ADVERTISEMENT

ಬಸವಕಲ್ಯಾಣ: ವಟ ವೃಕ್ಷ ಪೂಜೆ, ಎತ್ತುಗಳ ಮೆರವಣಿಗೆ

ಎರಡು ದಿನ ಹಬ್ಬದ ಸಂಭ್ರಮ: ಮಹಿಳೆಯರಲ್ಲಿ ಎದ್ದು ಕಂಡ ಉತ್ಸಾಹ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 14:34 IST
Last Updated 11 ಜೂನ್ 2025, 14:34 IST
ಬಸವಕಲ್ಯಾಣ ನಗರದ ಮಹಾದೇವ ಮಂದಿರದ ಆವರಣದಲ್ಲಿನ ವಟ ವೃಕ್ಷಕ್ಕೆ ಮಹಿಳೆಯರು ಬುಧವಾರ ದಾರ ಸುತ್ತಿ ಪೂಜೆ ಸಲ್ಲಿಸಿದರು
ಬಸವಕಲ್ಯಾಣ ನಗರದ ಮಹಾದೇವ ಮಂದಿರದ ಆವರಣದಲ್ಲಿನ ವಟ ವೃಕ್ಷಕ್ಕೆ ಮಹಿಳೆಯರು ಬುಧವಾರ ದಾರ ಸುತ್ತಿ ಪೂಜೆ ಸಲ್ಲಿಸಿದರು   

ಬಸವಕಲ್ಯಾಣ: ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕಾರ ಹುಣ್ಣಿಮೆಯನ್ನು ವಟ ಪೂರ್ಣಿಮೆ ಎಂದೂ ಆಚರಿಸುವ ಕಾರಣ ಒಂದೆಡೆ ಮಹಿಳೆಯರು ವಟ ವೃಕ್ಷಕ್ಕೆ ದಾರ ಕಟ್ಟಿ ಪೂಜಿಸುವ ಸಂಭ್ರಮ ಎದ್ದು ಕಂಡರೆ ಇನ್ನೊಂದೆಡೆ ರೈತಾಪಿ ಜನರು ಎತ್ತುಗಳನ್ನು ಸಿಂಗರಿಸಿ ಪೂಜೆ ಸಲ್ಲಿಸಿ ಮೆರವಣಿಗೆ ನಡೆಸಿದರು.

ಪಂಚಾಂಗದ ಪ್ರಕಾರ ಹುಣ್ಣಿಮೆ ಮಂಗಳವಾರ ಮಧ್ಯಾಹ್ನದಿಂದ ಬುಧವಾರ ಬೆಳಿಗ್ಗೆವರೆಗೆ ಇತ್ತು. ಆದ್ದರಿಂದ ಕೆಲವರು ಮಂಗಳವಾರ, ಇನ್ನುಳಿದವರು ಬುಧವಾರ ಪೂಜೆ ಸಲ್ಲಿಸಿದರು. ವಟ ವೃಕ್ಷ ಪೂಜೆಗೆ ಮಹಿಳೆಯರು ಹೆಚ್ಚಿನ ಆಸಕ್ತಿ ತೋರಿರುವುದು ಕಂಡು ಬಂತು.

ನವ ವಿವಾಹಿತೆಯರು, ವೃದ್ಧರು ಒಳಗೊಂಡು ಮನೆಯಲ್ಲಿನ ಬಹುತೇಕರು ಹೊಸ ಸೀರೆ ಉಟ್ಟುಕೊಂಡು ವಟ ವೃಕ್ಷಕ್ಕೆ ದಾರ ಸುತ್ತಿ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿದರು. ಪತಿಯ ಸೌಖ್ಯ ಬಯಸಿ ನಡೆಸುವ ವಟ ವೃಕ್ಷದ ಪೂಜೆ ಮಹಾರಾಷ್ಟ್ರದಲ್ಲಿ ಹೆಚ್ಚಿತ್ತು. ಅಲ್ಲಿನ ಪ್ರಭಾವದಿಂದ ಈಗ ತಾಲ್ಲೂಕಿನಾದ್ಯಂತ ಈ ಪೂಜೆ ನಡೆಯುತ್ತಿದೆ.

ADVERTISEMENT

ಕೊಹಿನೂರ, ಮಂಠಾಳ, ಮುಡಬಿ ಹೋಬಳಿಗಳ ವ್ಯಾಪ್ತಿಯಲ್ಲಿ ಕಾರ ಹುಣ್ಣಿಮೆ ಪ್ರಯುಕ್ತ ಎತ್ತುಗಳ ಪೂಜೆಯೂ ನಡೆಯಿತು. ರೈತರು ಎತ್ತುಗಳ ಕೋಡುಗಳಿಗೆ ಬಣ್ಣ ಹಚ್ಚಿ ಕೋಡು ಬಳೆ ಹಾಕಿ ಕುಟುಂಬ ಸಮೇತರಾಗಿ ನೈವೇದ್ಯ ಅರ್ಪಿಸಿದರು. ನಂತರ ಪ್ರತಿಯೊಬ್ಬರ ಮನೆಯಲ್ಲಿ ಹೋಳಿಗೆ ಊಟ ಸವಿಯಲಾಯಿತು.

ಹಾರಕೂಡದಲ್ಲಿ ಚನ್ನವೀರ ಶಿವಾಚಾರ್ಯರ ನೇತೃತ್ವದಲ್ಲಿ ಮೆರವಣಿಗೆ ಮತ್ತು ಕರಿ ಕಡಿಯುವ ಕಾರ್ಯಕ್ರಮ ನಡೆಯಿತು.

ಮಂಠಾಳ, ಅತ್ಲಾಪುರದಲ್ಲಿ ಎತ್ತುಗಳ ಮೆರವಣಿಗೆ ನಡೆಸಿ ಊರ ಅಗಸೆಯಲ್ಲಿ ತಳೀರು ತೋರಣಗಳಿಂದ ಸಿಂಗರಿಸಿದ ಕರಿ (ಹಗ್ಗ)ಯನ್ನು ಗ್ರಾಮದ ಮುಖಂಡರು ಕಡಿದರು. ಎಲ್ಲೆಡೆ ಸಂಭ್ರಮದ ವಾತಾವರಣವಿತ್ತು.

ಬಸವಕಲ್ಯಾಣ ತಾಲ್ಲೂಕಿನ ಕೊಹಿನೂರನಲ್ಲಿ ಕಾರ ಹುಣ್ಣಿಮೆ ಅಂಗವಾಗಿ ಬುಧವಾರ ಎತ್ತುಗಳ ಪೂಜೆ ನೆರವೇರಿಸಲಾಯಿತು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.