ADVERTISEMENT

ಮರಗಳಿಗೆ ಅವೈಜ್ಞಾನಿಕ ಕತ್ತರಿ; ಹಸಿರು ನಾಶ

ಶಾರ್ಟ್‌ ಸರ್ಕಿಟ್ ಹೆಸರಲ್ಲಿ ಮರಕ್ಕೆ ಮರವೇ ಕಟ್

ಶಶಿಕಾಂತ್ ಎಸ್. ಶೆಂಬೆಳ್ಳಿ
Published 21 ಮೇ 2025, 5:01 IST
Last Updated 21 ಮೇ 2025, 5:01 IST
   

ಶಶಿಕಾಂತ ಎಸ್‌. ಶೆಂಬೆಳ್ಳಿ

ಬೀದರ್‌: ನಗರದಲ್ಲಿ ಬೆಳೆದು ನಿಂತಿರುವ ಮರಗಳನ್ನು ಜೆಸ್ಕಾಂನವರು ಅವೈಜ್ಞಾನಿಕವಾಗಿ ಕಡಿದು ಹಾಕುತ್ತಿರುವುದರಿಂದ ಇರುವ ಅಲ್ಪಸ್ವಲ್ಪ ಹಸಿರು ಕೂಡ ಮಾಯವಾಗುತ್ತ ಹೋಗುತ್ತಿದೆ.

ಮುಖ್ಯರಸ್ತೆ ಹಾಗೂ ಬಡಾವಣೆಗಳ ರಸ್ತೆಬದಿ ಅರಣ್ಯ ಇಲಾಖೆಯವರು ಬೆಳೆಸಿರುವುದು, ಸಾರ್ವಜನಿಕರು ಕಾಳಜಿ ವಹಿಸಿ ಪೋಷಿಸಿ ಬೆಳೆಸಿರುವ ಮರಗಳು ಹಲವೆಡೆ ದೊಡ್ಡದಾಗಿ ಬೆಳೆದು ಉತ್ತಮ ಗಾಳಿ, ನೆರಳು ನೀಡುತ್ತಿವೆ. ಆದರೆ ಅವುಗಳ ಕೊಂಬೆಗಳು ವಿದ್ಯುತ್‌ ತಂತಿಗಳಿಗೆ ತಾಗಿ ಸಮಸ್ಯೆ ಉಂಟಾಗುತ್ತಿದೆ ಎಂದು ಜೆಸ್ಕಾಂ ಸಿಬ್ಬಂದಿ ಮನಬಂದಂತೆ ಮರಗಳಿಗೆ ಕೊಡಲಿ ಏಟು ಕೊಡುತ್ತಿದ್ದಾರೆ.  

ADVERTISEMENT

ಪ್ರತಿ ಸಲ ಮಳೆಗಾಲ ಪೂರ್ವದಲ್ಲಿ ಸುರಿಯುವ ಅಕಾಲಿಕ ಮಳೆ ಹಾಗೂ ಮಳೆಗಾಲ ಶುರುವಾದ ನಂತರ ಇದು ಹೆಚ್ಚಾಗುತ್ತದೆ. ಎಲ್ಲಾದರೂ ಮರಗಳ ಕೊಂಬೆಗಳಿಗೆ ವಿದ್ಯುತ್‌ ತಂತಿ ತಾಕುತ್ತಿದ್ದರೆ ಆ ಭಾಗವಷ್ಟೇ ಕಡಿದು ಹಾಕಬೇಕು. ಆದರೆ, ಇಡೀ ಮರವನ್ನು ಬೇಕಾಬಿಟ್ಟಿ ಕತ್ತರಿಸುತ್ತಿರುವ ಕಾರಣ ಅದರ ಬೆಳವಣಿಗೆಗೆ ತೊಡಕಾಗಿ, ಹಾಳಾಗುತ್ತಿದೆ. ಒಂದಲ್ಲ, ಎರಡಲ್ಲ ನಗರದ ಹಲವು ಕಡೆಗಳಲ್ಲಿ ಜೆಸ್ಕಾಂನವರು ಈ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಮನ್ನಳ್ಳಿ ರಸ್ತೆಯ ಗುಂಪಾ, ಮೈಲೂರ್‌ನಲ್ಲಿ ಈ ಕೆಲಸ ಮಾಡಿದ್ದು, ರಸ್ತೆಯುದ್ದಕ್ಕೂ ಮರಗಳು ಕಡಿದು ಬಿದ್ದಿರುವುದು ನೋಡಬಹುದು.

