ADVERTISEMENT

ಬೀದರ್: ಡಬಲ್ ಡಿಗ್ರಿ ವಿದ್ಯಾರ್ಥಿ ಈಗ ಗ್ರಾಮ ಪಂಚಾಯಿತಿ ಸದಸ್ಯ

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 4:45 IST
Last Updated 6 ಜನವರಿ 2021, 4:45 IST
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿಜೇತ, ಔರಾದ್ ತಾಲ್ಲೂಕಿನ ಬೋರಗಿ ಗ್ರಾಮದ ವಿದ್ಯಾರ್ಥಿ ಜೈಪ್ರಕಾಶ ಅಷ್ಟೂರೆ ಅವರನ್ನು ಯುವಕರು ಗೌರವಿಸಿದರು
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿಜೇತ, ಔರಾದ್ ತಾಲ್ಲೂಕಿನ ಬೋರಗಿ ಗ್ರಾಮದ ವಿದ್ಯಾರ್ಥಿ ಜೈಪ್ರಕಾಶ ಅಷ್ಟೂರೆ ಅವರನ್ನು ಯುವಕರು ಗೌರವಿಸಿದರು   

ಔರಾದ್: ತಾಲ್ಲೂಕಿನ ಬೋರಗಿ ಗ್ರಾಮದ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಯೊಬ್ಬರು ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ.

ಎಂ.ಎ. ಕನ್ನಡ ಹಾಗೂ ಸಾಮಾಜಿಕ ಕಾರ್ಯ (ಎಂಎಸ್‌ಡಬ್ಲ್ಯು) ಸ್ನಾತಕೋತ್ತರ ಪದವಿ ಪಡೆದ ಜೈಪ್ರಕಾಶ ಅಷ್ಟೂರೆ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದು ಗ್ರಾಮಸ್ಥರಲ್ಲಿ ಸಂತಸ ಮೂಡಿದೆ.

ಜೋಜನಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋರಗಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾದ ಸ್ಥಾನಕ್ಕೆ ಸ್ಪರ್ಧಿಸಿ 364 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

ADVERTISEMENT

ಡಿ.ಇಡಿ ಜತೆ ಶಿಕ್ಷಕರ ಅರ್ಹತಾ ಪರೀಕ್ಷೆ ಪಾಸು ಮಾಡಿದ ಇವರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಈ ವರ್ಷ ಕೋವಿಡ್‌ನಿಂದಾಗಿ ಶಾಲೆ ಆರಂಭವಾಗದೆ ಮನೆಯಲ್ಲೇ ಉಳಿದಿದ್ದಾರೆ. ಕಿತ್ತು ತಿನ್ನುವ ಬಡತನದ ಮಧ್ಯೆಯೂ ಎರಡು ಮಾಸ್ಟರ್ ಪದವಿ ಪಡೆದು ಉದ್ಯೋಗವಿಲ್ಲದೆ ಕಡಿಮೆ ಸಂಬಳದಲ್ಲಿ ಅತಿಥಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.

‘ಗ್ರಾಮ ಪಂಚಾಯಿತಿ ಸದಸ್ಯನಾಗಬೇಕು ಎಂದು ಬಯಸಿರಲಿಲ್ಲ. ಗ್ರಾಮದ ಯುವಕರು ಚುನಾವಣೆಗೆ ನಿಲ್ಲುವಂತೆ ಒತ್ತಾಯಿಸಿದ್ದಾರೆ. ಒಂದು ನಯಾ ಪೈಸೆ ಖರ್ಚು ಮಾಡದೆ ಗೆದ್ದು ಬಂದಿದ್ದೇನೆ’ ಎನ್ನುತ್ತಾರೆ ಜೈಪ್ರಕಾಶ ಅಷ್ಟೂರೆ.

ಬೋರಗಿ ಭಗತಸಿಂಗ್ ಯುವ ಬ್ರಿಗೇಡ್‌ ಯುವಕರು ಜೈಪ್ರಕಾಶ ಅಷ್ಟೂರೆ ಅವರನ್ನು ಗೌರವಿಸಿದರು. ಗುರುನಾಥ ಮೈನಾಳೆ, ಸಂತೋಷ, ಗುಂಡಪ್ಪ, ಸತೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.