ADVERTISEMENT

ಅಂಗವಿಕಲರಿಗೆ ಸೌಲಭ್ಯ ತಲುಪಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2011, 9:05 IST
Last Updated 20 ಜೂನ್ 2011, 9:05 IST

ಚಾಮರಾಜನಗರ: `ಅಂಗವಿಕಲರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಲ್ಪಿಸಿರುವ ಸವಲತ್ತುಗಳನ್ನು ಪ್ರಾಮಾಣಿಕವಾಗಿ ತಲುಪಿಸಬೇಕಿದೆ~ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಹೇಳಿದರು.

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಶನಿವಾರ ನಡೆದ ಚಿಗುರು ಅಂಗವಿಕಲರ ಒಕ್ಕೂಟದ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಹುಟ್ಟು ಹಾಗೂ ಆಕಸ್ಮಿಕ ಅವಘಡದಿಂದ ಅಂಗವೈಕಲ್ಯಕ್ಕೆ ತುತ್ತಾಗುವುದು ಸಹಜ. ಅಂಥವರಿಗೆ ಜೀವನ ವಿರಸವೆಂಬಂತೆ ಕಾಣುತ್ತದೆ. ಅಂಗವಿಕಲರನ್ನು ಸಂಘ-ಸಂಸ್ಥೆಗಳು ಪತ್ತೆಹಚ್ಚಿ ಅವರಿಗೆ ಮೀಸಲಿಟ್ಟಿರುವ ಸೌಲಭ್ಯ ಕಲ್ಪಿಸುತ್ತಿವೆ. ಈ ನಿಟ್ಟಿನಲ್ಲಿ ಮೊಬಿಲಿಟಿ ಇಂಡಿಯಾ ಉತ್ತಮ ಕೆಲಸ ಮಾಡುತ್ತಿದೆ ಎಂದು ಶ್ಲಾಘಿ ಸಿದರು.

ಸರ್ವಶಿಕ್ಷಣ ಅಭಿಯಾನದ ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ ಎಂ. ಚಂದ್ರಕಾಂತ್ ಮಾತನಾಡಿ, ಅಂಗವಿಕಲರು ಪೋಷಕರಿಗೆ ಹೊರೆಯಲ್ಲ. ಈಗ ಅವರು ಸ್ವಾವಲಂಬಿಗಳಾಗಿದ್ದಾರೆ. ಮನೆಯ ಜವಾಬ್ದಾರಿ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.

ಮೊಬಿಲಿಟಿ ಇಂಡಿಯಾ ಸಂಸ್ಥೆ ಅಂಗವಿಕಲರಲ್ಲಿ ಜಾಗೃತಿ ಉಂಟು ಮಾಡುವ ಕಾರ್ಯಕ್ರಮ ರೂಪಿಸಿದೆ. ಜಿಲ್ಲೆಯಾದ್ಯಂತ ಇದನ್ನು ವಿಸ್ತರಿಸಬೇಕಿದೆ. ಅಂಗವಿಕಲರ ಅಭಿವೃದ್ಧಿಗೆ ಸರ್ವಶಿಕ್ಷಣ ಅಭಿಯಾನದಡಿ 60 ಲಕ್ಷ ರೂ ಮೀಸಲಿಡಲಾಗಿದೆ. 16ವರ್ಷ ವಯೋಮಿತಿ ಒಳಗಿನ ಮಕ್ಕಳಿಗೆ ವೈದ್ಯಾಧಿಕಾರಿಗಳಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಜಿ. ನಾಗಶ್ರೀ ಮಾತನಾಡಿ, ಅಂಗವಿಕಲರಿಗೆ ಸಹಾಯಹಸ್ತಬೇಕಿದೆ. ಛಲ ಮತ್ತು ಆತ್ಮಸ್ಥೈರ್ಯ ಬೆಳೆಸಿಕೊಂಡು ಜೀವನದಲ್ಲಿ ಗುರಿ ಸಾಧಿಸಲು ಅಂಗವಿಕಲರು ಮುಂದಾಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮಕ್ಕೂ ಮೊದಲು ಹಿರಿಯ ಗಾಂಧಿವಾದಿ ಸಿ.ಪಿ. ಹುಚ್ಚೇಗೌಡ, ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಆರಂಭವಾದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು.

ಚಿಗುರು ಅಂಗವಿಕಲರ ಒಕ್ಕೂಟದ ಅಧ್ಯಕ್ಷ ಎಸ್. ಶಿವಣ್ಣ, ಲಂಡನ್‌ನ ಡಿಡಿಪಿ ನಿರ್ದೇಶಕಿ ಕಮಲಾ ಅಚ್ಚು, ಜಿಲ್ಲಾ ಪಂಚಾಯಿತಿ ಸದಸ್ಯ ಎ.ಸಿ. ರಾಜಶೇಖರಪ್ಪ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಗೋಪಾಲಕೃಷ್ಣ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಯರಾಂ, ಎಸ್.ಎನ್.ಆನಂದ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.