ADVERTISEMENT

ವೀರಶೈವ ಲಿಂಗಾಯತ ಮಹಾಸಭಾ ಸೂಕ್ತವಲ್ಲ

ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ಮೇ 2022, 3:16 IST
Last Updated 19 ಮೇ 2022, 3:16 IST
ಬಸವರಾಜ ಧನ್ನೂರ
ಬಸವರಾಜ ಧನ್ನೂರ   

ಬೀದರ್: ಅಖಿಲ ಭಾರತ ವೀರಶೈವ ಮಹಾಸಭಾಕ್ಕೆ ‘ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ’ ಎಂದು ನಾಮಕರಣ ಮಾಡಲು ನಿರ್ಧರಿಸಿರುವುದು ಸೂಕ್ತವಲ್ಲ ಎಂದು ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಹೇಳಿದ್ದಾರೆ.

110 ವರ್ಷಗಳ ಇತಿಹಾಸ ಹೊಂದಿರುವ ಮಹಾಸಭಾಕ್ಕೆ 1940 ರಲ್ಲಿ ಕುಂಭಕೋಣಂನಲ್ಲಿ ಜರುಗಿದ್ದ ಮಹಾಸಭಾದ ವಾರ್ಷಿಕ ಮಹಾಸಭೆಯಲ್ಲೇ ‘ಅಖಿಲ ಭಾರತ ಲಿಂಗಾಯತ ಮಹಾಸಭಾ’ ಎಂದು ಹೆಸರಿಡಲು ನಿರ್ಣಯಿಸಲಾಗಿತ್ತು. 82 ವರ್ಷ ಕಳೆದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಲಿಂಗಾಯತ ಧರ್ಮವಾಗಿದ್ದರೆ, ವೀರಶೈವ ಅದರ 102 ಒಳ ಪಂಗಡಗಳ ಪೈಕಿ ಒಂದು. ಹೀಗಾಗಿ ಮಹಾಸಭಾದ ಹೆಸರು ಅಖಿಲ ಭಾರತ ಲಿಂಗಾಯತ ಮಹಾಸಭಾ ಎಂದು ಬದಲಿಸಿದರೆ ಮಾತ್ರ ಪರಿಪೂರ್ಣವಾಗುತ್ತದೆ. ವೀರಶೈವ ಮತ್ತು ಲಿಂಗಾಯತ ಸೇರಿಸಿ ನಾಮಕರಣ ಮಾಡಿದರೆ ಅದಕ್ಕೆ ಯಾವುದೇ ಅರ್ಥ ಇರುವುದಿಲ್ಲ. ತಾತ್ವಿಕವಾಗಿ ಕೂಡ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಹಿಂದೆ ಮಹಾಸಭಾದಿಂದ ವೀರಶೈವ-ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಕೇಂದ್ರಕ್ಕೆ ಮೂರು ಬಾರಿ ಪ್ರಸ್ತಾವ ಸಲ್ಲಿಸಿದ್ದರೂ ತಿರಸ್ಕಾರಗೊಂಡಿತ್ತು. ನಂತರ ಅಧ್ಯಯನ ನಡೆಸಿದ ನಾಗಮೋಹನ್ ದಾಸ್ ಸಮಿತಿಯು ಸ್ವತಂತ್ರ ಧರ್ಮಕ್ಕೆ ಲಿಂಗಾಯತವೇ ಸೂಕ್ತ ಎಂದು ವರದಿ ಸಲ್ಲಿಸಿತ್ತು. ಬಳಿಕ ಅಂದಿನ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿತ್ತು ಎಂದು ತಿಳಿಸಿದ್ದಾರೆ.

ಆಗಿನ ಸಂದರ್ಭದಲ್ಲಿ ಮಹಾಸಭಾ ಸಾಥ್ ನೀಡಿದ್ದರೆ, ಆಗಲೇ ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಹಾಗೂ ಅಲ್ಪಸಂಖ್ಯಾತರ ಸ್ಥಾನಮಾನ ದೊರಕುತ್ತಿತ್ತು. ಆದರೆ, ಮಹಾಸಭಾ ವಿರೋಧಿಸಿದ್ದರಿಂದ ಅವಕಾಶ ಕೈತಪ್ಪಿ ಹೋಯಿತು. ಈಗ ಮಹಾಸಭಾಕ್ಕೆ ವೀರಶೈವ ಲಿಂಗಾಯತ ಎಂದು ಹೆಸರಿಡಲು ನಿರ್ಣಯಿಸುವ ಮೂಲಕ ಮತ್ತೆ ಗೊಂದಲ ಸೃಷ್ಟಿಸಲಾಗುತ್ತಿದೆ. ಮಹಾಸಭಾಕ್ಕೆ ಲಿಂಗಾಯತ ಮಹಾಸಭಾ ಎಂದು ಹೆಸರಿಟ್ಟು, ಒಗ್ಗಟ್ಟಿನಿಂದ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಹೋರಾಟಕ್ಕೆ ಅಣಿಯಾದರೆ ಸಮಾಜಕ್ಕೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಈ ಮೊದಲು ವೀರಶೈವ ಲಿಂಗಾಯತರಿಗೆ ಅಲ್ಪಸಂಖ್ಯಾತ ಮಾನ್ಯತೆ ಕೊಡಬೇಕು ಎಂದು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದ ಮಹಾಸಭಾ ಇದೀಗ ಒಬಿಸಿ ಪಟ್ಟಿಗೆ ಸೇರಿಸುವ ಬೇಡಿಕೆ ಮಂಡಿಸಿದ್ದೇಕೆ ಎನ್ನುವುದು ತಿಳಿಯದಾಗಿದೆ ಎಂದು ಹೇಳಿದ್ದಾರೆ.

ಒಬಿಸಿ ಪಟ್ಟಿಗೆ ಸೇರಿಸಲು ನಮ್ಮದೇನೂ ಅಭ್ಯಂತರ ಇಲ್ಲ. ಆದರೆ, ಅಲ್ಪಸಂಖ್ಯಾತ ಮಾನ್ಯತೆ ಬೇಡಿಕೆಯನ್ನು ಏಕೆ ಕೈಬಿಡಲಾಯಿತು ಎನ್ನುವುದನ್ನು ಮಹಾಸಭೆ ಸ್ಪಷ್ಟಪಡಿಸಬೇಕು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.