ಬೀದರ್: ಜಿಲ್ಲೆಯ ವಿವಿಧೆಡೆ ಶುಕ್ರವಾರ ವರಮಹಾಲಕ್ಷ್ಮಿ ಪೂಜೆ ನೆರವೇರಿಸಲಾಯಿತು. ಬೇರೆ ಜಿಲ್ಲೆಗಳಿಂದ ಇಲ್ಲಿಗೆ ಬಂದು ನೆಲೆಸಿರುವ ಕುಟುಂಬದವರೇ ಮಹಾಲಕ್ಷ್ಮಿಯ ಪೂಜೆ ನೆರವೇರಿಸಿ ಭಕ್ತಿಭಾವ ಮೆರೆದರು.
ಮಣೆಯ ಮೇಲೆ ಹೊಸ ಬಟ್ಟೆಯನ್ನು ಹಾಕಿ ಅದರ ಮೇಲೆ ಅಕ್ಕಿ ಹರಡಿ ಕಳಶ ಇಟ್ಟು ಅದಕ್ಕೆ ಕುಂಕುಮ, ಅರಿಸಿಣ ಹಚ್ಚಲಾಗಿತ್ತು. ಕಳದಲ್ಲಿ ತೆಂಗಿನಕಾಯಿ ಇಟ್ಟು ಲಕ್ಷ್ಮೀದೇವಿಯ ಮುಖವಾಡ ಜೋಡಿಸಲಾಗಿತ್ತು. ಕಲಕ್ಕೆ ಹೊಸ ರವಿಕೆ ಬಟ್ಟೆ ಅಥವಾ ಸೀರೆ ಉಡಿಸಿ, ಒಡವೆ ಹಾಕಿ ಅಲಂಕಾರ ಮಾಡಲಾಗಿತ್ತು.
ವೀಳ್ಯದ ಎಲೆ, ಮಾವಿನ ಎಲೆಗಳನ್ನು ಜೋಡಿಸಿ ಇಡಲಾಗಿತ್ತು. ದೇವರ ಮುಂದೆ ರಂಗೋಲಿ ಬಿಡಿಸಲಾಗಿತ್ತು.
ಮಧ್ಯಾಹ್ನ ದೇವಿಗೆ ಪಾಯಸ, ಹೋಳಿಗೆ, ಬದನೆಕಾಯಿ, ಅನ್ನ ಹಾಗೂ ಕಟ್ಟಿನ ಸಾರು ನೈವೇದ್ಯ ರೂಪದಲ್ಲಿ ಸಮರ್ಪಿಸಲಾಯಿತು. ನಂತರ ಗೃಹಿಣಿಯರು ಸಾಮೂಹಿಕವಾಗಿ ಆರತಿ ಬೆಳಗಿದರು. ವಿಷ್ಣುವಿನ ಪತ್ನಿ ಲಕ್ಷ್ಮೀದೇವಿಗೆ ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಿ ಆಹಾರ, ಆರೋಗ್ಯ, ಸಂಪತ್ತು, ಸಂತಾನ, ದೀರ್ಘ ಸುಮಂಗಲಿಯಾಗಿ ಬಾಳುವಂತೆ ಹರಸು ಎಂದು ದೇವರಲ್ಲಿ ಪ್ರಾರ್ಥಿಸಿದರು.
ಮನೆಯ ಒಡತಿ ಪೂಜೆಯ ನಂತರ ಮಹಿಳೆಯರಿಗೆ ತಾಂಬೂಲ ನೀಡಿದರು. ಪೂಜೆ ಪೂರ್ಣಗೊಂಡ ನಂತರ ಸಾಮೂಹಿಕ ಭೋಜನ ಮಾಡಿದರು.
‘ಹಿಂದೂ ಧರ್ಮದ ಶುಭ ವ್ರತಗಳಲ್ಲಿ ವರಮಹಾಲಕ್ಷ್ಮಿ ಒಂದಾಗಿದೆ. ಶ್ರವಣ ಮಾಸದಲ್ಲಿ ಹುಣ್ಣಿಮೆಗೂ ಮೊದಲು ಬರುವ ಶುಕ್ರವಾರದಂದು ವ್ರತಾಚರಣೆ ಮಾಡುವ ಪದ್ಧತಿ ಇದೆ. ಭಕ್ತರು ಬೆಳಿಗ್ಗೆ ಶುಭ ಸಮಯದಲ್ಲಿ ದೇವರ ಮೂರ್ತಿ ಇಟ್ಟು ಹೂವು, ಹಣ್ಣು, ಕಾಯಿ ಇಟ್ಟು ವಿಶೇಷ ಪೂಜೆ ಸಲ್ಲಿಸಿದರು’ ಎಂದು ಬೀದರ್ ಜಿಲ್ಲಾ ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಕಸ್ತೂರಿ ಪಟಪಳ್ಳಿ ತಿಳಿಸಿದರು.
‘ಬೀದರ್ ಜಿಲ್ಲೆಯಲ್ಲಿ ವರಮಹಾಲಕ್ಷ್ಮಿ ವ್ರತಾಚರಣೆಯ ಪದ್ಧತಿ ಇಲ್ಲ. ದೇವರ ಮೇಲಿನ ನಂಬಿಕೆ ಹಾಗೂ ಭಕ್ತಿಯಿಂದಾಗಿ ವರಮಹಾಲಕ್ಷ್ಮಿ ಪೂಜೆ ನೆರವೇರಿಸಿದ್ದೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.