ADVERTISEMENT

ಕಲಿಕೆಗೆ ತಾತ್ಸಾರ ಬೇಡ: ಗಿರಿಜನರಿಗೆ ಸಲಹೆ

ಬಿಳಿಗಿರಿರಂಗನಬೆಟ್ಟದ ಪುರಾಣಿ ಪೋಡಿನಲ್ಲಿ ಜನಸಂಪರ್ಕ ಸಭೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 10:26 IST
Last Updated 6 ಡಿಸೆಂಬರ್ 2012, 10:26 IST

ಯಳಂದೂರು: `ರಾಷ್ಟ್ರದಲ್ಲಿ ಕಡ್ಡಾಯ ಶಿಕ್ಷಣ ನೀತಿ ಜಾರಿಯಲ್ಲಿದೆ. ಆದರೂ ಬಹುತೇಕ ಪೋಡುಗಳಲ್ಲಿ ವಾಸ ಮಾಡುವ ಗಿರಿಜನರಲ್ಲಿ ಶಿಕ್ಷಣದ ಪ್ರಮಾಣ ಕಡಿಮೆ ಇದೆ. ಇದಕ್ಕೆ ತಾತ್ಸರ ಮನೋಭಾವನೆಯೇ ಕಾರಣ. ಶಿಕ್ಷಣದಿಂದ ವೈಯುಕ್ತಿಕ ಹಾಗೂ ಜನಾಂಗದ ಅಭಿವೃದ್ಧಿ ಸಾಧ್ಯವಾಗುವುದರಿಂದ ಪ್ರತಿಯೊಬ್ಬರೂ ಕಲಿಕೆಗೆ ಪ್ರಾಶಸ್ತ್ಯ ನೀಡಬೇಕು' ಎಂದು ಜಿಲ್ಲಾಧಿಕಾರಿ ಜಯರಾಮ್ ಗಿರಿಜನರಿಗೆ ಕರೆ ನೀಡಿದರು.

ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಪುರಾಣಿ ಪೋಡಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಪುರಾಣಿ ಪೋಡಿನಲ್ಲಿ 5ನೇ ತರಗತಿಯವರೆಗೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಆಶ್ರಮ ಶಾಲೆ ನಡೆಯುತ್ತಿದೆ. 47 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಅದರಲ್ಲಿ ಕೇವಲ 32 ವಿದ್ಯಾರ್ಥಿಗಳ ಹಾಜರಾತಿ ಮಾತ್ರ ಇದೆ. ಇದಕ್ಕೆ ಅವಕಾಶ ನೀಡದೇ ಪೋಷಕರು ಹಾಗೂ ಶಿಕ್ಷಕರು ಮಕ್ಕಳನ್ನು ವಿದ್ಯಾಭ್ಯಾಸದ ಕಡೆಗೆ ತರಬೇಕು ಎಂದರು.

ಈಗಾಗಲೇ ಅಂಬೇಡ್ಕರ್ ಯೋಜನೆಯಡಿಯಲ್ಲಿ ಮನೆ ನಿರ್ಮಿಸಿಕೊಂಡಿರುವ ಫಲಾನುಭವಿಗಳಿಗೆ ಕೇವಲ ಒಂದೇ ಬಿಲ್ ಪಾವತಿಯಾಗಿದೆ. ಈ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಇನ್ನುಳಿದ ಬಿಲ್ ಪಾವತಿಸಲು ಬೇಕಾದ ಕ್ರಮವಹಿಸಲಾಗುವುದು ಎಂದು ಹೇಳಿದರು.