‘ನಗರ ಪ್ರದೇಶದಲ್ಲಿ ಮೊದಲೇ ಮರಗಳ ಸಂಖ್ಯೆ ಕಡಿಮೆ ಇದೆ. ಇಂತಹದ್ದರಲ್ಲಿ ಇರುವ ಮರಗಳಿಗೂ ಕತ್ತರಿ ಹಾಕಿದರೆ ಹಸಿರು ಸಂಪೂರ್ಣ ಮಾಯವಾಗಿ ಕಾಂಕ್ರೀಟ್‌ ಕಾಡಾಗುತ್ತದೆ. ಇದಕ್ಕೆ ಅರಣ್ಯ ಇಲಾಖೆಯವರು ಕಡಿವಾಣ ಹಾಕಬೇಕು’ ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಿನಯ್‌ ಮಾಳಗೆ ಆಗ್ರಹಿಸಿದ್ದಾರೆ.

‘ಈಗೆಲ್ಲ ಬಹಳ ಸುಧಾರಿತ ತಂತ್ರಜ್ಞಾನ ಬಂದಿದೆ. ಕೇರಳ, ಕರ್ನಾಟಕದ ಕರಾವಳಿಯಲ್ಲಿ ಈ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಅಂತಹ ಮುಂದುವರಿದ ತಂತ್ರಜ್ಞಾನ ಅಳವಡಿಸಿಕೊಳ್ಳಲು ಸಾಧ್ಯವಾಗದಿದ್ದರೆ ತಂತಿಗಳಿಗೆ ಪ್ಲಾಸ್ಟಿಕ್‌ ಪೈಪ್‌ ಅಳವಡಿಸಬೇಕು. ಶಾರ್ಟ್‌ ಸರ್ಕಿಟ್ ಆಗುವುದನ್ನು ತಪ್ಪಿಸಬಹುದು. ಆದರೆ, ಪ್ರತಿ ಸಲ ಜೋರು ಬಿರುಗಾಳಿ ಮಳೆಯಾದ ನಂತರ ಮರಗಳಿಗೆ ಕತ್ತರಿ ಹಾಕುವುದು ಸರಿಯಲ್ಲ. ಒಂದು ಮರ ಬೆಳೆದು ದೊಡ್ಡದಾಗಬೇಕಾದರೆ ಹಲವು ವರ್ಷಗಳೇ ಬೇಕಾಗುತ್ತವೆ. ಅಲ್ಲದೇ ಜೆಸ್ಕಾಂ ಸಿಬ್ಬಂದಿಗೆ ಮರ ಕಡಿಯುವುದರ ಬಗ್ಗೆ ಉತ್ತಮ ತರಬೇತಿ ಕೊಡಬೇಕು. ಶಾರ್ಟ್‌ ಸರ್ಕಿಟ್ ಹೆಸರಲ್ಲಿ ಇಡೀ ಮರಕ್ಕೆ ಮರವನ್ನೇ ಕಡಿದು ಹಾಕುವುದು ಸರಿಯಲ್ಲ. ಅರಣ್ಯ ಇಲಾಖೆ ಕೂಡ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

‘ಬೆಂಗಳೂರು ಸೇರಿದಂತೆ ದೇಶದ ಹಲವು ಮಹಾನಗರಗಳಲ್ಲಿ ನೆಲದಡಿಯಿಂದ ವಿದ್ಯುತ್‌ ತಂತಿ ಹಾಕುತ್ತಿದ್ದಾರೆ. ಈ ವ್ಯವಸ್ಥೆ ನಮ್ಮ ಜಿಲ್ಲೆಗೆ ಬರಬೇಕಾದರೆ ಇನ್ನೂ ಕನಿಷ್ಠ ಐದಾರೂ ವರ್ಷಗಳು ಬೇಕಾಗುತ್ತದೆ. ಆದರೆ, ಅಲ್ಲಿಯವರೆಗೆ ಮರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಮಸ್ಯೆ ಆಗದಂತೆ ಕೆಲಸ ನಿರ್ವಹಿಸಲು ನಮ್ಮ ಸಿಬ್ಬಂದಿಗೆ ತಿಳಿಸಲಾಗುವುದು’ ಎಂದು ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ ರಮೇಶ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. 

