ADVERTISEMENT

ಬಸವಕಲ್ಯಾಣ: ಕಸ ಚೆಲ್ಲುವವರಿಗೆ ಶ್ರದ್ಧಾಂಜಲಿ ಸಲ್ಲಿಕೆ

ಬಸವಕಲ್ಯಾಣದ ತ್ರಿಪುರಾಂತ ಕೆರೆ ಸೇತುವೆ ಬಳಿ ಫಲಕ; ಚರ್ಚೆ

ಮಾಣಿಕ ಆರ್ ಭುರೆ
Published 7 ಏಪ್ರಿಲ್ 2025, 6:31 IST
Last Updated 7 ಏಪ್ರಿಲ್ 2025, 6:31 IST
ಬಸವಕಲ್ಯಾಣದ ತ್ರಿಪುರಾಂತ ಕೆರೆ ಸೇತುವೆಯ ಪೂರ್ವದ ಭಾಗದಲ್ಲಿ ಕೃಷಿ ಇಲಾಖೆ ಕಚೇರಿಗೆ ಸಮೀಪದಲ್ಲಿ ನಗರಸಭೆಯಿಂದ ಅಳವಡಿಸಿರುವ ಫಲಕ
ಬಸವಕಲ್ಯಾಣದ ತ್ರಿಪುರಾಂತ ಕೆರೆ ಸೇತುವೆಯ ಪೂರ್ವದ ಭಾಗದಲ್ಲಿ ಕೃಷಿ ಇಲಾಖೆ ಕಚೇರಿಗೆ ಸಮೀಪದಲ್ಲಿ ನಗರಸಭೆಯಿಂದ ಅಳವಡಿಸಿರುವ ಫಲಕ   

ಬಸವಕಲ್ಯಾಣ: ನಗರದ ತ್ರಿಪುರಾಂತ ಕೆರೆ ಸೇತುವೆಯ ಪೂರ್ವದ ಭಾಗದಲ್ಲಿ ನಗರಸಭೆಯಿಂದ ಅಳವಡಿಸಿರುವ ಫಲಕ ಚರ್ಚೆಗೆ ಗ್ರಾಸವಾಗಿದೆ. ‘ಕಸ ಚೆಲ್ಲುವವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ಬರೆಯುವುದು ಸರಿ ಆಗಲಾರದು’ ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಿಂದ ಸಸ್ತಾಪುರ ಬಂಗ್ಲಾ ಕಡೆಗೆ ಹೋಗುವಾಗ ಕೃಷಿ ಇಲಾಖೆ ಕಚೇರಿಯ ಸಮೀಪದ ತಿರುವಿನಲ್ಲಿ ಫಲಕವಿದೆ. ಅನೇಕ ದಿನಗಳಿಂದ ಫಲಕ ಇದೆ. ಒಂದು ಸಲ ಯಾರೋ ಅದನ್ನು ಕಿತ್ತು ಹಾಕಿದ್ದರು. ಆದರೆ ಎರಡು ದಿನಗಳ ನಂತರ ಮತ್ತೆ ಅದು ಪ್ರತ್ಯಕ್ಷವಾಗಿದೆ.

ಮೇಲ್ಭಾಗದಲ್ಲಿ ಕರ್ನಾಟಕ ಸರ್ಕಾರ, ನಗರಸಭೆ ಕಾರ್ಯಾಲಯ ಬಸವಕಲ್ಯಾಣ ಎಂದು ಬರೆದಿದೆ. ಸ್ವಚ್ಛ ಭಾರತ ಯೋಜನೆಯ ಎರಡು ಲೋಗೋಗಳಿವೆ. ಕೆಳಗಡೆ ಟ್ರ್ಯಾಕ್ಟರ್‌ನಲ್ಲಿ ಕಸ ತುಂಬುತ್ತಿರುವ ಚಿತ್ರಕ್ಕೆ ಸರಿ ಚಿಹ್ನೆ ಹಾಕಿ, ರಸ್ತೆಯಲ್ಲಿ ಕಸ ಬಿದ್ದಿರುವ ಇನ್ನೊಂದು ಚಿತ್ರಕ್ಕೆ ಎಕ್ಸ್ (ತಪ್ಪು) ಚಿಹ್ನೆ ಹಾಕಲಾಗಿದೆ.

ADVERTISEMENT

ಪಕ್ಕದಲ್ಲಿ ‘ಇಲ್ಲಿ ಕಸ ತಂದು ಹಾಕುವ ದಿವ್ಯ ಆತ್ಮಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ, ಈ ಕಸದಂತೆಯೇ ನಿಮ್ಮ ಜೀವನವೂ ಆದಷ್ಟು ಬೇಗನೆ ಕೊಳೆತು ಹೋಗಲಿ’ ಎಂದು ದಪ್ಪ ಅಕ್ಷರಗಳಲ್ಲಿ ಬರೆಯಲಾಗಿದೆ. ಕೆಳಗಡೆ ಕೆಂಪು ಬಣ್ಣದಲ್ಲಿ ನೊಂದ ಪೌರಕಾರ್ಮಿಕರು ಎಂದಿದೆ.

