ADVERTISEMENT

ಈ ಬಾರಿ 30 ಪದವೀಧರರು ಸ್ಪರ್ಧೆ

12 ಮಂದಿ ಎಸ್‌ಎಸ್‌ಎಲ್‌ಸಿ: ಐವರು ಅಭ್ಯರ್ಥಿಗಳ ವಿದ್ಯಾರ್ಹತೆ ಪಿಯುಸಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 9:44 IST
Last Updated 20 ಏಪ್ರಿಲ್ 2013, 9:44 IST

ಚಾಮರಾಜನಗರ: ಉನ್ನತ ಶಿಕ್ಷಣ ಪಡೆದವರು ರಾಜಕೀಯ ಪ್ರವೇಶಿಸಬೇಕು ಎಂಬ ಮಾತಿಗೆ ಜಿಲ್ಲೆಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅರ್ಧದಷ್ಟು ಬೆಲೆ ಸಿಕ್ಕಿದೆ.

ಅಭ್ಯರ್ಥಿಗಳು ಉನ್ನತ ಶಿಕ್ಷಣ ಪಡೆದಿದ್ದರೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿ ಸುತ್ತಾರೆ. ಜತೆಗೆ, ಸಂವಿಧಾನದ ಆಶೋತ್ತರ ಈಡೇರಿ ಸಲು ಜನಪ್ರತಿನಿಧಿಗಳು ಉನ್ನತ ಶಿಕ್ಷಣ ಪಡೆದಿರಬೇಕು ಎಂಬುದು ಮತದಾರ ಪ್ರಭುಗಳ ನಂಬಿಕೆ.  
ಅಲ್ಲದೆ, ಉನ್ನತ ಶಿಕ್ಷಣ ಪಡೆದ ಅಭ್ಯರ್ಥಿ ಶಾಸನಸಭೆಯಲ್ಲಿ ಸಮರ್ಥವಾಗಿ ಜನರ ಸಮಸ್ಯೆ ಮಂಡಿಸಿ ಸರ್ಕಾರದ ಗಮನ ಸೆಳೆಯುತ್ತಾನೆ. ಉತ್ತಮ ಕಾನೂನು ಜಾರಿಗೊಳಿಸಲು ಶ್ರಮಿಸುತ್ತಾನೆ ಎನ್ನುವುದು ಸಾಮಾನ್ಯ ಮಾತು. ಈ ಹಿನ್ನೆಲೆಯಲ್ಲಿಯೇ ಉನ್ನತ ಶಿಕ್ಷಣ ಪಡೆದ ಅಭ್ಯರ್ಥಿಗಳು ಹೆಚ್ಚಾಗಿ ರಾಜಕೀಯ ಪ್ರವೇಶಿಸಬೇಕು ಎಂಬ ಮಾತು ಇತ್ತೀಚೆಗೆ ಬಲವಾಗಿ ಕೇಳಿಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಈ ಬಾರಿ ಜಿಲ್ಲೆಯಲ್ಲೂ ಪದವೀಧರ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 53 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇವರಲ್ಲಿ 30 ಅಭ್ಯರ್ಥಿಗಳು ಪದವೀಧರರಾಗಿದ್ದಾರೆ. ಈ ಸಂಖ್ಯೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ 11 ಅಭ್ಯರ್ಥಿಗಳು ಇದ್ದಾರೆ. ಪಕ್ಷೇತರರಾಗಿ ಹನೂರು ಕ್ಷೇತ್ರದಿಂದ ಸ್ಪರ್ಧಿಸಿರುವ ಡಾ.ಎಸ್. ದತ್ತೇಶ್‌ಕುಮಾರ್ ಪಿಎಚ್.ಡಿ ಪದವಿ ಪಡೆದಿರುವ ಏಕೈಕ ಅಭ್ಯರ್ಥಿಯಾಗಿದ್ದಾರೆ. ಇಬ್ಬರು ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಉಳಿದ 16 ಅಭ್ಯರ್ಥಿಗಳು ಸಾಮಾನ್ಯ ಪದವಿ ಪಡೆದಿದ್ದಾರೆ. ಇವರಲ್ಲಿ ನಾಲ್ವರು ಕಾನೂನು ಪದವಿ ಕೂಡ ಪಡೆದಿದ್ದಾರೆ.