ಇನ್ನು, ನಗರದ ಪ್ರಮುಖ ರಸ್ತೆಗಳ ವಿಭಜಕದಲ್ಲಿ ಮರಗಳು ವಿಶಾಲವಾಗಿ ಬೆಳೆದಿವೆ. ಆದರೆ, ಅವುಗಳ ಬೇರು ಗಟ್ಟಿಯಾಗಿ ಉಳಿದಿಲ್ಲ. ಬೇರು ಎಲ್ಲೆಡೆ ಹರಡಿಕೊಂಡು, ಬೆಳೆಯಲು ಅವಕಾಶವಿಲ್ಲದ ಕಾರಣ ಈ ಪರಿಸ್ಥಿತಿ ಸೃಷ್ಟಿಯಾಗಿದೆ. ಬಿರುಗಾಳಿ ಮಳೆ ಬಂದಾಗ ಮರಗಳು ನೆಲಕ್ಕೆ ಒರಗುತ್ತಿವೆ. ಇದರಿಂದ ಬಹಳಷ್ಟು ಅವಘಡಗಳು ಸಂಭವಿಸುತ್ತಿವೆ. ಇನ್ನಷ್ಟೇ ಮಳೆಗಾಲ ಆರಂಭವಾಗಬೇಕಿದೆ. ಸಮಸ್ಯೆ ಇರುವ ದುರ್ಬಲ ಮರಗಳನ್ನು ತೆರವುಗೊಳಿಸಿ, ಜೀವ ಹಾನಿ, ಆಸ್ತಿ ಹಾನಿ ಆಗದ ರೀತಿಯಲ್ಲಿ ಜೆಸ್ಕಾಂ ಹಾಗೂ ನಗರಸಭೆಯವರು ಎಚ್ಚರ ವಹಿಸಬೇಕೆನ್ನುವುದು ಸಾರ್ವಜನಿಕರ ಒತ್ತಾಸೆಯಾಗಿದೆ.

‘ಮನ್ನಳಿ ರಸ್ತೆಯುದ್ದಕ್ಕೂ  ರಸ್ತೆ ವಿಭಜಕಗಳಲ್ಲಿ ಮರಗಳು ವಿಶಾಲವಾಗಿ ಬೆಳೆದು ನಿಂತಿವೆ. ಆದರೆ, ಅವುಗಳ ಬೇರುಗಳು ಗಟ್ಟಿಯಿಲ್ಲ. ಇದರಿಂದಾಗಿ ಮೇಲಿಂದ ಮೇಲೆ ಮರಗಳು ಬೀಳುತ್ತಿವೆ. ದುರ್ಬಲವಾಗಿರುವ ಮರಗಳನ್ನು ಗುರುತಿಸಿ, ಅವುಗಳನ್ನು ತೆರವುಗೊಳಿಸಬೇಕು. ರಸ್ತೆ ವಿಭಜಕಕ್ಕೆ ಸರಿ ಹೊಂದುವ ಸಸಿಗಳನ್ನು ನೆಡಬೇಕು’ ಎಂದು ಹಾರೂರಗೇರಿಯ ನಿವಾಸಿ ರಾಜಕುಮಾರ ಒತ್ತಾಯಿಸಿದ್ದಾರೆ.

ಉಪ ಅರಣ್ಯ ಸಂರಕ್ಷಣಾಧಕಾರಿ ವಾನತಿ ಎಂ.ಎಂ. ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ. 

