ADVERTISEMENT

‘ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಬರೆಸಿ’

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 15:59 IST
Last Updated 14 ಸೆಪ್ಟೆಂಬರ್ 2024, 15:59 IST
ಭಾಲ್ಕಿಯಲ್ಲಿ ಜಿಲ್ಲಾ ನಮ್ಮ ಕರ್ನಾಟಕ ಸೇನೆ ಅಧ್ಯಕ್ಷ ಗಣೇಶ ಪಾಟೀಲ ನೇತೃತ್ವದಲ್ಲಿ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು
ಭಾಲ್ಕಿಯಲ್ಲಿ ಜಿಲ್ಲಾ ನಮ್ಮ ಕರ್ನಾಟಕ ಸೇನೆ ಅಧ್ಯಕ್ಷ ಗಣೇಶ ಪಾಟೀಲ ನೇತೃತ್ವದಲ್ಲಿ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು   

ಭಾಲ್ಕಿ: ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟು ನಾಮಫಲಕಗಳ ಮೇಲೆ ಸೆಪ್ಟೆಂಬರ್ ಅಂತ್ಯದೊಳಗೆ ಶೇ 60ರಷ್ಟು ದಪ್ಪ ಅಕ್ಷರದಲ್ಲಿ ಕನ್ನಡ ಭಾಷೆಯಲ್ಲಿ ಬರೆಸಬೇಕು. ಇಲ್ಲದಿದ್ದರೆ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಜಿಲ್ಲಾ ನಮ್ಮ ಕರ್ನಾಟಕ ಸೇನೆಯ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪಟ್ಟಣದ ಪುರಸಭೆ ಕಚೇರಿಯಲ್ಲಿ ಜಿಲ್ಲಾ ನಮ್ಮ ಕರ್ನಾಟಕ ಸೇನೆಯ ಅಧ್ಯಕ್ಷ ಗಣೇಶ ಪಾಟೀಲ ನೇತೃತ್ವದಲ್ಲಿ ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಎಲ್ಲ ನಾಮಫಲಕಗಳ ಮೇಲೆ ಶೇ 60ರಷ್ಟು ಕನ್ನಡ ಭಾಷೆ ಬರೆಸುವ ಸಂಬಂಧ ಕಳೆದ ಫೆಬ್ರುವರಿ ತಿಂಗಳಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಪುರಸಭೆ ಕಚೇರಿಯಲ್ಲಿ ಸಭೆ ನಡೆದಿತ್ತು. ಆ ಸಭೆಯಲ್ಲಿ ಕೆಲ ವ್ಯಾಪಾರಸ್ಥರು ನಾಮಫಲಕ ಬದಲಾವಣೆಗೆ ಕೆಲ ದಿನಗಳ ಸಮಯಾವಕಾಶ ಕೋರಿದ್ದರು. ಆದರೆ ಸಭೆ ನಡೆದು ಸುಮಾರು ಏಳು ತಿಂಗಳು ಕಳೆದರೂ ನಿರೀಕ್ಷಿತ ಮಟ್ಟದಲ್ಲಿ ನಾಮಫಲಕಗಳ ಮೇಲೆ ಕನ್ನಡ ಭಾಷೆ ಬಳಕೆ ಆಗಿಲ್ಲ ಎಂದು ದೂರಿದರು.

ADVERTISEMENT

ಇನ್ನಾದರೂ ಎಚ್ಚೆತ್ತುಕೊಂಡು ಮುಂದಿನ 15 ದಿನದೊಳಗೆ ಕನ್ನಡೇತರ ನಾಮಫಲಕ ಬದಲಾವಣೆ ಆಗಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.

ಪ್ರಮುಖರಾದ ಬಸವರಾಜ ಕಾರಬಾರಿ, ಸುದೀಪ ತೂಗಾವೆ, ಜಗದೀಶ ಪಾಟೀಲ, ರಾಜರತನ ಗಡಿಪಾಟೀಲ, ನಿಸಾರ್ ಪಾಶಾ ಸೇರಿದಂತೆ ಹಲವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.