ADVERTISEMENT

ಖುಷಿಯಿಂದ ಶಾಲೆಗೆ ಬಂದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 17:36 IST
Last Updated 6 ಸೆಪ್ಟೆಂಬರ್ 2021, 17:36 IST
ಬೀದರ್ ತಾಲ್ಲೂಕಿನ ಆಣದೂರವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಲಿನ ಪೌಡರ್‌ ವಿತರಿಸಲಾಯಿತು
ಬೀದರ್ ತಾಲ್ಲೂಕಿನ ಆಣದೂರವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಲಿನ ಪೌಡರ್‌ ವಿತರಿಸಲಾಯಿತು   

ಬೀದರ್‌: ಜಿಲ್ಲೆಯಲ್ಲಿ 5ರಿಂದ 8ನೇ ತರಗತಿಗಳು ಸೋಮವಾರ ಪ್ರಾರಂಭವಾದವು. ಶಿಕ್ಷಕರು ವಿಭಿನ್ನ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಸ್ವಾಗತ ನೀಡಿ ಶಾಲೆಗೆ ಬರ ಮಾಡಿಕೊಂಡರು.

ಕೆಲ ಶಾಲೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಿದರೆ ಕೆಲ ಶಾಲೆಗಳ ಆವರಣದಲ್ಲಿ ರಂಗೋಲಿ ರಂಗೋಲಿ ಹಾಕಲಾಗಿತ್ತು. ಶಾಲೆಯ ಶಿಕ್ಷಕರು ಪ್ರವೇಶದ್ವಾರದಲ್ಲಿ ವಿದ್ಯಾರ್ಥಿಗಳ ಮೇಲೆ ಪುಷ್ಪಾರ್ಚನೆ ಮಾಡಿ ಸಂಭ್ರಮದಿಂದ ಸ್ವಾಗತಿಸಿದರು.

ಕಳೆದ ಒಂದೂವರೆ ವರ್ಷಗಳಿಂದ ಶಾಲೆಗಳು ವಿದ್ಯಾರ್ಥಿಗಳು ಬೀಕೋ ಎನ್ನುತ್ತಿದ್ದವು. ಸೋಮವಾರ ಬೆಳಿಗ್ಗೆ ಶಾಲಾ ಕೊಠಡಿಗಳನ್ನು ಸ್ಯಾನಿಟೈಜೇಶನ್ ಮಾಡಲಾಗಿತ್ತು. ಅನೇಕ ವಿದ್ಯಾರ್ಥಿಗಳಿಗೆ ಮೊದಲ ದಿನ ಪಠ್ಯಪುಸ್ತಕ, ಪೆನ್ನು, ಹಾಲಿನ ಪೌಡರ್ ವಿತರಿಸಲಾಯಿತು.

ADVERTISEMENT

ಬೀದರ್ ತಾಲ್ಲೂಕಿನ ಆಣದೂರವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಲಿನ ಪೌಡರ್‌ ವಿತರಿಸಿ ಬರ ಮಾಡಿಕೊಳ್ಳಲಾಯಿತು.

‘ಒಂದೂವರೆ ವರ್ಷದ ನಂತರ ಶಾಲೆಗಳು ತೆರೆದುಕೊಂಡಿವೆ. ಹೀಗಾಗಿ ಉತ್ಸಾಹದಿಂದಲೇ ಮಕ್ಕಳು ಶಾಲೆಗೆ ಹಾಜರಾದರು. ಆಸಕ್ತಿಯಿಂದ ಪಾಠ ಆಲಿಸಿದರು’ ಎಂದು ಶಿಕ್ಷಕ ಸಂಜೀವಕುಮಾರ ಅತಿವಾಳೆ ತಿಳಿಸಿದರು.

ಹುಮನಾಬಾದ್‌ ತಾಲ್ಲೂಕಿನ ಚಂದನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಾಲಾರ್ಪಣೆ ಮಾಡಿ ಅಭಿನಂದಿಸಲಾಯಿತು. ಬೀದರ್‌ನ ಜೀಜಾಮಾತಾ ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪುಷ್ಪವೃಷ್ಟಿ ಮಾಡಲಾಯಿತು. ಮಕ್ಕಳು ಖುಷಿಯಿಂದಲೇ ಶಾಲೆಗೆ ಬಂದರು.

‘ಆನ್‌ಲೈನ್‌ನಲ್ಲಿ ಹೇಳಿಕೊಡುತ್ತಿದ್ದ ಪಾಠ ಸರಿಯಾಗಿ ಅರ್ಥವಾಗುತ್ತಿರಲಿಲ್ಲ. ಶಾಲೆಯಲ್ಲಿ ಪಾಠ ಆಲಿಸಲು ಹೆಚ್ಚು ಇಷ್ಟವಾಗುತ್ತದೆ’ ಎಂದು ವಿದ್ಯಾನಗರ ಶಾಲೆಯ ವಿದ್ಯಾರ್ಥಿಗಳಾದ ನಿತಿನ್‌ ಹಾಗೂ ಬಸವೇಶ್ವರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.