ADVERTISEMENT

World Environment Day: ಒತ್ತುವರಿ ಹೊಯ್ತು; ಹಸಿರು ಹೆಚ್ಚಾಯ್ತು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 5 ಜೂನ್ 2025, 6:28 IST
Last Updated 5 ಜೂನ್ 2025, 6:28 IST
ಹುಮನಾಬಾದ್‌ನಲ್ಲಿ ಒತ್ತುವರಿ ತೆರವುಗೊಳಿಸಿದ ಜಾಗದಲ್ಲಿ ಅರಣ್ಯ ಇಲಾಖೆಯವರು ಸಸಿಗಳನ್ನು ನೆಟ್ಟು ಪೋಷಿಸುತ್ತಿರುವುದು
ಹುಮನಾಬಾದ್‌ನಲ್ಲಿ ಒತ್ತುವರಿ ತೆರವುಗೊಳಿಸಿದ ಜಾಗದಲ್ಲಿ ಅರಣ್ಯ ಇಲಾಖೆಯವರು ಸಸಿಗಳನ್ನು ನೆಟ್ಟು ಪೋಷಿಸುತ್ತಿರುವುದು   

ಬೀದರ್‌: ಅರಣ್ಯ ಇಲಾಖೆಯು ಬೀದರ್‌ ಜಿಲ್ಲೆಯಾದ್ಯಂತ ಆದ್ಯತೆಯ ಮೇರೆಗೆ ಅತಿಕ್ರಮಣ ತೆರವುಗೊಳಿಸಿ, ಅಲ್ಲಿ ಹಸಿರೀಕರಣ ಹೆಚ್ಚಿಸಲು ಕೆಲಸ ನಿರ್ವಹಿಸುತ್ತಿದೆ.

ಅರಣ್ಯ ಇಲಾಖೆಯ ಪ್ರಕಾರ, ಜಿಲ್ಲೆಯಲ್ಲಿ ಸುಮಾರು 4 ಸಾವಿರ ಎಕರೆ ಅರಣ್ಯ ಪ್ರದೇಶಕ್ಕೆ ಸೇರಿದ ಜಮೀನು ಅತಿಕ್ರಮಣಕ್ಕೆ ಒಳಗಾಗಿದೆ. ಆದರೆ, ಕಳೆದ ಎರಡು ವರ್ಷಗಳ ಅವಧಿಯಲ್ಲಿ 1,747 ಎಕರೆ ಪ್ರದೇಶದ ಒತ್ತುವರಿಯನ್ನು ಯಾವುದೇ ರೀತಿಯ ಜಂಜಾಟವಿಲ್ಲದೆ ತೆಗೆದು, ತನ್ನ ಸುಪರ್ದಿಗೆ ಪಡೆದಿದೆ.

ಇದರಲ್ಲಿ ಹೆಚ್ಚಿನ ಪ್ರದೇಶ ಬೀದರ್‌, ಹುಮನಾಬಾದ್‌ ತಾಲ್ಲೂಕು ವ್ಯಾಪ್ತಿಗೆ ಸೇರಿದೆ. ಬಸವಕಲ್ಯಾಣ, ಭಾಲ್ಕಿ, ಹುಲಸೂರ, ಔರಾದ್‌ ನಂತರದ ಸ್ಥಾನದಲ್ಲಿವೆ. ಅತಿಕ್ರಮಣ ತೆರವುಗೊಳಿಸಿದ ಜಾಗದ ಸುತ್ತಲೂ ಬೇಲಿ ಹಾಕಿ, ಗುರುತು ಕಂಬಗಳನ್ನು ನೆಡಲಾಗಿದೆ. ಅಲ್ಲೆಲ್ಲಾ ವಿವಿಧ ಪ್ರಕಾರದ ಸಸಿಗಳನ್ನು ನೆಟ್ಟು, ಅವುಗಳನ್ನು ಜತನದಿಂದ ಪೋಷಿಸಲಾಗುತ್ತಿದೆ. ಇದರ ಪರಿಣಾಮ ಹಸಿರೀಕರಣ ಹೆಚ್ಚಾಗುತ್ತಿದೆ.

ADVERTISEMENT

ಇನ್ನೂ ಜಿಲ್ಲೆಯಲ್ಲಿ ಸುಮಾರು 2 ಸಾವಿರ ಎಕರೆ ಅರಣ್ಯ ಇಲಾಖೆಗೆ ಸೇರಿದ ಜಮೀನು ಒತ್ತುವರಿದಾರರ ನಿಯಂತ್ರಣದಲ್ಲಿದೆ. ಅದನ್ನು ತೆರವುಗೊಳಿಸುವ ಪ್ರಕ್ರಿಯೆ ನಡೆದಿದೆ. ಕೆಲವರು ನ್ಯಾಯಾಲಯದ ಮೊರೆ ಹೋಗಿರುವುದರಿಂದ ವಿಳಂಬವಾಗುತ್ತಿದೆ. ಆದರೆ, ವಿಳಂಬವಾದರೂ ಅದು ನೂರಕ್ಕೆ ನೂರರಷ್ಟು ಅರಣ್ಯ ಇಲಾಖೆಯ ಸುಪರ್ದಿಗೆ ಬರಲಿದೆ ಎನ್ನುವುದು ಅರಣ್ಯ ಇಲಾಖೆಯ ಅಧಿಕಾರಿಗಳ ವಿಶ್ವಾಸದ ಮಾತು.

