ADVERTISEMENT

ಆಸ್ಪತ್ರೆ ಮುಂದೆ ಪಾರ್ಕಿಂಗ್ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 10:16 IST
Last Updated 22 ಜೂನ್ 2013, 10:16 IST

ಚಾಮರಾಜನಗರ: ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಹೊಸ ಕಟ್ಟಡದ ಗೇಟ್ ಎದುರಿನಲ್ಲಿ ಮತ್ತು ಅಕ್ಕ-ಪಕ್ಕ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಜಿಲ್ಲಾ ಕೇಂದ್ರದಲ್ಲಿ 250 ಹಾಸಿಗೆ ಸಾಮರ್ಥ್ಯದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ನಿರ್ಮಾಣವಾಗಿದೆ. ವೈದ್ಯಾಧಿಕಾರಿಗಳು ಸೇರಿದಂತೆ ಅಗತ್ಯ ಸಿಬ್ಬಂದಿ ನೇಮಕವಾಗಿದೆ. ಆಸ್ಪತ್ರೆಗೆ ನಿತ್ಯವೂ ನೂರಾರು ಮಂದಿ ಚಿಕಿತ್ಸೆಗೆ ಬರುತ್ತಾರೆ. ಅವೈಜ್ಞಾನಿಕ ಪಾರ್ಕಿಂಗ್‌ನಿಂದ ಆಸ್ಪತ್ರೆಗೆ ಪ್ರವೇಶ ಎಲ್ಲಿದೆ ಎಂದು ಕ್ಷಣಕಾಲ ಚಿಂತಿಸುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಫುಟ್‌ಪಾತ್‌ನಲ್ಲಿ ವಾಹನ ನಿಲ್ಲಿಸುವುದರಿಂದ ಪಾದಚಾರಿಗಳು ಮುಖ್ಯರಸ್ತೆಗೆ ಇಳಿದು ನಡೆದು ಹೋಗಬೇಕಾಗಿದೆ. ಇದು ಅಪಘಾತಗಳಿಗೆ ಕಾರಣವಾಗಿದೆ. ಹಳೇ ಆಸ್ಪತ್ರೆ ಹಾಗೂ ನೂತನ ಆಸ್ಪತ್ರೆ ಒಳಗೆ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರೂ, ದ್ವಿಚಕ್ರ ವಾಹನ ಸವಾರರು ನಿಯಮ ಉಲ್ಲಂಘಿಸಿ ತಮ್ಮ ಅನುಕೂಲಕ್ಕೆ ತಕ್ಕಂತೆ ವಾಹನ ನಿಲುಗಡೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಅಲ್ಲದೆ, ಆಸ್ಪತ್ರೆ ಸಮೀಪದ ಜೋಡಿ ರಸ್ತೆಯಲ್ಲಿ ವಾಹನಗಳ ದಟ್ಟನೆ ಹೆಚ್ಚಿದೆ. ರೋಗಿಗಳ ಸಂಬಂಧಿಕರು ಔಷಧಿ, ಹಣ್ಣು ಹಂಪಲು ಕೊಂಡೊಯ್ಯಲು ಜೋಡಿ ರಸ್ತೆ ದಾಟಿ ಬರಬೇಕು. ಈ ವೇಳೆ ಅವಘಡಗಳು ಸಂಭವಿಸಿದ ನಿದರ್ಶನಗಳಿವೆ. ಆದ್ದರಿಂದ ಜೋಡಿ ರಸ್ತೆಯ ಎರಡು ಬದಿಗಳಲ್ಲಿ ರಸ್ತೆ ಉಬ್ಬು ನಿರ್ಮಿಸಿ ರಸ್ತೆ ಅಪಘಾತಕ್ಕೆ ಕಡಿವಾಣ ಹಾಕಬೇಕಿದೆ.

ಅಲ್ಲದೇ ಆಸ್ಪತ್ರೆ ಹೊಸ ಕಟ್ಟಡದ ಗೇಟ್ ಎದುರು ದ್ವಿಚಕ್ರವಾಹನ ನಿಲುಗಡೆ ತೆರವುಗೊಳಿಸಲು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.