ADVERTISEMENT

ಮುಂಗಾರು ಬಿತ್ತನೆಗೆ ಹೊಲ ಹದಗೊಳಿಸಿದ ರೈತರು

​ಪ್ರಜಾವಾಣಿ ವಾರ್ತೆ
Published 28 ಮೇ 2021, 3:36 IST
Last Updated 28 ಮೇ 2021, 3:36 IST
ಔರಾದ್ ತಾಲ್ಲೂಕಿನ ಬಾಚೆಪಳ್ಳಿ ರೈತ ಬಿತ್ತನೆಗೆ ಭೂಮಿ ಹದ ಮಾಡುತ್ತಿರುವುದು
ಔರಾದ್ ತಾಲ್ಲೂಕಿನ ಬಾಚೆಪಳ್ಳಿ ರೈತ ಬಿತ್ತನೆಗೆ ಭೂಮಿ ಹದ ಮಾಡುತ್ತಿರುವುದು   

ಔರಾದ್: ಕೋವಿಡ್ ಭೀತಿ ನಡುವೆಯೂ ರೈತರು ಮುಂಗಾರು ಬಿತ್ತನೆಗೆ ಭೂಮಿ ಹದಗೊಳಿಸುತ್ತಿದ್ದಾರೆ.

ತಾಲ್ಲೂಕಿನ ಬಹುತೇಕ ರೈತರು ಮಳೆಯಾಶ್ರಿತ ಕೃಷಿ ಅವಲಂಬಿಸಿದ್ದಾರೆ. ಸೋಯಾ ಮುಂಗಾರಿನ ಪ್ರಮುಖ ಬೆಳೆಯಾಗಿದೆ. ಒಟ್ಟು 80 ಸಾವಿರ ಹೆಕ್ಟೇರ್ ಪೈಕಿ 55 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೋಯಾ ಬಿತ್ತಲಾಗುತ್ತದೆ. ಈ ಕಾರಣ ಕೃಷಿ ಇಲಾಖೆ ತಾಲ್ಲೂಕಿನ ಸೋಯಾ ಬೆಳೆಗಾರರಿಗೆ ಕೆಲ ಮಹತ್ವದ ಸಲಹೆ ನೀಡಿದೆ.

ಜೆಎಸ್-335 ಹಾಗೂ ಡಿಎಸ್‍ಬಿ-21 ತಳಿಯ ಪ್ರಮಾಣೀಕೃತ ಸೋಯಾ ಬೀಜ ಬಿತ್ತಲು ಸಲಹೆ ನೀಡಿದ್ದಾರೆ. ರೈತರು ಕಳೆದ ವರ್ಷ ತಾವೇ ಬೆಳೆದ ಬೀಜ ಆಗಿದ್ದಲ್ಲಿ ಮೊಳಕೆ ಪ್ರಮಾಣ ಪರೀಕ್ಷಿಸಿ ಶೇ 70ರಷ್ಟು ಮೊಳಕೆ ಬರುವಂತಿದ್ದಲ್ಲಿ ಮಾತ್ರ ಅಂಹತ ಬೀಜ ಬಿತ್ತನೆ ಮಾಡಬಹುದಾಗಿದೆ.

ADVERTISEMENT

ಸೋಯಾ ಜೂನ್ ಮೊದಲನೇ ವಾರದಿಂದ ಜುಲೈ ಮಧ್ಯದ ವರೆಗೆ ಬಿತ್ತಲು ಒಳ್ಳೆ ಅವಕಾಶ. ಒಂದು ವೇಳೆ ತಡವಾದರೆ ಸೋಯಾ ತೊಗರಿ ಜತೆ ಅಂತರ ಬೆಳೆಯಾಗಿ ಬೆಳೆಯಬೇಕು. ರೈತರು ಪೂರ್ಣವಾಗಿ ಸೋಯಾ ಬೆಳೆ ಮೇಲೆ ಅವಲಂಬನೆಯಾಗಿರದೆ ಉದ್ದು, ಹೆಸರು, ತೊಗರಿ ಬೆಳೆಯೂ ಬೆಳೆಯಬೇಕು.

ಸೋಯಾ ಬಿತ್ತನೆಗೆ 80 ರಿಂದ 100 ಮಿ.ಮೀ. ಮಳೆಯ ಅಗತ್ಯವಾಗಿದೆ. ಮಳೆ ಅಭಾವ ಆದರೆ ನೀರಾವರಿ ಸೌಲಭ್ಯ ಇದ್ದವರು ತುಂತುರು ನೀರಾವರಿ ಘಟಕದಿಂದ ನೀರು ಹಾಯಿಸಿ ಬಿತ್ತನೆ ಮಾಡಬಹುದಾಗಿದೆ. ಎತ್ತು ಬಳಸಿ ಬಿತ್ತನೆ ಮಾಡುವುದು ಉತ್ತಮ. ಟ್ರ್ಯಾಕ್ಟರ್ ಉಪಯೋಗಿಸಿದ್ದಲ್ಲಿ ಬೀಜ ಎರಡು ಇಂಚುಗಿಂತಲೂ ಆಳ ಹೋಗದಂತೆ ನೋಡಿಕೊಳ್ಳಬೇಕು. ಅಧಿಕೃತ ಅಂಗಡಿಗಳಲ್ಲೇ ಬೀಜ ಮತ್ತು ಗೊಬ್ಬರ ಖರೀದಿಸಬೇಕು. ಈ ಕುರಿತು ಏನಾದರೂ ಸಲಹೆ ಬೇಕಿದ್ದರೆ ಆಯಾ ರೈತ ಸಂರ್ಪಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಸಹಾಯಕ ನಿರ್ದೇಶಕ ಅಬ್ದುಲ್ ಮಾಜೀದ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.