ADVERTISEMENT

ಅನುದಾನ ಸದ್ವಿನಿಯೋಗಕ್ಕೆ ಸಂಸದ ಸೂಚನೆ

ಜಿಲ್ಲಾಮಟ್ಟದ ಅಂಗವಿಕಲರ ದಿನಾಚರಣೆ: ಅಂಗವಿಕಲರ ಸಬಲೀಕರಣಕ್ಕೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 5:54 IST
Last Updated 10 ಜನವರಿ 2014, 5:54 IST

ಚಾಮರಾಜನಗರ: ‘ಅಂಗವಿಕಲರ ಅಭಿವೃದ್ಧಿಗೆ ಮೀಸಲಿಟ್ಟಿರುವ ಶೇ 3ರಷ್ಟು ಅನುದಾನದಡಿ ಅರ್ಹರಿಗೆ ಸೌಲಭ್ಯ ಕಲ್ಪಿಸಲು ಎಲ್ಲ ಇಲಾಖೆಗಳು ಮುಂದಾಗಬೇಕು’ ಎಂದು ಸಂಸದ ಆರ್. ಧ್ರುವನಾರಾಯಣ ಸೂಚಿಸಿದರು.

ನಗರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸ್ವಯಂಸೇವಾ ಸಂಸ್ಥೆಗಳಿಂದ ವಿಶ್ವ ಅಂಗವಿಕಲರ ದಿನಾಚರಣೆ ನಿಮಿತ್ತ ನಡೆದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅಂಗವಿಕಲರ ಏಳಿಗೆಗೆ ಪೂರಕವಾಗುವ ಕಾರ್ಯಕ್ರಮಗಳಿಗೆ ಇಲಾಖೆಗಳು ಶೇ 3ರಷ್ಟು ಅನುದಾನವನ್ನು ಬಳಕೆ ಮಾಡಬೇಕಿದೆ. ಈ ಬಗ್ಗೆ ತಾವು ನಡೆಸಿದ ಸಭೆಗಳಲ್ಲೂ ಅನುದಾನದ ಸದ್ವಿನಿಯೋಗ ಸಂಬಂಧ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಂಗವಿಕಲರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸದೃಢರಾಗಲು ನಿಗದಿ ಮಾಡಿರುವ ಅನುದಾನ ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಬೇಕು ಎಂದರು.

ಸಂಸದರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಪ್ರಸಕ್ತ ವರ್ಷ ಅಂಗವಿಕಲರಿಗೆ ತ್ರಿಚಕ್ರ ವಾಹನ ಖರೀದಿಸಿ ವಿತರಿಸಲಾಗಿದೆ. ಸ್ಥಳೀಯ ಶಾಸಕರ ಬಳಿಯೂ ಅಂಗವಿಕಲರ ಅಭಿವೃದ್ಧಿಗೆ ವೆಚ್ಚ ಮಾಡಬೇಕಾದ ಅನುದಾನ ಲಭ್ಯವಿದೆ. ಇದರ ಸದ್ಬಳಕೆಗೆ ಜಿಲ್ಲಾಧಿಕಾರಿ ಅವರು ಕ್ರಮವಹಿಸಬೇಕು ಎಂದರು. ನಗರಸಭೆ ಅಧ್ಯಕ್ಷ ಎಸ್. ನಂಜುಂಡಸ್ವಾಮಿ, ಶಾಸಕ ಸಿ. ಪುಟ್ಟರಂಗಶೆಟ್ಟಿ ಹಾಜರಿದ್ದರು.

ಸಭಾ ಕಾರ್ಯಕ್ರಮ: ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಯಶೋದಾ ಪ್ರಭುಸ್ವಾಮಿ, ಅಂಗವಿಕಲರ ಬಗ್ಗೆ ಅನುಕಂಪ ತೋರಿಸುವುದು ಬೇಡ. ಅವರು ಸಮಾಜದ ಮುಖ್ಯವಾಹಿನಿಗೆ ಬರಲು ಅವಕಾಶ ಕಲ್ಪಿಸಬೇಕು ಎಂದರು.

ನಗರಸಭೆ ಅಧ್ಯಕ್ಷ ಎಸ್. ನಂಜುಂಡಸ್ವಾಮಿ ಮಾತನಾಡಿ, ಅಂಗವಿಕಲರಿಗೆ ಏಕರೂಪವಾದ ಮಾಸಾಶನ ಸೌಲಭ್ಯ ನೀಡಬೇಕು. ಅಂಗವೈಕಲ್ಯತೆ ಆಧಾರದ ಮೇಲೆ ಮಾಸಾಶನ ನೀಡುವ ನಿಯಮ ಬದಲಾಗಬೇಕು. ನಗರಸಭೆಯಲ್ಲಿ ಅಂಗವಿಕಲರ ಕಲ್ಯಾಣಕ್ಕೆ ಮೀಸಲಾಗಿರುವ ಅನುದಾನ ಪಡೆಯಲು ಫಲಾನುಭವಿಗಳು ನಿರೀಕ್ಷಿತ ಸಂಖ್ಯೆಯಲ್ಲಿ ಮುಂದೆ ಬಂದಿಲ್ಲ ಎಂದರು.

ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ ಮಾತನಾಡಿ, ಜಿಲ್ಲೆಯಲ್ಲಿ 2001ರ ಸಮೀಕ್ಷೆ ಪ್ರಕಾರ 26,938 ಅಂಗವಿಕಲರು ಇದ್ದಾರೆ ಎಂದು ಅಂಕಿ–ಅಂಶ ಹೇಳುತ್ತವೆ ಎಂದರು.

ಆ ನಂತರ ಯಾವುದೇ ಸಮೀಕ್ಷೆ ನಡೆಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ತಾಲ್ಲೂಕು ಹಾಗೂ ಗ್ರಾಮಮಟ್ಟದ ಪುನರ್ವಸತಿ ಕಾರ್ಯಕರ್ತರ ನೆರವಿನೊಂದಿಗೆ ಜಿಲ್ಲೆಯಲ್ಲಿ ಅಂಗವಿಕಲರ ಸಮೀಕ್ಷೆ ಕೈಗೊಳ್ಳಬೇಕಿದೆ. ಇದರಿಂದ ಹೆಚ್ಚಿನ ಸೌಲಭ್ಯಗಳನ್ನು ಎಲ್ಲರಿಗೂ ತಲುಪಿಸಲು ಸಹಕಾರಿ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪಿ. ಪುಟ್ಟಬುದ್ಧಿ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಪ್ರಭಾರ ಅಧ್ಯಕ್ಷೆ ಪಾರ್ವತಮ್ಮ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎಚ್. ನರಸಿಂಹಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್, ಅಂಗವಿಕಲರ ಕಲ್ಯಾಣ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಚಂದ್ರಪ್ಪ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಎಚ್.ಕೆ. ರೇವಣೇಶ್, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್‌. ಚಂದ್ರೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.