ಅತಿಕ್ರಮಣ ತೆರವು ನಮಗೆ ಬಹಳ ದೊಡ್ಡ ಸವಾಲಾಗಿತ್ತು. ಅದನ್ನು ಬಹಳ ಯಶಸ್ವಿಯಾಗಿ ನಿಭಾಯಿಸಿದ್ದೇವೆ. ಬೀದರ್‌ ಜಿಲ್ಲೆಯೊಂದರಲ್ಲೇ 1,747 ಎಕರೆ ಒತ್ತುವರಿ ತೆರವುಗೊಳಿಸಿರುವುದು ದೊಡ್ಡ ಸಾಧನೆಯೇ ಸರಿ. ಅಲ್ಲೆಲ್ಲಾ ಸಸಿಗಳನ್ನು ನೆಡಲಾಗಿದ್ದು, ಹಸಿರು ಕಾಣಿಸಿಕೊಳ್ಳುತ್ತಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಮ್‌.ಎಮ್‌. ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಒತ್ತುವರಿ ತೆರವುಗೊಳಿಸಿದ ಜಾಗದಲ್ಲಿ ಸಸಿಗಳನ್ನು ನೆಡಲಾಗಿದ್ದು ಹುಲುಸಾಗಿ ಬೆಳೆಯುತ್ತಿವೆ. ಹಸಿರಿನ ಪ್ರಮಾಣ ಕೂಡ ಹೆಚ್ಚಾಗಲಿದೆ.
–ವಾನತಿ ಎಮ್‌.ಎಮ್‌. ಉಪ ಅರಣ್ಯ ಸಂರಕ್ಷಣಾಧಿಕಾರಿ ಬೀದರ್‌

ಎರಡು ವರ್ಷಗಳಲ್ಲಿ 33 ಲಕ್ಷ ಸಸಿ

ಕಳೆದ ಎರಡು ವರ್ಷಗಳ ಅವಧಿಯಲ್ಲಿ ಬೀದರ್‌ ಜಿಲ್ಲೆಯಲ್ಲಿ 33 ಲಕ್ಷ ಸಸಿಗಳನ್ನು ನೆಡಲಾಗಿದೆ. 2023ನೇ ಸಾಲಿನಲ್ಲಿ 15 ಲಕ್ಷ ಹಾಗೂ 2024ನೇ ವರ್ಷದಲ್ಲಿ 18 ಲಕ್ಷ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. 2025ನೇ ಸಾಲಿನಲ್ಲಿ ಈಗಾಗಲೇ 10.64 ಲಕ್ಷ ಸಸಿಗಳನ್ನು ವಿತರಿಸಿ ನೆಡಲಾಗಿದೆ. ಈ ಸಾಲಿನಲ್ಲಿ 20ರಿಂದ 25 ಲಕ್ಷ ಸಸಿಗಳನ್ನು ನೆಡಲು ಗುರಿ ಇಟ್ಟುಕೊಳ್ಳಲಾಗಿದೆ. ಐದು ವರ್ಷಗಳಲ್ಲಿ 90 ಲಕ್ಷದಿಂದ 1 ಕೋಟಿ ತನಕ ಸಸಿಗಳನ್ನು ನೆಡಲು ಉದ್ದೇಶಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರೂ ಆದ ಈಶ್ವರ ಬಿ. ಖಂಡ್ರೆ ಅವರು ಅರಣ್ಯ ಪರಿಸರ ಖಾತೆಯ ಸಚಿವರಾದ ನಂತರ ವಿಶೇಷ ಕಾಳಜಿ ವಹಿಸಿ ಜಿಲ್ಲೆಯಲ್ಲಿ ಹಸಿರೀಕರಣಕ್ಕೆ ಕ್ರಮ ಕೈಗೊಂಡಿದ್ದಾರೆ. ಜಿಲ್ಲೆಯಲ್ಲಿ ಅರಣ್ಯ ಇಲಾಖೆಗೆ ಸೇರಿದ ಖಾಲಿ ಜಾಗ ಹಾಗೂ ಎಲ್ಲ ರಸ್ತೆಗಳ ಬದಿಯಲ್ಲೂ ಸಸಿಗಳನ್ನು ನೆಡಲು ಸೂಚಿಸಿದ್ದಾರೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಈ ಕೆಲಸ ಪೂರ್ಣಗೊಂಡಿದೆ. ಒಟ್ಟು ಸಸಿಗಳಲ್ಲಿ ಶೇ 75ರಿಂದ 80ರಷ್ಟು ಉಳಿಯಲಿವೆ. ಶೇ 15ರಿಂದ 20ರಷ್ಟು ಸಸಿಗಳು ವಿವಿಧ ಕಾರಣಗಳಿಂದ ಹೋಗುತ್ತವೆ. ಇದು ಸಾಮಾನ್ಯ ಎನ್ನುತ್ತಾರೆ ಅರಣ್ಯ ಇಲಾಖೆಯ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.