ADVERTISEMENT

‘ಅವಕಾಶ ಬಳಸಿ ಭವಿಷ್ಯ ರೂಪಿಸಿಕೊಳ್ಳಿ’

ಯುವ ಸೌರಭ ಕಾರ್ಯಕ್ರಮ: ಜಿ.ಪಂ. ಉಪಾಧ್ಯಕ್ಷ ಪಾಟೀಲ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2019, 12:59 IST
Last Updated 11 ಜನವರಿ 2019, 12:59 IST
ಬೀದರ್‌ನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಿದ್ದ ಯುವ ಸೌರಭ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಡಾ. ಪ್ರಕಾಶ ಪಾಟೀಲ ಉದ್ಘಾಟಿಸಿದರು. ವಿಜಯಕುಮಾರ ರಾಮಲು, ಅರವಿಂದ ಅರಳಿ, ಶಾಲಿನಿ ಚಿಂತಾಮಣಿ, ರಾಜಶೇಖರ ವಟಗೆ ಇದ್ದರು
ಬೀದರ್‌ನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಿದ್ದ ಯುವ ಸೌರಭ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಡಾ. ಪ್ರಕಾಶ ಪಾಟೀಲ ಉದ್ಘಾಟಿಸಿದರು. ವಿಜಯಕುಮಾರ ರಾಮಲು, ಅರವಿಂದ ಅರಳಿ, ಶಾಲಿನಿ ಚಿಂತಾಮಣಿ, ರಾಜಶೇಖರ ವಟಗೆ ಇದ್ದರು   

ಬೀದರ್‌: ‘ಯುವಕರು ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಡಾ. ಪ್ರಕಾಶ ಪಾಟೀಲ ಸಲಹೆ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಶುಕ್ರವಾರ ಇಲ್ಲಿಯ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಆಯೋಜಿಸಿದ್ದ 2018-19ನೇ ಸಾಲಿನ ಯುವ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ’ ಎಂದು ಹೇಳಿದರು.

ADVERTISEMENT

‘ಭಾರತ ವಿಶ್ವದಲ್ಲೇ ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ವಿದ್ಯಾರ್ಥಿಗಳು ಬದಲಾವಣೆಗೆ ಹೊಂದಿಕೊಳ್ಳಬೇಕು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಬಹಳಷ್ಟು ಪ್ರಗತಿ ಕಾರ್ಯಗಳು ಆಗಿವೆ. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಸುಧಾರಣೆ ಆಗಿದೆ. ಬೆರಳೆಣಿಕೆಯಷ್ಟಿದ್ದ ಉನ್ನತ ಶಿಕ್ಷಣ ನೀಡುವ ಕಾಲೇಜುಗಳ ಸಂಖ್ಯೆ ಏರಿಕೆಯಾಗಿದೆ. ವಿದ್ಯಾರ್ಥಿಗಳು ಸರ್ಕಾರ ಜಾರಿಗೊಳಿಸಿರುವ ಯೊಜನೆಗಳ ಲಾಭ ಪಡೆಯಬೇಕು. ಕೀಳರಿಮೆ ತೊಡೆದು ಹಾಕಿ ಸಾಧಿಸುವ ಛಲ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಅರವಿಂದ ಅರಳಿ ಮಾತನಾಡಿ, ‘ಶಿಕ್ಷಣವೆಂದರೆ ಓದುವುದು ಮಾತ್ರ ಅಲ್ಲ. ಅದರೊಂದಿಗೆ ಸಂಗೀತ, ನೃತ್ಯ, ಕ್ರೀಡೆಯಂತಹ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು’ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಶಾಲಿನಿರಾಜು ಚಿಂತಾಮಣಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿಜಯಕುಮಾರ ರಾಮಲು, ಪ್ರಾಚಾರ್ಯ ಜಯತೀರ್ಥ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ ಉಪಸ್ಥಿತರಿದ್ದರು.

ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ರಂಜಿಸಿದವು. ಕಲಾವಿದ ಅಂಬರೀಷ್‌ ಶೀಲವಂತ ಹಿಂದೂಸ್ತಾನಿವಾದ್ಯಸಂಗೀತ, ಬಿ.ಕೃಷ್ಣ ಮುಖೇಡಕರ್‌ ಹಿಂದೂಸ್ತಾನಿ ಸಂಗೀತ, ಸೋನಾಕ್ಷಿ ಪಾಟೀಲ ವಚನ ಗಾಯನ, ಅಂಬಾದಾಸ ವಿಠ್ಠಲ್ ಜಾನಪದ ಗಾಯನ, ದಿವ್ಯಾ ಕುಲಕರ್ಣಿ ತಂಡ ನೃತ್ಯ ರೂಪಕ, ಸುದರ್ಶನ ರೆಡ್ಡಿ ತಂಡ ವರ್ಣ ಸಿಂಧೂ ನೃತ್ಯ, ಗಜಾನನ ಸುವರ್ಣಕರ್ ಕಥಾ ಕೀರ್ತನೆ, ಅಂಬಿಕಾ ಸಜ್ಜನ ಮತ್ತು ತಂಡ ಕೋಲಾಟ ಹಾಗೂ ಮಲ್ಲಿಕಾರ್ಜುನ ಪ್ರಕಾಶ ಹಾಗೂ ತಂಡದವರು ಡೊಳ್ಳು ಕುಣಿತ ಪ್ರದರ್ಶಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.