ADVERTISEMENT

ಬಸವಗಿರಿಯಲ್ಲಿ ಅದ್ದೂರಿ ವಚನ ವಿಜಯೋತ್ಸವ 

ಫೆ. 10ರಿಂದ 12ರ ವರೆಗೆ ಬಸವಾದಿ ಶರಣರ ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2025, 16:32 IST
Last Updated 7 ಫೆಬ್ರುವರಿ 2025, 16:32 IST
ಅಕ್ಕ ಗಂಗಾಂಬಿಕೆ
ಅಕ್ಕ ಗಂಗಾಂಬಿಕೆ   

ಬೀದರ್: ‘ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ನಗರದ ಬಸವಗಿರಿಯಲ್ಲಿ ಫೆ. 10ರಿಂದ 12 ರವರೆಗೆ 23ನೇ ವಚನ ವಿಜಯೋತ್ಸವ ಹಮ್ಮಿಕೊಳ್ಳಲಾಗಿದೆ. ಮೂರು ದಿನಗಳ ಅವಧಿಯಲ್ಲಿ ಅನೇಕ ಕಾರ್ಯಕ್ರಮಗಳು ಜರುಗಲಿವೆ’ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕ ಗಂಗಾಂಬಿಕೆ ತಿಳಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಫೆ.10ರಂದು ಬೆಳಿಗ್ಗೆ 8ಕ್ಕೆ ಷಟಸ್ಥಲ ಧ್ವಜಾರೋಹಣ ಹಾಗೂ ಸಾಮೂಹಿಕ ಇಷ್ಟಲಿಂಗ ಪೂಜಾ ಯೋಗದೊಂದಿಗೆ ವಚನ ವಿಜಯೋತ್ಸವ ಆರಂಭವಾಗಲಿದೆ. ಬೆಳಿಗ್ಗೆ 11ಕ್ಕೆ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ವಚನ ವಿಜಯೋತ್ಸವ ಹಾಗೂ ಸಾಮರಸ್ಯ ಗೋಷ್ಠಿಗೆ ಚಾಲನೆ ನೀಡುವರು. ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಹುಲಸೂರಿನ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ, ವಚನ ವಿಜಯೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು.

ಪೌರಾಡಳಿತ ಸಚಿವ ರಹೀಂ ಖಾನ್ ಅವರು ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವರು. ಧಮ್ಮಾನಂದ ಮಹಾಥೆರೊ, ನೆಲ್ಸನ್ ಸುಮಿತ್ರ, ಬಲವಂತಸಿಂಗ್, ಕಾಜಿ ಎಸ್.ಎಚ್. ಸಮ್ಮುಖ ವಹಿಸುವರು. ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ, ಭೀಮರಾವ್ ಪಾಟೀಲ, ಬುಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಕಾಂಗ್ರೆಸ್‌ ಮುಖಂಡ ರಾಜಶೇಖರ ಪಾಟೀಲ ಅತಿಥಿಗಳಾಗಿ ಪಾಲ್ಗೊಳ್ಳುವರು. ಮೈಸೂರಿನ ಶಂಕರ ದೇವನೂರು ಅನುಭಾವ ನೀಡುವರು ಎಂದು ತಿಳಿಸಿದರು.

ADVERTISEMENT

‘ಮಧ್ಯಾಹ್ನ 3ಕ್ಕೆ ಜರುಗುವ ‘ವಚನ ಸಾಹಿತ್ಯದ ವಿವಿಧ ಆಯಾಮಗಳು’ ಗೋಷ್ಠಿಯನ್ನು ಮಾಜಿ ಸಂಸದ ಉಮೇಶ ಜಾಧವ ಉದ್ಘಾಟಿಸುವರು. ಹುಬ್ಬಳ್ಳಿಯ ಶಶಿಧರ ಕರವೀರ ಶೆಟ್ಟರ ಅನುಭಾವ ನೀಡುವರು. ಸಂಜೆ 6ಕ್ಕೆ ‘ಮಹಾಕ್ರಾಂತಿ’ ನಾಟಕ ಪ್ರದರ್ಶನಗೊಳ್ಳಲಿದೆ’ ಎಂದು ಹೇಳಿದರು.