ವಿನಯ್‌ ಮಾಳಗೆ
ಬೀದರ್‌ನ ಗುಂಪಾ ರಸ್ತೆಯಲ್ಲಿ ರಸ್ತೆಬದಿಯ ಬೇವಿನ ಮರಗಳನ್ನು ಕತ್ತರಿಸಿರುವುದು
ಜೆಸ್ಕಾಂನವರು ಸಂಪೂರ್ಣವಾಗಿ ಮರಗಳನ್ನು ಕತ್ತರಿಸಬಾರದು. ಅದರ ಬದಲು ತಂತಿಗಳಿಗೆ ಪ್ಲಾಸ್ಟಿಕ್‌ ಅಳವಡಿಸಿದರೆ ಮರಗಳನ್ನು ಕಡಿಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮರಗಳನ್ನು ಉಳಿಸಿಕೊಳ್ಳಬಹುದು
ವಿನಯ್ ಮಾಳಗೆ ಸದಸ್ಯ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ
ಎಲ್ಲಿ ವಿದ್ಯುತ್‌ ತಂತಿಗಳಿಗೆ ಮರದ ಕಾಂಡಗಳು ತಾಗುತ್ತವೆಯೋ ಅಂತಹದ್ದನ್ನು ತೆಗೆಯಲು ಸೂಚಿಸಲಾಗಿದೆ. ಎಲ್ಲಾದರೂ ಇಡೀ ಮರಗಳನ್ನು ಕಡಿದು ಹಾಕುತ್ತಿದ್ದರೆ ಅದನ್ನು ಪರಿಶೀಲಿಸಿ ಆ ರೀತಿ ಮಾಡದಂತೆ ನಮ್ಮ ಸಿಬ್ಬಂದಿಗೆ ಸೂಚನೆ ನೀಡಲಾಗುವುದು
ರಮೇಶ ಪಾಟೀಲ ಕಾರ್ಯನಿರ್ವಾಹಕ ಎಂಜಿನಿಯರ್ ಜೆಸ್ಕಾಂ ಬೀದರ್‌

ಮಹಾನಗರ ಪಾಲಿಕೆಗೆ ಬೇಕು ಯೋಜನೆ

ಬೀದರ್ ನಗರಸಭೆಯನ್ನು ಈಗಾಗಲೇ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಇದಕ್ಕೆ ತಕ್ಕಂತೆ ಹಸಿರು ಪ್ರದೇಶ ಹೆಚ್ಚಿಸುವ ಯೋಜನೆ ಸಹ ರೂಪಿಸುವ ಹೊಣೆಗಾರಿಕೆ ಇದೆ. ಪ್ರತಿವರ್ಷ ಅರಣ್ಯ ಇಲಾಖೆಯಿಂದ ನೂರಾರು ಸಸಿಗಳನ್ನು ರಸ್ತೆಬದಿ ಹಚ್ಚಲಾಗುತ್ತದೆ. ಆದರೆ ರಸ್ತೆ ವಿಸ್ತರಣೆ ವಿದ್ಯುತ್‌ ತಂತಿಗಳಿಗೆ ತಾಗುತ್ತಿರುವುದು ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಾಗ ಮರಗಳನ್ನು ಕಡಿದು ಹಾಕಲಾಗುತ್ತದೆ. ಆ ರೀತಿ ಆಗದಂತೆ ಪಾಲಿಕೆ ಯೋಜನೆ ರೂಪಿಸಬೇಕು. ಒಂದು ಸಲ ಸಸಿಗಳು ನೆ್ಟ್ಟರೆ ಅವುಗಳನ್ನು ವ್ಯವಸ್ಥಿತವಾಗಿ ಪೋಷಿಸಿ ಬೆಳೆಸಬೇಕು. ಅವುಗಳು ದೊಡ್ಡದಾದ ನಂತರ ಯಾವ ಕಾರಣಕ್ಕೂ ಕಡಿಯದಂತೆ ನೋಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯತತ್ಪರವಾಗುವ ಅಗತ್ಯವಿದೆ ಎನ್ನುತ್ತಾರೆ ನಗರದ ನಿವಾಸಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.