ಯಳಂದೂರು: ಹಳ್ಳ ಬಿದ್ದಿರುವ ಚರಂಡಿಗೆ ಅಡ್ಡಲಾಗಿ ನಿರ್ಮಿಸಿರುವ ಡೆಕ್, ಚರಂಡಿಗಳೇ ಇಲ್ಲದ ಹೊಸ ಬಡಾವಣೆಗಳು, ಕುಡಿಯುವ ನೀರಿಗಾಗಿ ದೂರದಿಂದ ಬಿಂದಿಗೆ ಹೊತ್ತು ಹೊರಡುವ ನಾರಿಯರು, ರಸ್ತೆಯ ಇಕ್ಕೆಲಗಳಲ್ಲಿ ಕೊಳೆತು ನಾರುವ ತಿಪ್ಪೆರಾಶಿ, ಹಳ್ಳಕೊಳ್ಳಗಳಾಗಿರುವ ರಸ್ತೆಗಳು...
ಇವು ಸಮೀಪದ ಇರಸವಾಡಿ ಗ್ರಾಮದ ಕೆಲವು ಬಡಾವಣೆಗಳ ಸ್ಥಿತಿ–ಗತಿ. ಇಲ್ಲಿನ ಕುರುಬರ ಬೀದಿಗೆ ಸಂಪರ್ಕ ಕಲ್ಪಿಸುವ ಮೋರಿಗೆ ಅಡ್ಡಲಾಗಿ ನಿರ್ಮಿಸಿರುವ ಡೆಕ್ ಕಳೆದ ಹಲವು ತಿಂಗಳಿಂದ ಹಳ್ಳ ಬಿದ್ದಿದೆ. ಈ ರಸ್ತೆಯಲ್ಲಿ ವಿದ್ಯುತ್ ಕಂಬಗಳಿಗೆ ಬೀದಿ ದೀಪಗಳೇ ಇಲ್ಲ ಹಾಗಾಗಿ ರಾತ್ರಿ ವೇಳೆ ಇಲ್ಲಿಗೆ ತೆರಳುವಾಗ ಇದರಲ್ಲಿ ಹಲವರು ಬಿದ್ದ ಉದಾಹರಣೆಗಳಿವೆ.
ಇದರ ಎದುರಿಗೇ ಇರುವ ಉಪ್ಪಾರ ಜನಾಂಗದ ಬಡಾವಣೆಗೆ ನೀರಿನ ಸಂಪರ್ಕವಿಲ್ಲ. ನೀರಿನ ತೊಂಬೆಯೂ ಇಲ್ಲ ಹಾಗಾಗಿ ದೂರದಿಂದ ಕುಡಿಯುವ ನೀರನ್ನು ತರುವ ಅನಿವಾರ್ಯತೆ ಇದೆ ಎಂಬುದು ಇಲ್ಲಿನ ನಿವಾಸಿ ರತ್ನಮ್ಮ ಅವರ ದೂರು.
ಚರಂಡಿಯೇ ಇಲ್ಲ...!
ಈ ಭಾಗದಲ್ಲಿ ಚರಂಡಿಯೂ ಇಲ್ಲ. ಇದು ಗ್ರಾಮದ ಹೊರ ವಲಯದಲ್ಲಿರುವ ಬಡಾವಣೆಯಾಗಿದ್ದು ಕಲುಷಿತ ನೀರೆಲ್ಲ ಬಂದು ಇಲ್ಲೇ ನಿಲ್ಲುತ್ತದೆ. ಮಳೆಗಾಲದಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುವುದರಿಂದ ಇಲ್ಲಿನ ವಾಸಿಗಳು ಯಾತನೆ ಅನುಭವಿಸು ವಂತಾಗುತ್ತದೆ. ಜೊತೆಗೆ ಅಲ್ಲಲ್ಲಿ ತಿಪ್ಪೆಗಳ ರಾಶಿ ್ನೂ ಸುರಿಯಲಾಗಿದ್ದು ಇಲ್ಲಿ ಅನೈರ್ಮಲ್ಯ ತಾಂಡವ ವಾಡುತ್ತಿದೆ. ಈ ಪ್ರದೇಶ ಸೊಳ್ಳೆ, ಕ್ರಿಮಿಕೀಟಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಈಗ ಬೇಸಿಗೆಯಾಗಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯೂ ಇದೆ ಎಂಬುದು ಇಲ್ಲಿನ ನಾಗರಿಕರ ಅಳಲು.
ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಅನುದಾನ ಬಂದರೂ ಗ್ರಾಮದ ಮಧ್ಯಭಾಗದಲ್ಲಿರುವ, ಅಭಿವೃದ್ಧಿ ಹೊಂದಿದ ಭಾಗಕ್ಕೇ ಅದನ್ನು ಬಳಸಿಕೊಳ್ಳಲಾಗುತ್ತದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಪ್ರದೇಶದ ಬಡಾವಣೆಗಳನ್ನು ನಿರ್ಲಕ್ಷಿಸುತ್ತಾರೆ ಎಂಬುದು ಕುಮಾರ, ರವಿ ಸೇರಿದಂತೆ ಹಲವರ ದೂರಾಗಿದೆ. ಈಗಲಾದರೂ ಸಂಬಂಧಪಟ್ಟವರು ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತ ಗಮನಹರಿಸಲಿ ಎಂಬುದು ಇಲ್ಲಿನ ನಾಗರಿಕರ ಆಗ್ರಹವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.