11 ರಂದು ಬೆಳಿಗ್ಗೆ 8ಕ್ಕೆ ನಡೆಯುವ ಸಾಮೂಹಿಕ ವಚನ ಪಾರಾಯಣವನ್ನು ಡಾ. ಗುರಮ್ಮ ಸಿದ್ಧಾರೆಡ್ಡಿ, ಮಧ್ಯಾಹ್ನ 3ಕ್ಕೆ ಜರುಗುವ ಯೋಗ ಆರೋಗ್ಯ ಗೋಷ್ಠಿಯನ್ನು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಉದ್ಘಾಟಿಸುವರು. ಸಂಜೆ 6ಕ್ಕೆ ಸಾಂಸ್ಕೃತಿಕ ಸೌರಭ ನಡೆಯಲಿದ್ದು, ರಾಷ್ಟ್ರೀಯ ಜಾನಪದ ಬುಡಕಟ್ಟು ಕಲಾ ಪರಿಷತ್ ಸಹಯೋಗದಲ್ಲಿ ವಿವಿಧ ರಾಜ್ಯಗಳ ಕಲಾ ತಂಡದವರು ಕಲಾ ಪ್ರದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.

ಫೆ. 12ರಂದು ಬೆಳಿಗ್ಗೆ 9ಕ್ಕೆ ಮೆರವಣಿಗೆ, ಮಧ್ಯಾಹ್ನ 2ಕ್ಕೆ ವಚನ ಸಾಹಿತ್ಯಕ್ಕೆ ಪಟ್ಟಾಭಿಷೇಕ ಜರುಗಲಿದೆ. ಬಸವಲಿಂಗ ಪಟ್ಟದ್ದೇವರು, ಕೂಡಲಸಂಗಮದ ಮಾತೆ ಗಂಗಾದೇವಿ, ಇಳಕಲ್‍ ಗುರುಮಹಾಂತ ಸ್ವಾಮೀಜಿ, ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಶಿವಾನಂದ ಸ್ವಾಮೀಜಿ,  ಅಕ್ಕ ಗಂಗಾಂಬಿಕೆ ಸಾನ್ನಿಧ್ಯ ವಹಿಸುವರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸುವರು. ಸಂಸದ ಸಾಗರ್ ಖಂಡ್ರೆ, ಶಾಸಕರಾದ ಪ್ರಭು ಚವಾಣ್, ಶರಣು ಸಲಗರ್, ಶಶಿಕಲಾ ಜೊಲ್ಲೆ, ಡಾ. ಸಿದ್ದು ಪಾಟೀಲ, ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಎಂ.ಜಿ. ಮುಳೆ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಭಾರತೀಯ ಬಸವ ಬಳಗದ ರಾಜ್ಯ ಅಧ್ಯಕ್ಷ ಬಾಬುವಾಲಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ, ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮಿಠಾರೆ, ವಚನ ವಿಜಯೋತ್ಸವ ಕಾರ್ಯಾಧ್ಯಕ್ಷ ವಿಶ್ವನಾಥ ಕಾಜಿ, ಮೆರವಣಿಗೆ ಸಮಿತಿಯ ಅಧ್ಯಕ್ಷ ಜೈರಾಜ್ ಖಂಡ್ರೆ, ಪ್ರಮುಖರಾದ ರಾಜೇಂದ್ರಕುಮಾರ ಗಂದಗೆ, ಧನರಾಜ ಹಂಗರಗಿ, ಶಂಕರೆಪ್ಪ ಹೊನ್ನಾ, ಚಂದ್ರಕಾಂತ ಮಿರ್ಚೆ, ವಚನ ವಿಜಯೋತ್ಸವ ಮಾಧ್ಯಮ ಸಮಿತಿಯ ಸಂಯೋಜಕ ವಿರೂಪಾಕ್ಷ ಗಾದಗಿ, ವೀರಭದ್ರಪ್ಪ ಬುಯ್ಯಾ, ಬಸವರಾಜ ಪಾಟೀಲ ಹಾರೂರಗೇರಿ, ರಾಚಪ್ಪ ಪಾಟೀಲ, ಶಿವರಾಜ ಮದಕಟ್ಟಿ, ಪ್ರಕಾಶ್ ಸಾವಳಗಿ, ನಂದಕುಮಾರ ಪಾಟೀಲ, ಸುರೇಶ ಅಲಿಯಂಬರ್, ಸಂಜುಕುಮಾರ, ಶಿವಶಂಕರ ಟೋಕರೆ, ಉಷಾ ಮಿರ್ಚೆ, ಜ್ಞಾನದೇವಿ ಬಕ್ಕಚೌಡಿ, ಜಗದೇವಿ ಮದಕಟ್ಟಿ, ವಿದ್ಯಾವತಿ ಉಂಡೆ ಹಾಜರಿದ್ದರು.