2011ರ ಜನಗಣತಿ ಪ್ರಕಾರ ಜಿಲ್ಲೆಯ ಸಾಕ್ಷರತಾ ಪ್ರಮಾಣ ಶೇ. 61.12ರಷ್ಟಿದೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ರಾಷ್ಟ್ರದಲ್ಲಿ ಉನ್ನತ ಶಿಕ್ಷಣದ ಪ್ರಮಾಣ ಕಡಿಮೆ ಇರುವ 374 ಜಿಲ್ಲೆಗಳನ್ನು ಗುರುತಿಸಿದೆ. ಇದರಲ್ಲಿ 20 ಜಿಲ್ಲೆಗಳು ಕರ್ನಾಟಕದಲ್ಲಿವೆ. ಚಾಮರಾಜನಗರ ಜಿಲ್ಲೆ ಕೂಡ ಈ ಪಟ್ಟಿಯಲ್ಲಿದೆ.

ಉನ್ನತ ಶಿಕ್ಷಣದ ಪ್ರಮಾಣ ಕುಂಠಿತಗೊಂಡಿರುವ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ನಿವ್ವಳ ದಾಖಲಾತಿ ಪ್ರಮಾಣ(ಜೆಇಆರ್) ಕಡಿಮೆಯಿದೆ. ಪದವಿ ಕಾಲೇಜಿನ ಮೆಟ್ಟಿಲು ಹತ್ತಲು ವಿದ್ಯಾರ್ಥಿಗಳು ಹಿಂದೇಟು ಹಾಕುವ ಪರಿಣಾಮ ಗಡಿ ಜಿಲ್ಲೆಯಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಶೇ. 50ಕ್ಕೂ ಹೆಚ್ಚು ಮಂದಿ ಪದವೀಧರರಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಯಾವುದೇ, ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ಆಸ್ತಿ ಹಾಗೂ ಶೈಕ್ಷಣಿಕ ವಿದ್ಯಾರ್ಹತೆ ಕುರಿತ ಪ್ರಮಾಣ ಪತ್ರ(ಅಫಿಡೆವಿಟ್) ಸಲ್ಲಿಸಬೇಕು. ಬಹುಮುಖ್ಯವಾಗಿ ಚರಾಸ್ತಿ, ಸ್ಥಿರಾಸ್ತಿ, ಕ್ರಿಮಿನಲ್ ಮೊಕದ್ದಮೆ ಬಗ್ಗೆಯೂ ಸವಿವರವಾಗಿ ಘೋಷಿಸಬೇಕು. ಜತೆಗೆ, ತನ್ನ ಉದ್ಯೋಗ ಹಾಗೂ ವಿದ್ಯಾರ್ಹತೆ ಬಗ್ಗೆಯೂ ಅಭ್ಯರ್ಥಿಗಳು ಘೋಷಿಸಿಕೊಳ್ಳಬೇಕಿದೆ.

ಪ್ರಸ್ತುತ ನಾಲ್ಕು ಕ್ಷೇತ್ರಕ್ಕೆ 53 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇವರಲ್ಲಿ ಒಬ್ಬರು ಮಾತ್ರ ವಿದ್ಯಾರ್ಹತೆ ಪ್ರಕಟಿಸಿಲ್ಲ. ಉಳಿದಂತೆ ಎಸ್‌ಎಸ್‌ಎಲ್‌ಸಿಗಿಂತಲೂ ಕಡಿಮೆ ವಿದ್ಯಾರ್ಹತೆ ಹೊಂದಿರುವ ನಾಲ್ವರು ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರುವ 12 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಪಿಯುಸಿ ಓದಿರುವ ಐವರು ಅಭ್ಯರ್ಥಿಗಳು ಇದ್ದಾರೆ. ಒಬ್ಬ ಅಭ್ಯರ್ಥಿ ಡಿಪ್ಲೊಮಾ ಕೋರ್ಸ್ ಓದಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಕೇವಲ ಇಬ್ಬರು ಮಹಿಳೆಯರು ಮಾತ್ರವೇ ಸ್ಪರ್ಧಿಸಿದ್ದಾರೆ.

ಹನೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಪರಿಮಳಾ ನಾಗಪ್ಪ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿದ್ದಾರೆ. ಪರಿಮಳಾ ನಾಗಪ್ಪ ಒಮ್ಮೆ ಶಾಸಕರಾಗಿ ಇದೇ ಕ್ಷೇತ್ರ ಪ್ರತಿನಿಧಿಸಿದ್ದರು. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿರುವ ಎಂ. ನಾಗರತ್ನಾ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜತೆಗೆ, ಕಾನೂನು ಪದವಿ ಕೂಡ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.