ADVERTISEMENT

ಅಂತೂ ಇಂತೂ ಬೈಸಿಕಲ್ ಬಂತು

ಕೆ.ಎಚ್.ಓಬಳೇಶ್
Published 15 ಜೂನ್ 2011, 8:30 IST
Last Updated 15 ಜೂನ್ 2011, 8:30 IST
ಅಂತೂ ಇಂತೂ ಬೈಸಿಕಲ್ ಬಂತು
ಅಂತೂ ಇಂತೂ ಬೈಸಿಕಲ್ ಬಂತು   

ಚಾಮರಾಜನಗರ: ಅಂತೂ ಇಂತೂ ಜಿಲ್ಲೆಯಲ್ಲಿ ಮಕ್ಕಳಿಗೆ ಬೈಸಿಕಲ್ ವಿತರಣೆಗೆ ಸಿದ್ಧತೆ ನಡೆಯುತ್ತಿದೆ.ಕಳೆದ ಶೈಕ್ಷಣಿಕ ವರ್ಷದಲ್ಲಿ 8ನೇ ತರಗತಿ ಮಕ್ಕಳಿಗೆ ಬೈಸಿಕಲ್ ವಿತರಣೆಯಾಗಿರಲಿಲ್ಲ. ನೇರವಾಗಿಯೇ ಮಕ್ಕಳ ಪೋಷಕರಿಗೆ ಬೈಸಿಕಲ್ ಖರೀದಿಸಲು ಹಣ ನೀಡುವ ಪ್ರಸ್ತಾವವೂ ಕೇಳಿಬಂದಿತ್ತು. ಆದರೆ, ಇದು ಕಾರ್ಯಗತಕ್ಕೆ ಬಂದಿರಲಿಲ್ಲ. ಈ ಎಲ್ಲ ಗೊಂದಲಗಳಿಗೆ ತೆರೆಬಿದ್ದಿದ್ದು, ನೇರವಾಗಿ ಮಕ್ಕಳಿಗೆ ಬೈಸಿಕಲ್ ವಿತರಣೆಗೆ ರಾಜ್ಯ ಸರ್ಕಾರ ಮುಂದಾಗಿದೆ.

ಜಿಲ್ಲೆಯಲ್ಲಿ ಕಳೆದ ವರ್ಷ 8ನೇ ತರಗತಿಯ 10,651 ಮಕ್ಕಳಿಗೆ ಬೈಸಿಕಲ್ ವಿತರಣೆಯಾಗಿಲ್ಲ. ಅವರಲ್ಲಿ ಬಾಲಕಿಯರು- 5,303 ಹಾಗೂ 5,348 ಬಾಲಕರು ಇದ್ದಾರೆ. ಪ್ರಸ್ತುತ ಈ ಮಕ್ಕಳು 9ನೇ ತರಗತಿಯಲ್ಲಿದ್ದಾರೆ. ಅವರೆಲ್ಲರಿಗೂ ಬೈಸಿಕಲ್ ನೀಡಲು ಸಿದ್ಧತೆ ನಡೆಯುತ್ತಿದೆ.

ಜತೆಗೆ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 8ನೇ ತರಗತಿಗೆ ದಾಖಲಾಗುವ ಮಕ್ಕಳಿಗೆ ವಿತರಿಸಲು ಇಷ್ಟೇ ಸಂಖ್ಯೆಯ ಬೈಸಿಕಲ್ ಬಿಡಿಭಾಗಗಳು ಸಹ ಬಂದಿವೆ. ಇಲಾಖೆಯಿಂದ ಈ ತಿಂಗಳಾಂತ್ಯದೊಳಗೆ ಮಕ್ಕಳ ಸಂಖ್ಯಾ ವರದಿ ಸಲ್ಲಿಸಿ ಬೈಸಿಕಲ್ ಪಡೆಯಬಹುದು. ಉಳಿದವುಗಳನ್ನು ಕಂಪೆನಿಗೆ ವಾಪಸ್ ನೀಡಬೇಕು ಎಂದು ಶಿಕ್ಷಣ ಇಲಾಖೆಗೆ ಸರ್ಕಾರ ಸೂಚಿಸಿದೆ.