ಅಕ್ಕ ಅನ್ನಪೂರ್ಣ ತಾಯಿ ಮಹಾ ಮಂಟಪ

ವಚನ ವಿಜಯೋತ್ಸವಕ್ಕೆ ಭರದ ಸಿದ್ಧತೆಗಳು ನಡೆದಿವೆ. ಬಸವಗಿರಿಯಲ್ಲಿ 10 ಸಾವಿರ ಜನ ಕುಳಿತುಕೊಳ್ಳಬಹುದಾದ ಅಕ್ಕ ಅನ್ನಪೂರ್ಣ ತಾಯಿ ಮಹಾ ಮಂಟಪ ನಿರ್ಮಿಸಲಾಗಿದೆ ಎಂದು ಅಕ್ಕ ಗಂಗಾಂಬಿಕೆ ತಿಳಿಸಿದರು. ವಿವಿಧೆಡೆಯ ಭಕ್ತರು ಪಾಲ್ಗೊಳ್ಳಲಿದ್ದಾರೆ. ಭಕ್ತರಿಗೆ ಮೂರೂ ದಿನ ಪ್ರಸಾದ ವ್ಯವಸ್ಥೆ ಇರಲಿದೆ. ಕುಟ್ಟಿದ ಗೋಧಿ ಹುಗ್ಗಿ ಅನ್ನ ಸಾಂಬಾರು ಸಜ್ಜೆ ರೊಟ್ಟಿ ಜೋಳದ ರೊಟ್ಟಿ ಮುಂತಾದವು ಹಸಿವು ತಣಿಸಲಿವೆ ಎಂದು ಹೇಳಿದರು.

Cut-off box - ನಗರ ಸಾರಿಗೆ ಬಸ್ ವ್ಯವಸ್ಥೆ ವಚನ ವಿಜಯೋತ್ಸವಕ್ಕೆ ನಗರದ ವಿವಿಧೆಡೆಯಿಂದ ನಗರ ಸಾರಿಗೆ ಬಸ್‍ಗಳನ್ನು ಓಡಿಸಲು ಸಾರಿಗೆ ಇಲಾಖೆ ಸಮ್ಮತಿಸಿದೆ ಎಂದು ಅಕ್ಕ ಗಂಗಾಂಬಿಕೆ ಹೇಳಿದರು. ಗುಂಪಾ ನೌಬಾದ್ ಮಂಗಲಪೇಟೆ ಚೌಬಾರದಿಂದ ಬೆಳಿಗ್ಗೆ 7.30 ರಿಂದ ರಾತ್ರಿವರೆಗೆ ನಗರ ಸಾರಿಗೆ ಬಸ್‍ಗಳು ಬಸವಗಿರಿಗೆ ಸಂಚರಿಸಲಿವೆ ಎಂದು ತಿಳಿಸಿದರು.

ಲಿಂಗಾಯತ ಧರ್ಮದ ಗ್ರಂಥ ಮೆರವಣಿಗೆ

ಫೆ. 9 ರಂದು ಗುಂಪಾದಿಂದ ಬಸವಗಿರಿವರೆಗೆ ಬೈಕ್ ಹಾಗೂ ಕಾರುಗಳ ರ್‍ಯಾಲಿ ನಡೆಯಲಿದೆ. ಫೆ. 12ರಂದು ಬೆಳಿಗ್ಗೆ 9ಕ್ಕೆ ನಗರದ ಬಸವೇಶ್ವರ ವೃತ್ತದಿಂದ ಬಸವಗಿರಿವರೆಗೆ ಸಮಗ್ರ ವಚನ ಸಾಹಿತ್ಯ ಹಾಗೂ ಲಿಂಗಾಯತ ಧರ್ಮ ಗ್ರಂಥದ ಭವ್ಯ ಮೆರವಣಿಗೆ ನಡೆಯಲಿದೆ ಎಂದು ಅಕ್ಕ ಗಂಗಾಂಬಿಕೆ ತಿಳಿಸಿದರು. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಚಾಲನೆ ನೀಡುವರು. ಮೆರವಣಿಗೆಯಲ್ಲಿ ಸಾವಿರಾರು ಶರಣ ಶರಣೆಯರು ತಲೆ ಮೇಲೆ ಗುರುವಚನ ಹೊತ್ತು ಪಾಲ್ಗೊಳ್ಳುವರು. ವಚನ ಸಾಹಿತ್ಯ ಹೊತ್ತ ಪುಷ್ಪಾಲಂಕೃತ ರಥ 25 ಕಲಾ ತಂಡಗಳು ಛತ್ರಿ– ಚಾಮರ ಬಸವ ಧ್ವಜಗಳು ಶರಣರ ವೇಷಧಾರಿಗಳು ಪ್ರಮುಖ ಆಕರ್ಷಣೆಯಾಗಲಿದ್ದಾರೆ ಎಂದು ಹೇಳಿದರು.

