ADVERTISEMENT

ಇಲ್ಲಿ ಗುಡಿಸಲೇ ಅಂಗನವಾಡಿ!

ಪ್ರಜಾವಾಣಿ ವಿಶೇಷ
Published 19 ಜುಲೈ 2013, 6:48 IST
Last Updated 19 ಜುಲೈ 2013, 6:48 IST
ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ಹೊಸ ಉಪ್ಪಾರ ಬಡಾವಣೆಯಲ್ಲಿ ಗುಡಿಸಲು ಅಂಗನವಾಡಿ ಕೇಂದ್ರವಾಗಿ ಮಾರ್ಪಟ್ಟಿದೆ .
ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ಹೊಸ ಉಪ್ಪಾರ ಬಡಾವಣೆಯಲ್ಲಿ ಗುಡಿಸಲು ಅಂಗನವಾಡಿ ಕೇಂದ್ರವಾಗಿ ಮಾರ್ಪಟ್ಟಿದೆ .   

ಯಳಂದೂರು: ತೆಂಗಿನ ಗರಿಗಳ ಹೊದಿಕೆಯೇ ಚಪ್ಪರ. ಮಣ್ಣಿನ ನೆಲವೇ ಹಾಸಿಗೆ. ಮಳೆಗೆ ಸೋರುವ ಮಾಳಿಗೆ. ಬಿಸಿಲಿನಲ್ಲೇ ಕಲಿಯಬೇಕಾದ ಅನಿವಾರ್ಯತೆ.

-ಇದು ತಾಲ್ಲೂಕಿನ ದೊಡ್ಡ ಗ್ರಾಮಗಳಲ್ಲಿ ಒಂದಾಗಿರುವ ಕೆಸ್ತೂರು ಗ್ರಾಮದ ಹೊಸ ಉಪ್ಪಾರ ಬಡಾವಣೆಯ ಅಂಗವಾಡಿ ಕೇಂದ್ರದ ದುಃಸ್ಥಿತಿ.
ಇಲ್ಲಿನ 6 ಕೇಂದ್ರಗಳಿಗೆ ಸ್ವಂತ ಹಾಗೂ ಸುಸಜ್ಜಿತ ಕಟ್ಟಡಗಳಿವೆ. 2006ರಲ್ಲಿ ಆರಂಭವಾದ ಈ ಅಂಗನವಾಡಿಗೆ ಸ್ವಂತಕಟ್ಟಡದ ಭಾಗ್ಯ ಲಭಿಸಿಲ್ಲ. ಹಾಗಾಗಿ ತೆಂಗಿನಗರಿಯ ಜೋಪಡಿ ಚಿಣ್ಣರ ಕಲಿಕಾ ಕೇಂದ್ರವಾಗಿ ಮಾರ್ಪಟ್ಟಿದೆ. ಪ್ರಸ್ತುತ ಈ ಕೇಂದ್ರದಲ್ಲಿ 22 ಮಕ್ಕಳು ಕಲಿಯುತ್ತಿದ್ದಾರೆ.

ಹಿಂದುಳಿದ ವರ್ಗದ ಮಕ್ಕಳ ಸಂಖ್ಯೆಯೇ ಇಲ್ಲಿ ಹೆಚ್ಚಾಗಿದೆ. ಇವರೆಲ್ಲ ಸೌಲಭ್ಯ ವಂಚಿತರಾಗಿ ಕಲಿಯುವ ಅನಿವಾರ್ಯತೆ ಇಲ್ಲಿ ಸ್ಟಷ್ಟಿಯಾಗಿದೆ.
ಮಳೆ ಬಂದರೆ ಈ ಕೇಂದ್ರವು ಸೋರುತ್ತದೆ. ಅನಿವಾರ್ಯವಾಗಿ ಮಕ್ಕಳನ್ನು ಮಳೆಗಾಲದಲ್ಲಿ ಮನೆಗಳಿಗೆ ಕಳುಹಿಸುವ ಸ್ಥಿತಿ ನಿರ್ಮಾಣವಾಗುತ್ತದೆ.

ಈ ಕೇಂದ್ರಕ್ಕೆ ತಿಂಗಳಿಗೆ ರೂ 200 ಬಾಡಿಗೆ ನೀಡಲಾಗುತ್ತಿದೆ. ಕೇಂದ್ರದ ಮುಂದೆ ನಾಮಫಲಕ ಸಹ ಅಳವಡಿಸಿಲ್ಲ. ಜತೆಗೆ ಮಕ್ಕಳಿಗೆ ಕಲಿಕಾ ಸಾಮಗ್ರಿ ಹಾಗೂ ಆಹಾರ ಸಾಮಗ್ರಿಗಳ ಇಡಲು ಸ್ಥಳಾವಕಾಶವಿಲ್ಲ. ಮಕ್ಕಳನ್ನು ಇಂತಹ ಕೇಂದ್ರಕ್ಕೆ ಕಳುಹಿಸುವುದು ಅನಿವಾರ್ಯವಾಗಿದೆ ಎಂಬುದು ಪೋಷಕರ ಅಳಲು.

ಸ್ವಂತ ಕಟ್ಟಡ ನಿರ್ಮಿಸಲು ನಿವೇಶನ ಕೇಳಲಾಗಿದೆ. ಆದರೆ, ಸ್ಥಳಾವಕಾಶ ಇನ್ನೂ ಲಭಿಸಿಲ್ಲ. ಬೇರೆ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಸಲು ಗ್ರಾಮಸ್ಥರು ಸ್ಥಳ ನೀಡಿದರೆ ಸೂಕ್ತವಾಗುತ್ತದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು
ಗೌಸಿಯಾ ಫಿರ್ದೂಸ್, ಮೇಲ್ವಿಚಾರಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT