ADVERTISEMENT

ಬೀದರ್‌ನಲ್ಲಿ ಸಿದ್ಧಗಂಗಾ ಸಂಘದಿಂದ ವಿಜಯೋತ್ಸವ

ದಾಸೋಹ ದಿನ ಆಚರಣೆ ಘೋಷಣೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 16:45 IST
Last Updated 6 ಸೆಪ್ಟೆಂಬರ್ 2021, 16:45 IST
ಬೀದರ್‌ನಲ್ಲಿ ಡಾ. ಶಿವಕುಮಾರ ಸ್ವಾಮೀಜಿ ಅವರ ಪ್ರತಿಮೆಗೆ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳ ಸಂಘದ ಪದಾಧಿಕಾರಿಗಳು ಪೂಜೆ ಸಲ್ಲಿಸಿದರು
ಬೀದರ್‌ನಲ್ಲಿ ಡಾ. ಶಿವಕುಮಾರ ಸ್ವಾಮೀಜಿ ಅವರ ಪ್ರತಿಮೆಗೆ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳ ಸಂಘದ ಪದಾಧಿಕಾರಿಗಳು ಪೂಜೆ ಸಲ್ಲಿಸಿದರು   

ಬೀದರ್: ತುಮಕೂರಿನ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ ದಿನವಾದ ಜನವರಿ 21ನ್ನು ದಾಸೋಹ ದಿನವನ್ನಾಗಿ ಆಚರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಪ್ರಯುಕ್ತ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳ ಸಂಘದ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ವಿಜಯೋತ್ಸವ ಆಚರಿಸಿದರು.

ನಗರದ ಶಿವನಗರದಲ್ಲಿ ಇರುವ ಅಕ್ಕ ಮಹಾದೇವಿ ಕಲ್ಯಾಣ ಮಂಟಪದಲ್ಲಿ ಡಾ. ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಸಿದ್ಧಗಂಗಾ ಮಠ ದೇಶದಲ್ಲೇ ದಾಸೋಹ ಪರಂಪರೆಗೆ ಹೆಸರಾಗಿದೆ. ಶಿವಕುಮಾರ ಸ್ವಾಮೀಜಿ ಅವರು ತ್ರಿವಿಧ ದಾಸೋಹದ ಮೂಲಕ ಅಸಂಖ್ಯಾತ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ್ದರು. ಸಂಘ ಹಾಗೂ ಮಠದ ಭಕ್ತರ ಮನವಿಗೆ ಸ್ಪಂದಿಸಿ ಅವರ ಲಿಂಗೈಕ್ಯ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ತುಮಕೂರಿನ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ ಪಾಟೀಲ ತೇಗಂಪೂರ ಹೇಳಿದರು.

ADVERTISEMENT

ದಾಸೋಹ ದಿನ ಆಚರಣೆ ಘೋಷಣೆ ಮೂಲಕ ಸರ್ಕಾರ ಶ್ರೀಗಳ ತ್ರಿವಿಧ ದಾಸೋಹ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಗೌರವಿಸಿದೆ ಎಂದು ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಕರಂಜೆ ನುಡಿದರು.

ಶಿಕ್ಷಕರ ದಿನಾಚರಣೆ ಪ್ರಯುಕ್ತ ಅನೇಕ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ರಮೇಶ ಪಾಟೀಲ ಪಾಶಾಪುರ್, ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಶಾಂತಲಿಂಗ ಸಾವಳಗಿ, ಪ್ರಮುಖರಾದ ಸರ್ಕಾರಿ ಎನ್ ಜಿ ಓ ಅಧ್ಯಕ್ಷ ಬಾಲಾಜಿ ಬಿರಾದಾರ, ಬಸವರಾಜ ಯಾಕತಪೂರ, ಮುಖ್ಯಗುರು ಸಿದ್ಧಾರೆಡ್ಡಿ ನಾಗೂರಾ, ರವಿ ಕಾರಬಾರಿ, ಶಿವಶಂಕರ ಪಾಟೀಲ ಚಿಟಗುಪ್ಪ, ವಿಜಯಕುಮಾರ ಸೋಲಪೂರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.