ಕಮಲನಗರ: ಪ್ರತಿಯೊಂದು ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ತಾಯಿ ಪಾತ್ರ ಬಹುಮುಖ್ಯವಾಗಿದೆ ಎಂದು ಜ್ಞಾನ ಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗುರುನಾಥ ದೇಶಮುಖ ಹೇಳಿದರು.
ತಾಲ್ಲೂಕಿನ ಡೋಣಗಾಂವ(ಎಂ) ಗ್ರಾಮದ ನಾಗಲಿಂಗ ಸ್ವಾಮಿ ದೇಶಿ ಕೇಂದ್ರ ಗುರುಕುಲ ಶಾಲೆಯಲ್ಲಿ ಶನಿವಾರ ತಾಯಂದಿರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ಅಮ್ಮನ ಕೈತುತ್ತು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತಾಯಿ ಮತ್ತು ಮಗುವಿನ ಭಾವನಾತ್ಮಕ ಸಂಬಂಧಗಳ ಬೆಸುಗೆಯಲ್ಲಿ ಬೆಳೆದ ಮಕ್ಕಳು ಉನ್ನತ ನಾಗರಿಕರಾಗಲು ಸಾಧ್ಯ. ಮನೆ ಮೊದಲ ಪಾಠ ಶಾಲೆ, ತಾಯಿ ಆದರ್ಶ ಗುರುವಾಗಿ ಮಕ್ಕಳಿಗೆ ಸಂಸ್ಕಾರ ನೀಡುವ ಜತೆಗೆ ಸಮರ್ಪಕ ಕುಟುಂಬ ನಿರ್ವಹಣೆ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾಳೆ. ತಾಯಿ ಕೈಯಿಂದ ಸೇವಿಸಿದ ಊಟ ಅಮೃತಕ್ಕೆ ಸಮಾನವಾಗಿದೆ. ಮಕ್ಕಳ ಉಜ್ವಲ ಭವಿಷ್ಯಕ್ಕೆ ತಾಯಿ, ತಂದೆ ಮತ್ತು ಪರಿಸರ ಕಾರಣವಾಗಿದೆ’ ಎಂದರು.
ನಾಗಲಿಂಗ ಸ್ವಾಮಿ ದೇಶಿಕೇಂದ್ರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಂಜುಕುಮಾರ ಕಂಟಾಳೆ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಂಜಯ ಬಿರಾದಾರ, ಏಕನಾಥ ಕದಮ, ವಿಜಯಕುಮಾರ ದೇಸಾಯಿ, ಶಿಕ್ಷಕರಾದ ನಾಗನಾಥ ಮೇತ್ರೆ, ದಯಾನಂದ ನಳಗೇರೆ, ಸಚಿನ ಆಡೆ, ಚನ್ನಬಸವ ಕುಂಬಾರಗೀರೆ, ವರ್ಷಾ ಕಾಳೆ, ಸಂಜೀವಿನಿ ಲಾಸೂನೆ ಇದ್ದರು.
ನಂದಿನಿ ಮತ್ತು ಪ್ರಿಯಂಕಾ ಸ್ವಾಗತಿಸಿದರು. ಕಮಲಾಕರ ರಾಸೂರೆ ನಿರೂಪಿಸಿದರು. ನೇಹಾ ಹಾವಗಿಸ್ವಾಮಿ ವಂದಿಸಿದರು. ಕಾರ್ಯಕ್ರಮದಲ್ಲಿ ಸುಮಾರು 200 ಜನ ತಾಯಂದಿರು ತಯಾರಿಸಿದ ವಿವಿಧ ತಿಂಡು ತಿನಿಸುಗಳನ್ನು ಮಕ್ಕಳಿಗೆ ಉಣ ಬಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.