ADVERTISEMENT

ಅನುದಾನ ತಾರತಮ್ಯದ ಕೂಗು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 9:30 IST
Last Updated 1 ಫೆಬ್ರುವರಿ 2011, 9:30 IST

ಚಾಮರಾಜನಗರ: ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣ ಅಭಿವೃದ್ಧಿ ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನದಡಿ ಬಾಕಿ ಇರುವ 6.20 ಕೋಟಿ ಹಣವನ್ನು ಎಲ್ಲಾ ವಾರ್ಡ್‌ಗಳಿಗೂ ಸಮಾನವಾಗಿ ಹಂಚಲು ನಗರಸಭೆ ನಿರ್ಣಯಿಸಿದೆ.

ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಯೋಜನೆಯಡಿ ಬಿಡುಗಡೆಯಾದ ಅನುದಾನ ಸಮರ್ಪಕವಾಗಿ ಹಂಚಿಕೆಯಾಗಿಲ್ಲ ಎಂಬ ಕೂಗು ಕೇಳಿಬಂದಿತು. ಹಿಂದಿನ ಅಧ್ಯಕ್ಷರು ತಮಗೆ ಇಷ್ಟಬಂದ ಸದಸ್ಯರಿಗೆ ಹೆಚ್ಚು ಅನುದಾನ ಹಂಚಿಕೆ ಮಾಡಿದ್ದಾರೆ ಎಂದು ಆರೋಪದ ಸುರಿಮಳೆ ಯಾಯಿತು.

ಸದಸ್ಯೆ ಟಿ.ಎಸ್. ಪ್ರಭಾ ಮಾತನಾಡಿ, ‘ನಗರಸಭೆಗೆ 30 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ವಾರ್ಡ್‌ವಾರು ಸಮರ್ಪಕ ವಾಗಿ ಹಂಚಿಕೆ ಮಾಡಿಲ್ಲ. ಬಿ.ಎಸ್. ಯಡಿ ಯೂರಪ್ಪ ಅನುದಾನ ನೀಡಿದ್ದಾರೆ ಎಂದಾಕ್ಷಣ ಬಿಜೆಪಿ ಸದಸ್ಯರ ವಾರ್ಡ್‌ಗಳಿಗೆ ಹೆಚ್ಚು ಹಣ ನೀಡಲು ಬರುತ್ತದೆಯೇ?’ ಎಂದು ಪ್ರಶ್ನಿಸಿದರು. ಸದಸ್ಯರಾದ ಮಹಮ್ಮದ್ ಅಸ್ಗರ್, ಶಿವಣ್ಣ, ಮಹದೇವಯ್ಯ, ಸುರೇಶನಾಯಕ ಇತರರು ಇದಕ್ಕೆ ಧ್ವನಿಗೂಡಿಸಿದರು. ಬಾಕಿ ಇರುವ ಅನುದಾನವನ್ನು ಎಲ್ಲಾ ವಾರ್ಡ್‌ಗಳಿಗೂ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.

12.10 ಕೋಟಿ ರೂ ಮಂಜೂರು: ನಗರಸಭೆಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 12.10 ಕೋಟಿ ರೂ ಮಂಜೂರಾಗಿದೆ. ಈಗಾಗಲೇ, ಇದರಲ್ಲಿ 5 ಕೋಟಿ ರೂ ಬಿಡುಗಡೆ ಯಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಉಸ್ತುವಾರಿ ಸಮಿತಿ ನೇತೃತ್ವದಲ್ಲಿ ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸಿ ಸಲ್ಲಿಸಬೇಕಿದೆ. ಇ-ಟೆಂಡರ್ ಕರೆಯಬೇಕಿದೆ.

ಶಾಸಕರೊಂದಿಗೂ ಚರ್ಚಿಸ ಲಾಗಿದೆ. ಈ ಮೊತ್ತಕ್ಕೆ ಅನುಗುಣವಾಗಿ ಕ್ರಿಯಾ ಯೋಜನೆ ತಯಾರಿಸಿ ಸಾಮಾನ್ಯ ಸಭೆಯಲ್ಲಿ ಮಂಡಿಸಲಾಗುವುದು ಎಂದು ಪೌರಾಯುಕ್ತ ಬಿ. ಕೃಷ್ಣಪ್ಪ ತಿಳಿಸಿದರು. ಕುಡಿಯುವ ನೀರು, ಸ್ಮಶಾನ ಅಭಿವೃದ್ಧಿ, ವಧಾಗಾರ, ಮಳೆನೀರು ಸಂಗ್ರಹ ಚರಂಡಿ ನಿರ್ಮಾಣ ಸೇರಿದಂತೆ ನಗರದ ಸೌಂದರ್ಯಕ್ಕೆ ಅನುಗುಣವಾಗಿ ಕ್ರಿಯಾಯೋಜನೆ ಸಿದ್ಧಪಡಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ ಎಂದು ವಿವರಿಸಿದರು. ಅಧ್ಯಕ್ಷೆ ಭಾಗ್ಯಮ್ಮ ಅಧ್ಯಕ್ಷತೆ ವಹಿಸಿದ್ದರು. ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.