ಪೋಡಿನಲ್ಲಿರುವ ವಸತಿ, ಕುಡಿಯುವ ನೀರು, ರಸ್ತೆ ಹಾಗೂ ವಿದ್ಯುತ್ ನೀಡಲು ಕ್ರಮಕೈಗೊಳ್ಳಲಾಗುವುದು. ಇಲ್ಲಿರುವ ಸೋಲಾರ್ ವಿದ್ಯುತ್ ದೀಪಗಳು ಹಾಳಾಗಿದ್ದು ಇದರ ದುರಸ್ತಿಗೆ ಗಿರಿಜನರ ಕಲ್ಯಾಣ ಇಲಾಖೆ ವತಿಯಿಂದ ದುರಸ್ತಿ ಮಾಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದಕ್ಕೂ ಮುಂಚೆ ಪೋಡಿನ ಅಂಗನವಾಡಿ, ಶಾಲೆ ಹಾಗೂ ಬೀದಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಕೇತಮ್ಮ, ತಾಲ್ಲೂಕು ಪಂಚಾಯಿತಿ ಸದಸ್ಯ ಮಹೇಶ್‌ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಣ್ಣ, ಸದಸ್ಯರಾದ ತಂಟ್ರಿನಂಜೇಗೌಡ, ದಾಸೇಗೌಡ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಸೋಮಶೇಖರ್, ಗಿರಿಜನ ಅಭಿವೃದ್ಧಿ ಅಧಿಕಾರಿ ನಾಗರತ್ನ, ಆಹಾರ ಇಲಾಖೆಯ ಉಪನಿರ್ದೇಶಕ ಮಹಾದೇವಪ್ಪ, ತಹಶೀಲ್ದಾರ್ ಶಿವನಾಗಯ್ಯ, ಇಒ ರಘುನಾಥ್, ಎಸಿಎಫ್ ಶ್ರೀಧರ್, ಎಇಇ ದೇವರಾಜು, ಬೊಮ್ಮಯ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಗಿರಿಜನರು ಹಾಜರಿದ್ದರು.

ಶೀಘ್ರ ಮನೆ ನಿರ್ಮಿಸಿಕೊಳ್ಳಿ: ಜಿಲ್ಲಾಧಿಕಾರಿ ಸೂಚನೆ
ಯಳಂದೂರು: `ಈ ಬಾರಿ ಪುರಾಣಿ ಪೋಡಿನ 55 ಮಂದಿ ಗಿರಿಜನರಿಗೆ ಮನೆ ನಿರ್ಮಿಸಿಕೊಳ್ಳಲು ಅವಕಾಶವಿದೆ. ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಕಚ್ಚಾವಸ್ತು ಶೇಖರಣೆ ಮಾಡಿಕೊಳ್ಳುವ ಮೂಲಕ ಮನೆ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು' ಎಂದು ಜಿಲ್ಲಾಧಿಕಾರಿ ಜಯರಾಮ್ ಗಿರಿಜನರಿಗೆ ಕರೆ ನೀಡಿದರು.

ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಬುಧವಾರ ನಡೆದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮನೆ ನಿರ್ಮಿಸಿಕೊಳ್ಳಲು 3 ಹಂತದಲ್ಲಿ ಹಣ ಬಿಡುಗಡೆಯಾಗುತ್ತದೆ. ಇದರ ಜೊತೆಗೆ ಗಿರಿಜನರು ತಮ್ಮ ಹಣ ಹಾಗೂ ದೈಹಿಕ ಶ್ರಮ ಮಾಡುವ ಜೊತೆಗೆ ಉತ್ತಮ ಮನೆ ನಿರ್ಮಿಸಿಕೊಳ್ಳಬೇಕು ಎಂದು ಸೂಚಿಸಿದರು.

ಪೋಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ತುಂಬಾ ಹದಗೆಟ್ಟಿದೆ. ಈ ರಸ್ತೆಯ ದುರಸ್ತಿಗೆ ಅರಣ್ಯ ರಕ್ಷಣೆ ಕಾಯ್ದೆಯಡಿ ಕೆಲವು ತೊಡಕುಗಳಿವೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜೊತೆ ಸಂಪರ್ಕಿಸಿ ರಸ್ತೆ ನಿರ್ಮಾಣಕ್ಕೆ ಕ್ರಮ ವಹಿಸಲಾ ಗುವುದು. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೊಜನೆಯಡಿಯಲ್ಲಿ ಗೆಜ್ಜಲು ಪಾಳ್ಯದಿಂದಲೂ ರಸ್ತೆ ನಿರ್ಮಾಣಗೊಂಡಿದೆ. ಇದರ ಹಣವನ್ನೂ ಪಾವತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಪೋಡಿನಲ್ಲಿ 100 ಕ್ಕೂ ಹೆಚ್ಚು ಕುಟುಂಬಗಳಿಗೆ ಶೌಚಾಲಯ ನಿರ್ಮಾಣಕ್ಕೆ ಗುಂಡಿ ತೋಡಿ ಹಲವು ವರ್ಷಗಳೇ ಉರುಳಿವೆ. ಇವು ನಿರ್ಮಾಣವಾಗಿಲ್ಲ ಎಂದು ಗ್ರಾಮಸ್ಥರು ದೂರಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು `ಈ ಬಗ್ಗೆ ನಿರ್ಮಿತಿ ಕೇಂದ್ರಕ್ಕೆ ಸೂಚನೆ ನೀಡಿ 20 ದಿನದೊಳಗೆ ಶೌಚಾಲಯ ನಿರ್ಮಿಸಲಾಗುವುದು. ಪ್ರತಿಯೊಬ್ಬ ಗ್ರಾಮಸ್ಥರೂ ಕಡ್ಡಾಯವಾಗಿ ಶೌಚಾಲಯದ ಬಳಕೆ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕೆಂದು' ಸಲಹೆ ನೀಡಿದರು.

