಂಗಳಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು   

ಜನವಾಡ: ‘ಈ ವರ್ಷ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 20 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ತೋಟಗಾರಿಕೆ ಇಲಾಖೆ ಹಾಗೂ ಕಾಡವಾದ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಬೀದರ್ ತಾಲ್ಲೂಕಿನ ಮಿರ್ಜಾಪುರ (ಎಂ) ಗ್ರಾಮದಲ್ಲಿ ಶುಕ್ರವಾರ ನಡೆದ ಸಾರ್ವಜನಿಕರ ಮನೆಯಂಗಳದಲ್ಲಿ ತೋಟಗಾರಿಕೆ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ನಾವು ಪ್ರತಿದಿನ ಹೊರಗಡೆ ಹಣ್ಣು, ಕರಿಬೇವು, ನುಗ್ಗೆಕಾಯಿಯಂತಹ ತರಕಾರಿ ಖರೀದಿಸುವಾಗ ಆಗುವ ಖರ್ಚಿನ ಬಗ್ಗೆ ಯೋಚಿಸಬೇಕು. ನಮ್ಮ ಮನೆಯ ಅಂಗಳದಲ್ಲೇ ಮಾವು, ಲಿಂಬೆಹಣ್ಣು, ಕರಿಬೇವು ಗಿಡಗಳನ್ನು ಬೆಳೆಸಿದರೆ ತುಸು ಆರ್ಥಿಕ ಅನುಕೂಲವಾಗುತ್ತದೆ. ಈ ಬಗ್ಗೆ ಸಾರ್ವಜನಿಕರು ಯೋಚಿಸಬೇಕು’ ಎಂದು ಹೇಳಿದರು.

ADVERTISEMENT

‘ಕೈಗಾರಿಕೆಗಳು ಸೂಸುವ ಹೊಗೆ ಹಾಗೂ ಮನುಷ್ಯನ ಸ್ವಾರ್ಥ ಬುದ್ಧಿಯಿಂದಾಗಿ ಪರಿಸರಕ್ಕೆ ಸಾಕಷ್ಟು ಹಾನಿಯಾಗುತ್ತಲೇ ಇದೆ. ಇದು ಕೊನೆಯಾಗಬೇಕು. ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದರು.

ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಾವಗೆ ಮಾತನಾಡಿ, ಕರಿಬೇವು ಹೆಚ್ಚಿನ ಕಾಲ ಅಡುಗೆ ಕೆಡದ ಹಾಗೆ ನೋಡಿಕೊಳ್ಳುತ್ತದೆ. ಹೀಗಾಗಿ ಪರಿಸರ ಸ್ನೇಹಿ ಮತ್ತು ಆಯುರ್ವೇದ ಗುಣಗಳನ್ನು ಹೊಂದಿದ ಸಸಿಗಳನ್ನು ಸಾರ್ವಜನಿಕರು ತಮ್ಮ ಮನೆಯ ಮುಂದೆ ಬೆಳೆಸಲು ಆಸಕ್ತಿ ವಹಿಸಬೇಕು’ ಎಂದು ಸಲಹೆ ಮಾಡಿದರು.

ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಿವಪುತ್ರ ಶಂಭು ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಧನರಾಜ ಬೋರಾಳೆ ಇದ್ದರು.

ಪರಿಸರ ಜೀವನ ಜ್ಯೋತಿ: ರಾಮಚಂದ್ರನ್ ಬಣ್ಣನೆ

ಬೀದರ್: ‘ಪರಿಸರ ನಮ್ಮೆಲ್ಲರ ಜೀವನ ಜ್ಯೋತಿ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಹೇಳಿದರು.

ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಸಸಿಗಳನ್ನು ನೆಟ್ಟು ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಅರಣ್ಯೀಕರಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಅರಣ್ಯ ಇಲಾಖೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅತ್ಯುತ್ತಮವಾಗಿ ಮಾಡಬೇಕು. ಸಾರ್ವಜನಿಕರು, ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಬೇಕು. ಗಿಡಗಳನ್ನು ನೆಟ್ಟು ಬೆಳೆಸಲು ಪ್ರೇರಣೆ ನೀಡಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ, ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ ಎಸ್. ಅವರು ಸಸಿಗಳನ್ನು ನೆಟ್ಟರು.

ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಚಾರ್ಯ ಶಿವಶಂಕರ ಟೋಕರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಡಿ.ಮೈನುದ್ದೀನ್, ವಲಯ ಅರಣ್ಯಾಧಿಕಾರಿ ಪ್ರವೀಣಕುಮಾರ ಮೋರೆ, ಉಪ ವಲಯ ಅರಣ್ಯಾಧಿಕಾರಿ ಸುರೇಶ, ಅರಣ್ಯ ರಕ್ಷಕರಾದ ಶ್ರೀಶೈಲ, ಶಾಂತಕುಮಾರ, ನವನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.