ADVERTISEMENT

ಚಳಿ: ಗಡಗಡ ನಡುಗಿದ ಬೀದರ್‌ ಜಿಲ್ಲೆಯ ಜನ

8.6 ಡಿಗ್ರಿ ಸೆಲ್ಸಿಯಸ್‌ಗೆ ಇಳಿದ ಕನಿಷ್ಠ ಉಷ್ಣಾಂಶ

​ಪ್ರಜಾವಾಣಿ ವಾರ್ತೆ
Published 30 ಜನವರಿ 2022, 13:32 IST
Last Updated 30 ಜನವರಿ 2022, 13:32 IST
ಬೀದರ್ ಜಿಲ್ಲೆಯ ಕಮಲನಗರದಲ್ಲಿ ಚಳಿಗೆ ಬೆಂಕಿ ಕಾಯಿಸಿಕೊಳ್ಳುತ್ತಿರುವ ಜನ
ಬೀದರ್ ಜಿಲ್ಲೆಯ ಕಮಲನಗರದಲ್ಲಿ ಚಳಿಗೆ ಬೆಂಕಿ ಕಾಯಿಸಿಕೊಳ್ಳುತ್ತಿರುವ ಜನ   

ಬೀದರ್: ಜಿಲ್ಲೆಯಲ್ಲಿ ಒಂದು ತಿಂಗಳಿನಿಂದ ಚಳಿ ನಿರಂತರವಾಗಿ ಮುಂದುವರಿದಿದೆ. ವಾರದಿಂದ 10 ಡಿಗ್ರಿ ಸೆಲ್ಸಿಯಸ್ ಇದ್ದ ಕನಿಷ್ಠ ಉಷ್ಣಾಂಶ ಭಾನುವಾರ 8.6 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದು, ಜನರನ್ನು ಇನ್ನಷ್ಟು ನಡುಗಿಸಿತು. ಬೆಳಿಗ್ಗೆ 10ರವರೆಗೆ ಚಳಿ ಇತ್ತು.

ಹಾಲು ಹಾಗೂ ಪತ್ರಿಕೆ ವಿತರಕರು ಚಳಿಯಿಂದ ಹೆಚ್ಚು ನಲುಗಿದರು. ಚಳಿ ಕಾರಣ ಬಹಳ ಹೊತ್ತಿನವರೆಗೂ ಜನರು ಮನೆಗಳ ಬಾಗಿಲು ತೆರೆಯಲಿಲ್ಲ ಮತ್ತು ವಾಯುವಿಹಾರಕ್ಕೂ ತೆರಳಲಿಲ್ಲ.

ಹೊರಬಂದ ಕೆಲವರು ಹೋಟೆಲ್‌ನಲ್ಲಿ ಚಹಾ, ಕಾಫಿ ಕುಡಿಯಲು ಮುಗಿಬಿದ್ದರು. ಇನ್ನಷ್ಟು ಮಂದಿ ಹುಲ್ಲು ಹಾಗೂ ಒಣ ಕಟ್ಟಿಗೆಗಳನ್ನು ಒಂದೆಡೆ ಸೇರಿಸಿ ಸುಟ್ಟು, ಬೆಂಕಿ ಕಾಯಿಸಿಕೊಂಡರು.

ADVERTISEMENT

ದಾಖಲೆ ಕನಿಷ್ಠ ಉಷ್ಣಾಂಶ: ‘8.6 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ಈ ವರ್ಷದ ದಾಖಲೆಯಾಗಿದೆ. ಜಿಲ್ಲೆಯಲ್ಲಿ ಫೆಬ್ರುವರಿ 10ರವರೆಗೂ ಚಳಿ ಇರಲಿದ್ದು, ನಂತರ ನಿಧಾನವಾಗಿ ಕಡಿಮೆಯಾಗಲಿದೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ವಿಭಾಗದ ತಾಂತ್ರಿಕ ಅಧಿಕಾರಿ ಬಸವರಾಜ ಬಿರಾದಾರ ತಿಳಿಸಿದ್ದಾರೆ.

2015ರ ಜನವರಿ 10 ರಂದು ಬೀದರ್‌ನ ಹಳ್ಳದಕೇರಿಯಲ್ಲಿ 5.8 ಡಿಗ್ರಿ ಸೆಲ್ಸಿಯಸ್, 2017ರ ನವೆಂಬರ್‌ನಲ್ಲಿ ಹಲಬರ್ಗಾದಲ್ಲಿ ಕನಿಷ್ಠ ಉಷ್ಣಾಂಶ 7.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. 2018ರಲ್ಲಿ ಬೀದರ್ ತಾಲ್ಲೂಕಿನ ಮನ್ನಳ್ಳಿಯಲ್ಲಿ ಕನಿಷ್ಠ ತಾಪಮಾನ 4 ಡಿಗ್ರಿ ಸೆಲ್ಸಿಯಸ್‌ವರೆಗೂ ಇಳಿದಿತ್ತು. 1901ರ ಜನವರಿ 5ರಂದು ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಕನಿಷ್ಠ 2.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.