ಪೋಡಿಗೆ ವಿದ್ಯುತ್ ಸಂಪರ್ಕ ನೀಡುವಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ರವಾನೆ ಮಾಡಿ ಮಂಜೂರಾತಿ ಪಡೆದು ಕೊಂಡು ಪರಿಹಾರ ಕಲ್ಪಿಸುವಲ್ಲಿ ಶ್ರಮವಹಿಸುವುದಾಗಿ ತಿಳಿಸಿದರು.

ಇದಲ್ಲದೇ ಬೆಟ್ಟದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೊರೆದಿರುವ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆಶ್ರಮ ಶಾಲೆಗೆ ಕೇವಲ ಒಂದು ಕೊಠಡಿ ಮಾತ್ರ ಇದೆ. ಪಕ್ಕದಲ್ಲೇ ಇರುವ ಗಿರಿಜನರ ವಿವಿದೋದ್ದೇಶ ಸಹಕಾರ ಸಂಘದ ಕಟ್ಟಡ ದುರಸ್ತಿ ಮಾಡಿಸಿ ಶಾಲೆಗೆ ನೀಡುವಂತೆ ತಿಳಿಸಲಾಯಿತು. ಸಾಮಾಜಿಕ ಪಿಂಚಣಿ ಹಾಗೂ ಪಡಿತರ ಚೀಟಿ ವಂಚಿತರಿಗೆ ಶೀಘ್ರದಲ್ಲೇ ಕೊಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಸೋಮಶೇಖರ್, ತಾಲ್ಲೂಕು ಕಾರ್ಯನಿರ್ವಹಕಾಧಿಕಾರಿ ರಘುನಾಥ್ ಮಾತನಾಡಿದರು.

ಇದಕ್ಕೂ ಮುಂಚೆ ಅಂಗನವಾಡಿ, ಆಶ್ರಮ ಶಾಲೆ ಹಾಗೂ ಪರಾಣಿ ಪೋಡಿನ ವಿವಿಧ ಬೀದಿಗಳು ಹಾಗೂ ಮನೆಗಳಿಗೆ ಭೇಟಿ ನೀಡಿ ಸೋಲಿಗರ ದೂರು ಆಲಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯೆ ಕೇತಮ್ಮ, ತಾಲ್ಲೂಕು ಪಂಚಾಯಿತಿ ಸದಸ್ಯ ಮಹೇಶ್‌ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಣ್ಣ, ಸದಸ್ಯರಾದ ತಂಟ್ರಿನಂಜೇಗೌಡ, ದಾಸೇಗೌಡ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಸೋಮಶೇಖರ್, ಗಿರಿಜನ ಅಭಿವೃದ್ಧಿ ಅಧಿಕಾರಿ ನಾಗರತ್ನ, ಆಹಾರ ಇಲಾಖೆಯ ಉಪ ನಿರ್ದೇಶಕ ಮಹಾದೇವಪ್ಪ, ತಹಶೀಲ್ದಾರ್ ಶಿವನಾಗಯ್ಯ, ಇಒ ರಘುನಾಥ್, ಎಸಿಎಫ್ ಶ್ರೀಧರ್, ಎಇಇ ದೇವರಾಜು, ಬೊಮ್ಮಯ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಗಿರಿಜನರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT