ADVERTISEMENT

ಕಣದಲ್ಲಿ ಸಾಂಪ್ರದಾಯಿಕ ಎದುರಾಳಿಗಳು

ಕೊಳ್ಳೇಗಾಲದಲ್ಲಿ ಕಾಂಗ್ರೆಸ್‌, ಹನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಬದಲು

ಕೆ.ಎಸ್.ಗಿರೀಶ್
Published 18 ಏಪ್ರಿಲ್ 2018, 6:04 IST
Last Updated 18 ಏಪ್ರಿಲ್ 2018, 6:04 IST

ಚಾಮರಾಜನಗರ: ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ಸಾಂಪ್ರದಾಯಿಕ ಎದುರಾಳಿಗಳೇ  ಮತ್ತೆ ಎದುರಾಗುತ್ತಿದ್ದಾರೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮಾತ್ರ ತಮ್ಮ ಅಭ್ಯರ್ಥಿಗಳನ್ನು ಬದಲಾವಣೆ ಮಾಡಿವೆ. ಉಳಿದಂತೆ, ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ಉಭಯ ಪಕ್ಷಗಳು ಕಳೆದ ಬಾರಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ಮತ್ತೆ ಮಣೆ ಹಾಕಿವೆ.

ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಸತತ 2 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇವರಿಗೆ ಪ್ರಬಲ ಪೈಪೋಟಿ ನೀಡಿದ್ದ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಸಹ ಈ ಬಾರಿ ಕಣದಲ್ಲಿದ್ದಾರೆ. ಕಳೆದ ಬಾರಿ ಇವರು ಕೆಜೆಪಿಯಿಂದ ಸ್ಪರ್ಧಿಸಿದ್ದರು. ಈ ಬಾರಿ ಇವರು ಬಿಜೆಪಿಯಿಂದ ಕಣಕ್ಕೆ ಇಳಿದಿದ್ದಾರೆ.

ಗುಂಡ್ಲುಪೇಟೆ ಕ್ಷೇತ್ರದಲ್ಲೂ ಇದೇ ಬಗೆಯ ಚಿತ್ರಣ ಇದೆ. ಕಳೆದ ಬಾರಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಎಂ.ಸಿ.ಮೋಹನಕುಮಾರಿ ವಿರುದ್ಧ ಬಿಜೆಪಿಯಿಂದ ಸಿ.ಎಸ್.ನಿರಂಜನಕುಮಾರ್ ಸ್ಪರ್ಧಿಸಿದ್ದರು. 2013ರ ವಿಧಾನಸಭಾ ಚುನಾವಣೆಯಲ್ಲಿಯೂ ಇವರೇ ಎಚ್.ಎಸ್.ಮಹದೇವಪ್ರಸಾದ್ ಅವರ ಎದುರಾಳಿಯಾಗಿದ್ದರು. ಆದರೆ, ಆಗ ಇವರು ಕೆಜೆಪಿಯಿಂದ ಕಣಕ್ಕಿಳಿದಿದ್ದರು. ಈಗ ಇವರು ಮತ್ತೆ ಬಿಜೆಪಿಯಿಂದ ಅಖಾಡಕ್ಕೆ ಇಳಿದಿದ್ದಾರೆ.

ADVERTISEMENT

ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಕಳೆದ ಬಾರಿ ಶಾಸಕರಾಗಿದ್ದ ಆರ್.ನರೇಂದ್ರ ಅವರಿಗೆ ಮತ್ತೆ ಈ ಬಾರಿ ಟಿಕೆಟ್‌ ನೀಡಿದೆ. ಆದರೆ, ಬಿಜೆಪಿ ತನ್ನ ಅಭ್ಯರ್ಥಿಯನ್ನು ಬದಲಿಸಿದೆ. ಕಳೆದ ಬಾರಿ ಬಿ.ಕೆ.ಶಿವಕುಮಾರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಈ ಬಾರಿ ಪ್ರೀತನ್
ನಾಗಪ್ಪ ಅವರಿಗೆ ಅದು ಟಿಕೆಟ್ ನೀಡಿದೆ. ಇವರ ತಾಯಿ ಪರಿಮಳ ನಾಗಪ್ಪ ಕಳೆದ ಬಾರಿ ಜೆಡಿಎಸ್‌ನಿಂದ ಕಣದಲ್ಲಿದ್ದರು.

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಪರಿಸ್ಥಿತಿಯೂ ಹನೂರು ಕ್ಷೇತ್ರವನ್ನೇ ಹೋಲುತ್ತದೆ. ಹನೂರಿನಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಬದಲಿಸಿದ್ದರೆ, ಕೊಳ್ಳೇಗಾಲದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿ ಬದಲಿಸಿದೆ. ಹನೂರಿನಲ್ಲಿ ಬಿಜೆಪಿ ಹೊಸಬರಿಗೆ ಟಿಕೆಟ್ ನೀಡಿದ್ದರೆ, ಕೊಳ್ಳೇಗಾಲದಲ್ಲಿ ಕಾಂಗ್ರೆಸ್ ಹಳಬರಿಗೆ ಟಿಕೆಟ್ ನೀಡಿದೆ. ಹಾಲಿ ಶಾಸಕ ಎಸ್.ಜಯಣ್ಣ ಅವರ ಬದಲಿಗೆ ಎ.ಆರ್.ಕೃಷ್ಣಮೂರ್ತಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಮೂಲಕ ಹೊಸ ಪ್ರಯೋಗಕ್ಕೆ ನಾಂದಿ ಹಾಡಿದೆ. ಆದರೆ, ಬಿಜೆಪಿ ತನ್ನ ಹಳೆಯ ಅಭ್ಯರ್ಥಿ ಜಿ.ಎನ್.ನಂಜುಂಡಸ್ವಾಮಿ ಹಾಗೂ ಬಿಎಸ್‌ಪಿ ಎನ್.ಮಹೇಶ್‌ ಅವರಿಗೆ ಮತ್ತೆ ಟಿಕೆಟ್ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.