ADVERTISEMENT

ಸಾರ್ಥಕ ಬದುಕಿಗೆ ಆದರ್ಶ ದಾಂಪತ್ಯ ಕಾರಣ: ಗೋರುಚ ಅಭಿಮತ

ಜಗನೀಲ ಕೃತಿ ಬಿಡುಗಡೆ ಸಮಾರಂಭ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 13:04 IST
Last Updated 25 ಜೂನ್ 2022, 13:04 IST
ಬೀದರ್‌ನ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕೃತಿಕ ಭವನದಲ್ಲಿ “ಜಗನೀಲ” ಸ್ಮರಣ ಸಂಪುಟ ಬಿಡುಗಡೆ ಸಮಾರಂಭವನ್ನು ಸಾಹಿತಿ ಗೋರುಚ ಉದ್ಘಾಟಿಸಿದರು. ಕಲ್ಯಾಣರಾವ್ ಪಾಟೀಲ, ಪ್ರೊ.ಎಚ್.ಟಿ.ಪೋತೆ, ಬಸವಲಿಂಗ ಪಟ್ಟದ್ದೇವರು, ಚನ್ನಬಸಪ್ಪ ಹಾಲಹಳ್ಳಿ, ಜಗನ್ನಾಥ ಹೆಬ್ಬಾಳೆ, ನೀಲಗಂಗಾ ಹೆಬ್ಬಾಳೆ, ಬಿ.ಜಿ.ಶೆಟಕಾರ, ರಾಜಕುಮಾರ ಹೆಬ್ಬಾಳೆ ಇದ್ದಾರೆ
ಬೀದರ್‌ನ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕೃತಿಕ ಭವನದಲ್ಲಿ “ಜಗನೀಲ” ಸ್ಮರಣ ಸಂಪುಟ ಬಿಡುಗಡೆ ಸಮಾರಂಭವನ್ನು ಸಾಹಿತಿ ಗೋರುಚ ಉದ್ಘಾಟಿಸಿದರು. ಕಲ್ಯಾಣರಾವ್ ಪಾಟೀಲ, ಪ್ರೊ.ಎಚ್.ಟಿ.ಪೋತೆ, ಬಸವಲಿಂಗ ಪಟ್ಟದ್ದೇವರು, ಚನ್ನಬಸಪ್ಪ ಹಾಲಹಳ್ಳಿ, ಜಗನ್ನಾಥ ಹೆಬ್ಬಾಳೆ, ನೀಲಗಂಗಾ ಹೆಬ್ಬಾಳೆ, ಬಿ.ಜಿ.ಶೆಟಕಾರ, ರಾಜಕುಮಾರ ಹೆಬ್ಬಾಳೆ ಇದ್ದಾರೆ   

ಬೀದರ್: ದಾಂಪತ್ಯ ಜೀವನವೆಂಬುದು ಪ್ರೀತಿ, ವಿಶ್ವಾಸ, ನಂಬಿಕೆ ಮತ್ತು ಸಂತೃಪ್ತಿಯ ಆಗರ. ಮಾನವ ನಿರ್ಮಿತ ಈ ಸುಂದರ ಪದ್ಧತಿಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವುದು ಒಂದು ಸಾಧನೆ. ದಾಂಪತ್ಯ ಜೀವನ ಆದರ್ಶವಾಗಿ ಸಾಗಿಸಿದಾಗ ಮಾತ್ರ ವ್ಯಕ್ತಿಯ ಬದುಕು ಸಾರ್ಥಕವಾಗುತ್ತದೆ ಎಂದು ಸಾಹಿತಿ ಗೋರುಚ ಅಭಿಪ್ರಾಯಪಟ್ಟರು.

ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ವತಿಯಿಂದ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕೃತಿಕ ಭವನದಲ್ಲಿ ಜಗನ್ನಾಥ ಹೆಬ್ಬಾಳೆ ಹಾಗೂ ನೀಲಗಂಗಾ ಹೆಬ್ಬಾಳೆಯವರ ವಿವಾಹ ವಾರ್ಷಿಕೋತ್ಸವದ ರಜತ ಮಹೋತ್ಸವದ ನಿಮಿತ್ತ “ಜಗನೀಲ” ಸ್ಮರಣ ಸಂಪುಟವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಜನಮಾನಸದಲ್ಲಿ ಬಿತ್ತಿ ಬೆಳೆಸಿದ ಜಗನ್ನಾಥ ಹೆಬ್ಬಾಳೆ ದಂಪತಿ ಬದುಕು ಇತರರಿಗೆ ಮಾದರಿ. ಕುಟುಂಬ ಒಂದು ಹಣತೆ ಇದ್ದಂತೆ. ಅದರಲ್ಲಿ ದಂಪತಿ ಎಣ್ಣೆ-ಬತ್ತಿ ಇದ್ದಂತೆ. ಎರಡೂ ಸರಿಯಾಗಿದ್ದಾಗ ಮಾತ್ರ ಜಗತ್ತಿಗೆ ಬೆಳಕು ನೀಡಲು ಸಾಧ್ಯ. ಹೆಬ್ಬಾಳೆ ದಂಪತಿ ಎಣ್ಣೆ-ಬತ್ತಿಯಾಗಿ ಎಲ್ಲರನ್ನೂ ತನ್ನೊಂದಿಗೆ ತೆಗೆದುಕೊಂಡು ಹೋಗಿ ಜನಪದ ಸಾಹಿತ್ಯ ಸಂಸ್ಕೃತಿಯ ಬೆಳಕು ಜಿಲ್ಲೆಯಾದ್ಯಂತ ಪಸರಿಸುತ್ತಿದ್ದಾರೆ ಎಂದು ಕೊಂಡಾಡಿದರು.