ಈಗಾಗಲೇ, ಶೇ. 50ರಷ್ಟು ಬೈಸಿಕಲ್ ಜೋಡಣಾ ಕಾರ್ಯ ಪೂರ್ಣಗೊಂಡಿದೆ. ಚೆನ್ನೈ ಮೂಲದ ಖಾಸಗಿ ಕಂಪೆನಿಯ ಸಿಬ್ಬಂದಿ ಬಿಡಿಭಾಗಗಳ ಜೋಡಣೆಯಲ್ಲಿ ತೊಡಗಿದ್ದಾರೆ. ಇನ್ನೊಂದು ವಾರದೊಳಗೆ ಕೆಲಸ ಪೂರ್ಣಗೊಳ್ಳಲಿದ್ದು, ನಂತರ ಮಕ್ಕಳಿಗೆ ವಿತರಣಾ ಕಾರ್ಯ ನಡೆಯಲಿದೆ.

ಚಾ.ನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರು ಹಾಗೂ ಹನೂರು ಶೈಕ್ಷಣಿಕ ವಲಯಕ್ಕೆ ಬೈಸಿಕಲ್ ಬಿಡಿಭಾಗಗಳು ಪೂರೈಕೆಯಾಗಿವೆ. ಹೀಗಾಗಿ, ವಲಯವಾರು ಜೋಡಣಾ ಕಾರ್ಯ ಭರದಿಂದ ಸಾಗಿದೆ. ಕೊನೆಗೂ, ಬೈಸಿಕಲ್ ದಕ್ಕಲಿದೆ ಎಂಬ ಆಸೆ ಮಕ್ಕಳಲ್ಲಿ ಮೂಡಿದೆ.

ಗುಣಮಟ್ಟ ಕಾಪಾಡಿ: ಹಿಂದಿನ ವರ್ಷ ಬೈಸಿಕಲ್ ವಿತರಿಸಿರಲಿಲ್ಲ. ಹೀಗಾಗಿ, ಗ್ರಾಮೀಣ ಮಕ್ಕಳು ತೊಂದರೆ ಅನುಭವಿಸಿದ್ದರು. ಪ್ರಸ್ತುತ ವಿತರಣೆಗೆ ಮುಂದಾಗಿರುವುದು ನೆಮ್ಮದಿ ತಂದಿದೆ. ಆದರೆ, ಗುಣಮಟ್ಟದ ಬೈಸಿಕಲ್ ವಿತರಣೆಗೆ ಸರ್ಕಾರ ಮುಂದಾಗಬೇಕು ಎಂಬುದು ಪೋಷಕರ ಒತ್ತಾಯ.

`ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೂಡ ಬೈಸಿಕಲ್ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸುವುದು ಉತ್ತಮ. ಇಲ್ಲವಾದಲ್ಲಿ ಕಳಪೆ ಬೈಸಿಕಲ್ ಪೂರೈಕೆಯಾಗಿ ಮಕ್ಕಳು ಕಷ್ಟ ಅನುಭವಿಸುವುದು ನಿಶ್ಚಿತ~ ಎನ್ನುತ್ತಾರೆ ಪೋಷಕ ಮಹದೇವಪ್ಪ.

`ಕಳೆದ ಶೈಕ್ಷಣಿಕ ವರ್ಷದ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಬೈಸಿಕಲ್ ಬಂದಿವೆ. ಸದ್ಯ ಜೋಡಣಾ ಕಾರ್ಯ ನಡೆಯುತ್ತಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಡಿ 8ನೇ ತರಗತಿಗೆ ದಾಖಲಾಗುವ ಮಕ್ಕಳ ವರದಿ ಸಲ್ಲಿಸಲು ಸರ್ಕಾರ ಸೂಚಿಸಿದೆ. ಈ ತಿಂಗಳ ಅಂತ್ಯಕ್ಕೆ ವರದಿ ಸಲ್ಲಿಕೆಯಾಗಲಿದೆ. ನಂತರ, ಆ ಮಕ್ಕಳಿಗೂ ಬೈಸಿಕಲ್ ವಿತರಿಸಲಾಗುವುದು~ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಿ.ಎ. ರಾಜಶೇಖರ `ಪ್ರಜಾವಾಣಿ~ಗೆ ತಿಳಿಸಿದರು.

`ಕಂಪೆನಿಯ ಸಿಬ್ಬಂದಿ ಜೋಡಣಾ ಕಾರ್ಯ ಪೂರ್ಣಗೊಳಿಸಿ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಗೆ ಬೈಸಿಕಲ್ ನೀಡಲಿದ್ದಾರೆ. ನಂತರ, ಕ್ಷೇತ್ರದ ಶಾಸಕರ ಸಮ್ಮುಖದಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳಿಗೆ ವಿತರಣೆ ಮಾಡಲಾಗುವುದು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.