ADVERTISEMENT

ಉತ್ಪಾದನೆ ಹೆಚ್ಚಿಸುವ ಕೃಷಿಗೆ ಒತ್ತು ನೀಡಿ

ಜಿಲ್ಲಾ ಕೃಷಿ ಇಲಾಖೆಯ ಉಪ ಯೋಜನಾ ನಿರ್ದೇಶಕ ಬಿ. ಶಿವಪ್ಪ ಸಲಹೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 9:38 IST
Last Updated 5 ಸೆಪ್ಟೆಂಬರ್ 2013, 9:38 IST

ಚಾಮರಾಜನಗರ: `ಉತ್ಪಾದನೆ ಹೆಚ್ಚಿಸುವಂತಹ ಕೃಷಿ ಚಟುವಟಿಕೆಗೆ ರೈತರು ವಿಶೇಷ ಗಮನಹರಿಸಬೇಕಿದೆ' ಎಂದು ಜಿಲ್ಲಾ ಕೃಷಿ ಇಲಾಖೆಯ ಉಪ ಯೋಜನಾ ನಿರ್ದೇಶಕ(ಎಟಿಎಂಎ) ಬಿ. ಶಿವಪ್ಪ ಸಲಹೆ ನೀಡಿದರು.

ತಾಲ್ಲೂಕಿನ ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಕೇಂದ್ರೀಯ ತೋಟದ ಬೆಳೆಗಳ ಸಂಶೊಧನಾ ಸಂಸ್ಥೆ ಮತ್ತು ಕೃಷಿ ವಿಜ್ಞಾನ ಕೇಂದ್ರದಿಂದ ತೆಂಗು ಮತ್ತು ಅಡಿಕೆ ಕೃಷಿ ಕುರಿತು ವಿಜ್ಞಾನಿಗಳೊಂದಿಗೆ ಹಮ್ಮಿಕೊಂಡಿದ್ದ ರೈತರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈಗ ಜಾಗತಿಕ ತಾಪಮಾನದ ಹೆಚ್ಚಳದಿಂದ ನೀರಿನ ಬೇಡಿಕೆಯೂ ಹೆಚ್ಚುತ್ತಿದೆ. ಈ ಹಿಂದೆ ಶೇ 20ರಷ್ಟು ಪ್ರಮಾಣದ ನೀರನ್ನು ಕುಡಿಯಲು ಹಾಗೂ ಕಾರ್ಖಾನೆಗಳಿಗೆ ಬಳಸಿಕೊಂಡು ಕೃಷಿಗೆ ಶೇ 80ರಷ್ಟು ಬಳಸಲಾಗುತ್ತಿತ್ತು. ಪ್ರಸ್ತುತ ಶೇ. 60ರಷ್ಟು ನೀರು ಕೃಷಿಗೆ ಲಭ್ಯವಾಗುತ್ತಿದೆ. ಹೀಗಾಗಿ, ಉತ್ಪಾದನೆ ಹೆಚ್ಚಿಸುವ ಕಡೆಗೆ ರೈತರು ಗಮನಹರಿಸಬೇಕು ಎಂದು ಹೇಳಿದರು.

ವಿಟ್ಲದ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಡಾ.ಕೆ.ಎಸ್. ಆನಂದ್ ಮಾತನಾಡಿ, `ಕೃಷಿಯಲ್ಲಿ ನವೀನ ತಾಂತ್ರಿಕತೆ ಅಳವಡಿಸಿಕೊಳ್ಳುವ ಮೂಲಕ ರೈತರು ಕೃಷಿಯಲ್ಲಿ ಹೆಚ್ಚಿನ ಲಾಭಗಳಿಸಬಹುದು. ಸ್ಥಳೀಯ ಬೆಳೆಗಳ ಮೌಲ್ಯವರ್ಧನೆಯತ್ತಲೂ ರೈತರು ಒಲವು ತೋರಬೇಕು. ತೆಂಗಿನ ಬೆಲೆ ಕುಸಿತ ಕಂಡಾಗ ಪರ್ಯಾಯವಾಗಿ `ನೀರಾ' ತೆಗೆಯಲು ಮುಂದಾಗುವುದು ಅನಿ ವಾರ್ಯ. ತೆಂಗಿನಕಾಯಿ ಮಾರಾಟದೊಂದಿಗೆ ಎಳನೀರಿಗೂ ಉತ್ತೇಜನ ನೀಡಬೇಕು ಎಂದು ಸಲಹೆ ನೀಡಿದರು.

ಕಾಸರಗೋಡಿನ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ಉತ್ಪಾದನಾ ವಿಭಾಗದ ಮುಖ್ಯಸ್ಥ ಡಾ.ರವಿಭಟ್ ಮಾತನಾಡಿ, `ಪ್ರಸ್ತುತ ಜಿಲ್ಲೆಯಲ್ಲಿ ತೆಂಗು ಬೆಳೆಯ ತಾಂತ್ರಿಕತೆ ಸಫಲತೆ ಕಂಡಿಲ್ಲ. ಈ ಹಿನ್ನೆಲೆಯಲ್ಲಿ ರೈತರು ತಮ್ಮ ಸಮಸ್ಯೆ ಬಿಚ್ಚಿಟ್ಟು ತೆಂಗುಬೆಳೆಗೆ ಪರಿಹಾರ ಕಂಡುಕೊಳ್ಳಬೇಕು' ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಬಿ.ಆರ್. ಗಿರೀಶ್, ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ.ಸಿ. ದೊರೆಸ್ವಾಮಿ, ಕಾಸರಗೋಡಿನ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ಉತ್ಪಾದನಾ ವಿಭಾಗದ ಮುಖ್ಯಸ್ಥ ಡಾ.ವಿನಾಯಕಹೆಗಡೆ,ಡಾ.ಎನ್.ಆರ್.ನಾಗರಾಜ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.