ಗೋರುಚಗೆ ಪುರಸ್ಕಾರ

ಸಾಹಿತಿ ಡಾ. ಗೋ.ರು. ಚನ್ನಬಸಪ್ಪ ಅವರಿಗೆ 2025ನೇ ಸಾಲಿನ ಗುರುಬಸವ ಪುರಸ್ಕಾರ ಪ್ರದಾನ ಮಾಡಲಾಗುವುದು. ವಿವಿಧ ಕ್ಷೇತ್ರಗಳ 14 ಸಾಧಕರಿಗೆ ಶರಣ ಸೇವಾ ಪುರಸ್ಕಾರ ನೀಡಲಾಗುವುದು ಎಂದು ಅಕ್ಕ ಗಂಗಾಂಬಿಕೆ ತಿಳಿಸಿದರು.

ಸಂಧಾನ ಸಭೆಗೆ ಪ್ರಭುದೇವರು ಗೈರು ‘ಜನವರಿ 25ರಂದು ಎರಡೂ ಬಣದವರನ್ನು ಸೇರಿಸಿ ಸಂಧಾನ ಸಭೆ ಹಮ್ಮಿಕೊಂಡಿದ್ದೆವು. ಆದರೆ ಪ್ರಭುದೇವರು ಸ್ವಾಮೀಜಿ ಆದಿಯಾಗಿ ಆ ಬಣ್ಣದ ಯಾರೊಬ್ಬರೂ ಸಭೆಗೆ ಹಾಜರಾಗಲಿಲ್ಲ. ಬೇಸರದ ಸಂಗತಿ’ ಎಂದು ಮುಖಂಡ ಶಿವಶರಣಪ್ಪ ವಾಲಿ ಸ್ಪಷ್ಟಪಡಿಸಿದರು. ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ಬಸವ ಸೇವಾ ಪ್ರತಿಷ್ಠಾನದಿಂದ ವಚನ ವಿಜಯೋತ್ಸವವೊಂದೇ ಕಾರ್ಯಕ್ರಮ ಆಚರಿಸಲಾಗುತ್ತದೆ. ಪ್ರತ್ಯೇಕ ವಚನ ವಿಜಯೋತ್ಸವ ಕಾರ್ಯಕ್ರಮ ಆಚರಿಸಲು ಎಲ್ಲರಿಗೂ ಅಧಿಕಾರ ಇದೆ. ಆದರೆ ಬಸವ ಸೇವಾ ಪ್ರತಿಷ್ಠಾನದ ಹೆಸರೇಳಿಕೊಂಡು ಕಾರ್ಯಕ್ರಮ ಆಚರಿಸಲು ಬರುವುದಿಲ್ಲ’ ಎಂದು ಹೇಳಿದರು. ‘ಇದು ಸಮಾಜದ ಆಸ್ತಿ. ಈ ಆಸ್ತಿಗಾಗಿ ಎರಡೂ ಬಣಗಳು ಬಡಿದಾಡುತ್ತಿರುವುದು ಸರಿಯಲ್ಲ. ಇದಕ್ಕೆ ಪ್ರತ್ಯೇಕ ಸಮಿತಿ ರಚನೆ ಮಾಡಲಾಗಿದೆ. ಬರುವ ದಿನಗಳಲ್ಲಿ ಇಲ್ಲಿರುವ ಎಲ್ಲ ಸಮಸ್ಯೆ ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.