ADVERTISEMENT

ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ.ಪೋತೆ ಅವರು ಜಗನೀಲ ಪುಸ್ತಕ ಪರಿಚಯಿಸಿ, “ಜಗನೀಲ ಸ್ಮರಣ ಸಂಪುಟ ಬಾಹ್ಯ ಮತ್ತು ಆಂತರಿಕವಾಗಿ ಸುಂದರವಾಗಿ ಮೂಡಿಬಂದಿದೆ. ಓದುಗರನ್ನು ತನ್ನೆಡೆಗೆ ಸೆಳೆಯುತ್ತ ಓದಿಸಿಕೊಂಡು ಹೋಗುವಂತಿದೆ. ಇದಕ್ಕೆ ಮೂಲ ಕಾರಣ ಹೆಬ್ಬಾಳೆ ದಂಪತಿ ಆದರ್ಶ ದಾಂಪತ್ಯ ಜೀವನ. ಅವಿಭಕ್ತ ಕುಟುಂಬದಿಂದ ಬಂದ ದಂಪತಿ ಬದುಕಿನ ಏಳು-ಬೀಳುಗಳ ನಡುವೆಯೇ ಅಧ್ಯಯನಶೀಲರಾಗಿ ಸಂಘಟನೆ ಮಾಡುತ್ತ ಸುಮಾರು 67 ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಸಮರ್ಪಿಸಿ ಯಶಸ್ವಿ ಜೀವನ ಸಾಗಿಸುತ್ತಿದ್ದಾರೆ ಎಂದರು.

ಜಗನೀಲ ಸಂಪುಟದ ಪ್ರಧಾನ ಸಂಪಾದಕ ಕಲ್ಯಾಣರಾವ ಜಿ.ಪಾಟೀಲ ಮಾತನಾಡಿ, ಜನಪದವನ್ನೇ ತನ್ನ ಉಸಿರಾಗಿಸಿಕೊಂಡ ಹೆಬ್ಬಾಳೆಯವರು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತ ಬಂದಿದ್ದಾರೆ ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಬಸವಲಿಂಗ ಪಟ್ಟದ್ದೇವರು ಮಾತನಾಡಿ “ಮನೆ ಎಂದರೆ ಮನಸ್ಸು ಮತ್ತು ನೆಮ್ಮದಿ. ಇವೆರಡೂ ಇದ್ದಲ್ಲಿ ಜೀವನ ಸ್ವರ್ಗವಾಗುತ್ತದೆ. ಆ ಮನೆಯೇ ಕೈಲಾಸ ಮತ್ತು ಮಹಾಮನೆಯಾಗುತ್ತದೆ. ಸತಿಪತಿಗಳಿಬ್ಬರೂ ಪ್ರತಿದೃಷ್ಟಿಯಾಗಿ ಬಾಳಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ನುಡಿದರು.

ಅಧ್ಯಕ್ಷತೆ ಅಧ್ಯಕ್ಷ ಬೀದರ್ ಜಿಲ್ಲಾ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಚನ್ನಬಸಪ್ಪ ಹಾಲಹಳ್ಳಿ ಮಾತನಾಡಿದರು. ಕರಾಶಿ ಸಂಸ್ಥೆ ಉಪಾಧ್ಯಕ್ಷ ಬಿ.ಜಿ.ಶೆಟಕಾರ, ಕಲಬುರಗಿ ಸಾಹಿತಿ ಶ್ರೀಶೈಲ ನಾಗರಾಳ ಮಾತನಾಡಿದರು.

ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿಯಾಗಿದ್ದೇನೆ. ಎಲ್ಲರೂ ಕೂಡಿ ಸಂಘಟನೆ ಮಾಡೋಣ. ಜಿಲ್ಲೆಯಲ್ಲಿ ಮಾತ್ರವಲ್ಲ ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನಪದ ಸಂಸ್ಕೃತಿ, ಕಲೆ ಮತ್ತು ಸಾಹಿತ್ಯ ಪೋಷಿಸಿ ಬೆಳೆಸೋಣ ಎಂದು ಜಗನ್ನಾಥ ಹೆಬ್ಬಾಳೆ ಎಂದು ಹೇಳಿ ಕೃತಜ್ಞತೆ ವ್ಯಕ್ತಪಡಿಸಿದರು.

ನಿಜಲಿಂಗಪ್ಪ ತಗಾರೆ, ಪ್ರೊ.ಎಸ್.ಬಿ.ಬಿರಾದಾರ, ವೀರಣ್ಣ ಕುಂಬಾರ, ಗುರಮ್ಮಾ ಸಿದ್ದಾರೆಡ್ಡಿ, ಸುನೀತಾ ಕೂಡ್ಲಿಕರ್ ಇದ್ದರು.

ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ಸಂಜೀವಕುಮಾರ ಜುಮ್ಮಾ ಹಾಗೂ ಮಹಾರುದ್ರ ಡಾಕುಳಗೆ ನಿರೂಪಿಸಿದರು. ಮಹಾನಂದ ಮಡಕಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.