ADVERTISEMENT

ಅಂಗನವಾಡಿ ನೌಕರರ ಪ್ರತಿಭಟನೆ

ಐಸಿಡಿಎಸ್ ಬಲವರ್ಧನೆ, ಗೌರವಧನ ಹೆಚ್ಚಳಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಜುಲೈ 2013, 7:04 IST
Last Updated 11 ಜುಲೈ 2013, 7:04 IST

ಚಾಮರಾಜನಗರ: ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು(ಐಸಿಡಿಎಸ್) ಕ್ರಮಬದ್ಧಗೊಳಿಸಿ ಅದನ್ನು ಇಲಾಖೆಯನ್ನಾಗಿ   ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಬುಧವಾರ ರಾಜ್ಯ ಅಂಗನವಾಡಿ ನೌಕರರ ಸಂಘದ(ಸಿಐಟಿಯು) ಜಿಲ್ಲಾ ಘಟಕದಿಂದ ಬೃಹತ್ ಪ್ರತಿಭಟನೆ ನಡೆಯಿತು.

ಚಾಮರಾಜೇಶ್ವರ ಸ್ವಾಮಿ ದೇವಸ್ಥಾನ ಮುಂಭಾಗದಿಂದ ಮೆರವಣಿಗೆ ಆರಂಭಿಸಿದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಭುವನೇಶ್ವರಿ ವೃತ್ತದಲ್ಲಿ ಕೆಲಕಾಲ ರಸ್ತೆತಡೆ ನಡೆಸಿದರು. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಕೆಲವು ಕಾರ್ಯಕರ್ತೆಯರು, ಸಹಾಯಕಿಯರು ಪುಟ್ಟಮಕ್ಕಳೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.

ಜಿಲ್ಲೆಯಲ್ಲಿರುವ ಎಲ್ಲ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು. ಸರ್ಕಾರೇತರ ಸಂಘಟನೆಗಳ ಪಾಲುದಾರಿಕೆ ಹೆಸರಿನಡಿ ಅಥವಾ ಸರ್ಕಾರಿ ಖಾಸಗಿ ಪಾಲುದಾರಿಕೆ ಮೂಲಕ ಅಂಗನವಾಡಿಗಳ ಖಾಸಗೀಕರಣ ಮಾಡಬಾರದು. ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಕ್ರಮವಾಗಿ ಸರ್ಕಾರದ `ಸಿ' ಮತ್ತು `ಡಿ' ದರ್ಜೆ ನೌಕರರನ್ನಾಗಿ ಕ್ರಮಬದ್ಧಗೊಳಿಸಬೇಕು. ಕ್ರಮವಾಗಿ ರೂ 15 ಸಾವಿರ ಹಾಗೂ 10 ಸಾವಿರ ರೂಪಾಯಿ ಗೌರವಧನ ನೀಡಬೇಕು ಎಂದು ಆಗ್ರಹಿಸಿದರು.

ನಿವೃತ್ತಿ ವೇತನ, ಗ್ರಾಚ್ಯುಟಿ, ಭವಿಷ್ಯನಿಧಿ ಸೇರಿದಂತೆ ಸಾಮಾಜಿಕ ಭದ್ರತೆ, ವೈದ್ಯಕೀಯ ಸೌಲಭ್ಯ ಒದಗಿಸಬೇಕು. ಸ್ವಾತಂತ್ರ್ಯ ಹಾಗೂ ಸಾಮೂಹಿಕ ಚೌಕಾಶಿ ನಡೆಸುವ ಅವಕಾಶ ನೀಡಬೇಕು. ಐಸಿಡಿಎಸ್‌ನ ಎಲ್ಲ ಕಾರ್ಯಕ್ರಮಗಳ ವಿಷಯ ಸಂಬಂಧ ಕಾರ್ಮಿಕ ಸಂಘಟನೆಗಳೊಂದಿಗೆ ನಿಯಮಿತವಾಗಿ ಸಮಾಲೋಚನೆ ನಡೆಸಬೇಕು ಎಂದು ಒತ್ತಾಯಿಸಿದರು.

12ನೇ ಪಂಚವಾರ್ಷಿಕ ಯೋಜನೆಯಡಿ ಐಸಿಡಿಎಸ್‌ಗೆ ರೂ 3 ಲಕ್ಷ ಕೋಟಿ ಮೀಸಲಿಡಬೇಕು. ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು. ಶಾಲಾ ಪೂರ್ವ ಶಿಕ್ಷಣ, ಆರೋಗ್ಯ ಕಿಟ್ ಇತ್ಯಾದಿ ಹೆಚ್ಚುವರಿ ಮೂಲ ಸೌಕರ್ಯ ಒದಗಿಸುವಾಗ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಎಲ್ಲ ಹಂತದಲ್ಲೂ ಭ್ರಷ್ಟಾಚಾರ ತಡೆಗಟ್ಟಬೇಕು. ದೇಶಾದ್ಯಂತ ಸೇವಾ ನಿಯಮಗಳು, ಸ್ಪಷ್ಟವಾದ ಕೆಲಸ ನಿರ್ದೇಶನ ರೂಪಿಸಬೇಕು. ಐಸಿಡಿಎಸ್ ಹೊರತುಪಡಿಸಿ ಇತರೇ ಕೆಲಸ ಒಪ್ಪಿಸಬಾರದು ಎಂದು ಆಗ್ರಹಿಸಿದರು.

ಶಾಲಾ ಸಿಬ್ಬಂದಿಗೆ ಲಭ್ಯವಿರುವಂತೆ ರಜೆ ಸೌಲಭ್ಯ ಕಲ್ಪಿಸಬೇಕು. ಇಲಾಖೆಯಿಂದ ನಡೆಯುವ ನೇಮಕಾತಿಯಲ್ಲಿ ಅಂಗನವಾಡಿ ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಆದ್ಯತೆ ನೀಡಬೇಕು. ರಾಜ್ಯ ಸರ್ಕಾರ ಘೋಷಿಸಿರುವ ರೂ 500 ಗೌರವಧನ ಮೊತ್ತವನ್ನು ಕೂಡಲೇ ನೀಡಬೇಕು. ಚುನಾವಣೆಗೆ ಸಂಬಂಧಿಸಿದ ಕೆಲಸಗಳಲ್ಲಿ ಅಂಗನವಾಡಿ ನೌಕರರನ್ನು ತೊಡಗಿಸಬಾರದು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಅಧ್ಯಕ್ಷೆ ಕೆ. ಸುಜಾತಾ, ಎಸ್. ಪಾರ್ವತಮ್ಮ, ನಾಗವೇಣಿ, ಎ. ನಾಗಮಣಿ, ಜಯಮಾಲಾ, ಪುಟ್ಟಬಸಪ್ಪ, ವಿಮಲಾ, ಸುಮಿತ್ರಾ, ವರಲಕ್ಷ್ಮೀ, ಯಶೋದ, ಸೋಮೇಶ್ವರಿ, ಷಹಿದಾ ಬಾನು, ಮಂಜುಳಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.