ADVERTISEMENT

ಕಳಾಹೀನ ದೈಹಿಕ ಭಾಷೆ ಸಲ್ಲ: ಅಭಯಾನಂದ ಮಹಾರಾಜ

ಬೆಂಗಳೂರಿನ ಅಭಯಾನಂದ ಮಹಾರಾಜ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 19:45 IST
Last Updated 11 ಸೆಪ್ಟೆಂಬರ್ 2019, 19:45 IST
ಬೀದರ್‌ನ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿವೇಕ ಭವನದಲ್ಲಿ ಬುಧವಾರ ಸ್ವಾಮಿ ವಿವೇಕಾನಂದರ ಚಿಕಾಗೊ ಉಪನ್ಯಾಸದ 126ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಯುವ ಸಮ್ಮೇಳನದಲ್ಲಿ ಬೆಂಗಳೂರಿನ ರಾಮಕೃಷ್ಣ ವಿವೇಕಾನಂದ ವೇದಾಂತ ಆಶ್ರಮದ ಅಭಯಾನಂದ ಮಹಾರಾಜ ಮಾತನಾಡಿದರು. ಸ್ವಾಮಿ ಜ್ಯೋತಿರ್ಮಯಾನಂದ, ಸ್ವಾಮಿ ಸುಮೇಧಾನಂದ ಮಹಾರಾಜ ಹಾಗೂ ರಮೇಶ ಉಮರಾಣಿ ಇದ್ದಾರೆ
ಬೀದರ್‌ನ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿವೇಕ ಭವನದಲ್ಲಿ ಬುಧವಾರ ಸ್ವಾಮಿ ವಿವೇಕಾನಂದರ ಚಿಕಾಗೊ ಉಪನ್ಯಾಸದ 126ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಯುವ ಸಮ್ಮೇಳನದಲ್ಲಿ ಬೆಂಗಳೂರಿನ ರಾಮಕೃಷ್ಣ ವಿವೇಕಾನಂದ ವೇದಾಂತ ಆಶ್ರಮದ ಅಭಯಾನಂದ ಮಹಾರಾಜ ಮಾತನಾಡಿದರು. ಸ್ವಾಮಿ ಜ್ಯೋತಿರ್ಮಯಾನಂದ, ಸ್ವಾಮಿ ಸುಮೇಧಾನಂದ ಮಹಾರಾಜ ಹಾಗೂ ರಮೇಶ ಉಮರಾಣಿ ಇದ್ದಾರೆ   

ಬೀದರ್: ‘ದೈಹಿಕ ಭಾಷೆ ಯುವಕರ ಶಕ್ತಿ,ಸಾಮರ್ಥ್ಯವನ್ನು ಬಿಂಬಿಸುತ್ತದೆ. ಯುವಕರಲ್ಲಿ ಕಳಾಹೀನತೆಗೆ ಅವಕಾಶವೇ ಇರಬಾರದು. ಸದಾ ಸ್ಫೂರ್ತಿ ತುಂಬಿಕೊಂಡಿರಬೇಕು’ ಎಂದು ಬೆಂಗಳೂರಿನ ರಾಮಕೃಷ್ಣ ವಿವೇಕಾನಂದ ವೇದಾಂತ ಆಶ್ರಮದ ಅಭಯಾನಂದ ಮಹಾರಾಜ ಹೇಳಿದರು.

ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿವೇಕ ಭವನದಲ್ಲಿ ಬುಧವಾರ ಸ್ವಾಮಿ ವಿವೇಕಾನಂದರ ಚಿಕಾಗೊ ಉಪನ್ಯಾಸದ 126ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಯುವ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಮಾನವನ ಶಕ್ತಿ ಸಾಮರ್ಥ್ಯದ ಉತ್ತುಂಗವನ್ನು ವಿವೇಕಾನಂದರು ತೋರಿಸಿದ್ದಾರೆ. ಶರೀರಕ್ಕೆ ಮುಪ್ಪು ಬರಬಹುದು ಆದರೆ, ಉತ್ಸಾಹಕ್ಕೆ ಮುಪ್ಪು ಬರದು. ತುಕ್ಕು ಹಿಡಿಯದು. ಯುವ ಶಕ್ತಿ ಇದನ್ನು ಅರ್ಥ ಮಾಡಿಕೊಳ್ಳಬೇಕು. ಯುವ ಶಕ್ತಿ ಸದಾ ಹಾವಿನ ಹೆಡೆ ಬಿಚ್ಚಿಕೊಂಡಂತಿರಬೇಕು’ ಎಂದು ಹೇಳಿದರು.

ADVERTISEMENT

‘ವಿವೇಕಾಂದರ ವಿಚಾರಗಳು ನಮ್ಮನ್ನು ಸ್ಫೂರ್ತಿಗೊಳಿಸದಿದ್ದರೆ ವಿಶ್ವದ ಯಾವ ಶಕ್ತಿಯೂ ನಮಗೆ ಸ್ಫೂರ್ತಿ ನೀಡಲು ಸಾಧ್ಯವಿಲ್ಲ. ದುರ್ಬಲವಾದ ಆಲೋಚನೆಗಳನ್ನು ಯಾವ ಕಾರಣಕ್ಕೂ ಮಾಡಬಾರದು. ಬೆಂಕಿ ಉಂಡೆಯಂತಿರುವ ವಿವೇಕಾನಂದರ ವಿಚಾರಗಳನ್ನು ಅರಿತುಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಯುವಕರು ತಮ್ಮ ಶಕ್ತಿ, ಸಾಮರ್ಥ್ಯವನ್ನು ಅರಿತುಕೊಳ್ಳಬೇಕು. ಮಾನವನಿಗೆ ತನ್ನ ಸಾಮರ್ಥ್ಯದ ಅರಿವಾದಾಗ ದೇವನಾಗುತ್ತಾನೆ. ದೈವತ್ವದ ಕಲ್ಪನೆಯ ಮೂಲಕ ಗುರಿ ಸಾಧಿಸಲು ಮುಂದಾಗುತ್ತಾನೆ’ ಎಂದರು.

‘1893ರ ಸೆಪ್ಟೆಂಬರ್ 11 ರಂದು ಚಿಕಾಗೊದಲ್ಲಿ ನಡೆದ ವಿಶ್ವದ ಧರ್ಮಗಳ ಸಂಸತ್ತಿನಲ್ಲಿ ವಿವೇಕಾನಂದರು ಭಾರತದ ಶಕ್ತಿ, ಸಾಮರ್ಥ್ಯ ಏನು ಎನ್ನುವುದನ್ನು ಜಗತ್ತಿಗೆ ಮನದಟ್ಟು ಮಾಡಿದರು. ರಾಷ್ಟ್ರದ ಸಿಂಹಶಕ್ತಿಯನ್ನು ಪ್ರದರ್ಶಿಸಿದರು’ ಎಂದು ತಿಳಿಸಿದರು.

‘ಬಲಿಷ್ಠ ರಷ್ಯಾಕ್ಕೆ ಭಾರತ ಇಂದು ₹ 7 ಸಾವಿರ ಕೋಟಿ ಸಾಲ ಕೊಟ್ಟಿದೆ. ಭಾರತ ಆರ್ಥಿಕವಾಗಿಯೂ ಸಮರ್ಥವಾಗಿದೆ ಎನ್ನುವುದು ಬಿಂಬಿತಗೊಂಡಿದೆ. ಭಾರತ ಈಗಾಗಲೇ ಸಾಂಸ್ಕೃತಿಕವಾಗಿ ಸುವರ್ಣಯುಗ ಕಂಡಿದೆ. ಆರ್ಥಿಕವಾಗಿಯೂ ನಮ್ಮ ದೇಶ ಅದ್ಭುತ ಸೂರ್ಯ ಆಗಿ ಕಂಗೊಳಿಸಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

ಬೆಂಗಳೂರಿನ ಕಾರ್ಪೋರೇಟ್ ಟ್ರೇನರ್ ರಮೇಶ ಉಮರಾಣಿ ಮಾತನಾಡಿ, ‘ಸಹಿಷ್ಣುತೆ, ಸರ್ವಧರ್ಮ ಸ್ವೀಕಾರ ಮನೋಭಾವ ಸ್ವೀಕರಿಸಿದ ದೇಶದವನು ಎನ್ನುವ ಹೆಮ್ಮೆ ನನಗಿದೆ ಎಂದು ವಿವೇಕಾನಂದರು ಹೇಳಿದ್ದರು’ ಎಂದು ತಿಳಿಸಿದರು.

‘ಸಕಲ ಧರ್ಮಗಳು ಸತ್ಯ. ಎಲ್ಲ ಧರ್ಮಗಳನ್ನೂ ನಾನು ನಂಬುತ್ತೇನೆ. ಎಲ್ಲ ಧರ್ಮಗಳಿಂದ, ರಾಷ್ಟ್ರಗಳಿಂದ ನಿರಂತರ ಸಂಕಷ್ಟ ಪೀಡಿತ ರಾಷ್ಟ್ರಗಳ ಸಾಲಿಗೆ ಸೇರಿದ ಹಾಗೂ ಎಲ್ಲರಿಗೂ ಆಶ್ರಯವಿತ್ತ ರಾಷ್ಟ್ರ ನಮ್ಮದು ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿ ವಿಶ್ವದ ಗಮನ ಸೆಳೆದಿದ್ದರು’ ಎಂದು ಹೇಳಿದರು.

‘ಭಾವನೆಗಳ ಹೃದಯ, ಆಲೋಚಿಸಬಲ್ಲ ಮಿದುಳು ಹಾಗೂ ಕಾರ್ಯವೆಸಗಬಲ್ಲ ಬಲಿಷ್ಠ ಬಾಹುಗಳು ಬೇಕು. ಈ ಮೂರು ಅಂಶಗಳು ಇದ್ದಲ್ಲಿ ವ್ಯಕ್ತಿತ್ವ ನಿರ್ಮಾಣವಾಗಬಲ್ಲದೆಂದು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು’ ಎಂದು ತಿಳಿಸಿದರು.
ರಾಜ್ಯ ಸಂಪನ್ಮೂಲ ವ್ಯಕ್ತಿ ಸಂಜುಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೊಸಪೇಟೆ ರಾಮಕೃಷ್ಣ ಗೀತಾಶ್ರಮದ ಸ್ವಾಮಿ ಸುಮೇಧಾನಂದ ಮಹಾರಾಜ ಗಾನಸುಧೆ ಹರಿಸಿದರು.

ಸ್ವಾಮಿ ವಿವೇಕಾನಂದರ ಚಿಕಾಗೊ ಉಪನ್ಯಾಸದ ಭಾಷಣ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಯಿತು. ಸಂಜೆ ಪ್ರವಚನ, ಸಂಗೀತ ಲಹರಿ, ವಿವೇಕಾನಂದರ ಕುರಿತ ಚಲನಚಿತ್ರ ಪ್ರದರ್ಶನ ನಡೆಯಿತು. ಸಾಹಿತಿ ಎಂ.ಜಿ.ಗಂಗನಪಳ್ಳಿ, ವಿವೇಕ ಇದ್ದರು. ವಿಜಯಕುಮಾರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.