ಮುಖ್ಯವೆಂದರೆ, ನಗರ ಸೇರುವ ರಸ್ತೆಗಳ ಪ್ರವೇಶದ ಸ್ಥಳಗಳಲ್ಲಿ ಅನೇಕ ದಿನಗಳಿಂದ ಸಾಕಷ್ಟು ಕಸ ಸಂಗ್ರಹಗೊಂಡಿದೆ. ಆಗಾಗ ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿದ್ದಾರೆ. ಆದರೂ, ಮರುದಿನ ಮತ್ತೆ ಕಸದ ರಾಶಿ ಬೀಳುತ್ತಿದೆ. ದುರ್ನಾತ ಹರಡುತ್ತಿದೆ. ಈ ಮೇಲಿನ ಫಲಕ ಅಳವಡಿಸಿದ ನಂತರವೂ ಅದರ ಸುತ್ತಲಿನಲ್ಲಿ ಸಾಕಷ್ಟು ಕಸ ಬಿದ್ದಿದೆ. ಏನೇ ಬರೆದರೂ ಯಾರೂ ಕಸ ಚೆಲ್ಲುವುದನ್ನು ನಿಲ್ಲಿಸುತ್ತಿಲ್ಲ.

‘ಅಲ್ಲಲ್ಲಿ ಸ್ವಚ್ಛತೆ ಸಂಬಂಧ ಫಲಕ ಅಳವಡಿಸಿದ್ದಾರೆ. ಆದರೆ, ಈ ರೀತಿ ಬರೆದ ಫಲಕ ಇರುವುದು ನನಗೆ ಗೊತ್ತಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರೀಶಿಲಿಸುತ್ತೇನೆ’ ಎಂದು ನಗರಸಭೆ ಅಧ್ಯಕ್ಷ ಸಗೀರುದ್ದಿನ ತಿಳಿಸಿದ್ದಾರೆ.

‘ನಗರ ಭರದಿಂದ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಪೌರಕಾರ್ಮಿಕರ ಸಂಖ್ಯೆ ಹೆಚ್ಚಿಸಬೇಕು. ಸ್ವಚ್ಛತೆಗಾಗಿ ವಾಹನ ಮತ್ತು ಯಂತ್ರಗಳ ಬಳಕೆ ಆಗಬೇಕು. ಏನಿದ್ದರೂ ನಿಯಮಿತವಾಗಿ ಸ್ವಚ್ಛತೆ ಕೈಗೊಳ್ಳುವುದು ನಗರಸಭೆಯವರ ಕರ್ತವ್ಯ. ಅದನ್ನು ಬಿಟ್ಟು ಇಂತಹ ಜಾರಿಕೊಳ್ಳುವ ವಿಧಾನ ಅನುಸರಿಸುವುದು ಹಾಸ್ಯಾಸ್ಪದ’ ಎಂದು ನಗರದ ನಿವಾಸಿಗಳಾದ ಮುಹಮ್ಮದ ನಸೀಮುದ್ದೀನ್‌, ವಿಜಯಾನಂದ ಅವರ ಅಭಿಪ್ರಾಯ.

‘ಧರ್ಮಪ್ರಕಾಶ ಓಣಿಯ ಮುಖ್ಯ ಚರಂಡಿ ಸುತ್ತಲಿನಲ್ಲಿ ಹಾಗೂ ಇತರೆಡೆಯೂ ಕಸ ಸಂಗ್ರಹಗೊಂಡಿದ್ದು ಶ್ರೀಘ್ರವೆ ತೆರವುಗೊಳಿಸಬೇಕು’ ಎಂದು ಸ್ಥಳೀಯರಾದ ಧನರಾಜ ರಾಜೋಳೆ ಆಗ್ರಹಿಸಿದ್ದಾರೆ.

ಬಸವಕಲ್ಯಾಣದ ತ್ರಿಪುರಾಂತ ಕೆರೆ ಸೇತುವೆಯ ಪೂರ್ವದ ಭಾಗದಲ್ಲಿ ಕೃಷಿ ಇಲಾಖೆ ಕಚೇರಿಗೆ ಸಮೀಪದಲ್ಲಿ ನಗರಸಭೆಯಿಂದ ಅಳವಡಿಸಿರುವ ಫಲಕ
ದಂಡ ವಿಧಿಸುವ ಕಠಿಣ ಕ್ರಮ ಕೈಗೊಳ್ಳುವ ಸಂಬಂಧದ ಫಲಕ ಅಳವಡಿಸಬಹುದು. ಆದರೆ ಇಂಥ ಬರಹ ಸರಿಯಲ್ಲ. ಈ ಬಗ್ಗೆ ಸಂಬಂಧಿತರಿಗೆ ವಿಚಾರಿಸುತ್ತೇನೆ
ಸಗೀರುದ್ದೀನ್ ನಗರಸಭೆ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.