ADVERTISEMENT

ಸರ್ಕಾರ ಪೂರೈಸಿದ್ದು 40 ವೆಂಟಿಲೇಟರ್‌ ಮಾತ್ರ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 14:42 IST
Last Updated 22 ಸೆಪ್ಟೆಂಬರ್ 2020, 14:42 IST

ಬೀದರ್‌: ‘ಬ್ರಿಮ್ಸ್‌ನಲ್ಲಿ ಆರಂಭಿಸಲಾದ ಕೋವಿಡ್ ಆಸ್ಪತ್ರೆಯಲ್ಲಿ 530 ಹಾಸಿಗೆಗಳಿದ್ದು ಅವುಗಳ ಪೈಕಿ 36 ಐಸಿಯು ಹಾಗೂ 488 ಆಕ್ಸಿಜನ್ ಹಾಸಿಗೆಗಳಿವೆ. 61 ವೆಂಟಿಲೇಟರ್‌ಗಳ ಪೈಕಿ ಸರ್ಕಾರ ಬ್ರಿಮ್ಸ್‌ಗೆ 40 ವೆಂಟಿಲೇಟರ್‌ ಪೂರೈಸಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಮಾಹಿತಿ ನೀಡಿದ್ದಾರೆ.

ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಲಿಖಿತ ಮಾಹಿತಿ ಒದಗಿಸಿದ್ದಾರೆ.

ರಾಜ್ಯದಲ್ಲಿ ಪ್ರತಿದಿನ ಸರಾಸರಿ ಹತ್ತು ಸಾವಿರ ಕೋವಿಡ್-19 ಸಕ್ರೀಯ ಪ್ರಕರಣಗಳು ದಾಖಲಾಗುತ್ತಿವೆ. ಬೀದರ್ ಜಿಲ್ಲೆಯು ಇದಕ್ಕೆ ಹೊರತಾಗಿಲ್ಲ, ಇಲ್ಲಿಯೂಕೂಡ ಸೋಂಕಿತರ ಸಂಖ್ಯೆಗಣನೀಯವಾಗಿ ಹೆಚ್ಚಾಗುತ್ತಿವೆ. ಆದರೆ ಸಾಕಷ್ಟು ಸಂಖ್ಯೆಯಲ್ಲಿ ವೆಂಟಿಲೇಟರ್‌ಗಳು ಇಲ್ಲದ ಕಾರಣ ರೋಗಿಗಳು ನೆರೆಯ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅಲ್ಲಿ ರೋಗಿಗಳಗೆ ಪ್ರತಿ ದಿನಕ್ಕೆ ₹ 10 ಸಾವಿರದಿಂದ ₹ 50 ಸಾವಿರ ಬಿಲ್ ಮಾಡಲಾಗುತ್ತಿದೆ ಎಂದು ವಿಜಯಸಿಂಗ್‌ ತಿಳಿಸಿದ್ದಾರೆ.

ADVERTISEMENT

ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್)ಗೆ ಮಂಜೂರಾದ ‘ಎ’ ವೃಂದದ 243ರ ಪೈಕಿ 115 ಕಾಯಂ ಹಾಗೂ 33 ಗುತ್ತಿಗೆ ನೌಕರರು, ‘ಬಿ’ ವೃಂದದ 8ರ ಪೈಕಿ 3 ಕಾಯಂ, ‘ಸಿ’ ವೃಂದದ 430ರ ಹುದ್ದೆಗಳ ಪೈಕಿ 285 ಕಾಯಂ ಹಾಗೂ 6 ಗುತ್ತಿಗೆ ನೌಕರರು, ‘ಡಿ’ ವೃಂದದ 83ರ ನೌಕರರ ಪೈಕಿ ಕೇವಲ ಒಬ್ಬ ಕಾಯಂ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ ಹೇಳಿದ್ದಾರೆ.

ಬ್ರಿಮ್ಸ್‌ಗೆ ಆತ್ರೆಗೆ ‘ಎ’ ವೃಂದದ 33 ವೈದ್ಯರ ಹುದ್ದೆಗಳು ಮಂಜೂರಾಗಿವೆ. ಅದರಲ್ಲಿ 31 ಹುದ್ದೆಗಳನ್ನು ನೇರ ನೇಮಕಾತಿ ಹಾಗೂ ನಿಯೋಜನೆ ಮೇರೆಗೆ ಭರ್ತಿ ಮಾಡಿಕೊಳ್ಳಲಾಗಿದೆ. ಪ್ರಸ್ತುತ 2 ತಜ್ಞ ವೈದ್ಯರ ಹುದ್ದೆ ಖಾಲಿ ಇವೆ. ಅದೇ ರೀತಿ ‘ಬಿ’ ವೃಂದದ 3 ಹುದ್ದೆಗಳ ಪೈಕಿ 1 ಕಾಯಂ, ‘ಸಿ’ ವೃಂದದ 158 ಹುದ್ದೆಗಳ ಪೈಕಿ 68 ಕಾಯಂ ಮತ್ತು ‘ಡಿ’ ವೃಂದದ 111ರ ಪೈಕಿ ಕೇವಲ 22 ಕಾಯಂ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಸಚಿವರ ಪ್ರಕಾರಣ ಒಬ್ಬ ಸಹ ಪ್ರಾಧ್ಯಾಪಕ, ಮೂವರು ಸಹಾಯಕ ಪ್ರಾಧ್ಯಾಪಕರು, 23 ಸೀನಿಯರ್ ರೆಸಿಡೆಂಟ್, 11 ಜನ ಲ್ಯಾಬ್‍ಟೆಕ್ನಿಷಿಯನ್ಸ್ ಹಾಗೂ 7 ಜನ ಡಾಟಾಎಂಟ್ರಿ ಆಪರೇಟರ್ಸ್ ಗಳನ್ನು ಗುತ್ತಿಗೆಆಧಾರದ ಮೇಲೆ ನೇಮಕಾತಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಎಂಬಿಬಿಬಿಎಸ್ಪ್ರಥಮ ವರ್ಷದಿಂದ ಮೂರನೇ ವರ್ಷದ ವರೆಗೆ ತಲಾ 150 ವಿದ್ಯಾರ್ಥಿಗಳು ಹಾಗೂ ನಾಲ್ಕನೇ ವರ್ಷದಲ್ಲಿ 121 ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಕೋರ್ಸಿನಲ್ಲಿ 7 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ನೂರಾರು ಹುದ್ದೆಗಳು ಖಾಲಿ ಇರುವ ಕಾರಣ ರೋಗಿಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.