ADVERTISEMENT

‘ಕಾನೂನು ಅನುಷ್ಠಾನಕ್ಕೆ ಸಹಕಾರ ಅಗತ್ಯ’

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 6:50 IST
Last Updated 17 ಮಾರ್ಚ್ 2018, 6:50 IST

ಚಾಮರಾಜನಗರ: ‘ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹದಂತಹ ಪ್ರಕರಣಗಳನ್ನು ತಡೆಯಲು ಹಲವು ಕಾನೂನುಗಳು ಜಾರಿಯಾಗಿವೆ. ಅವು ಸಮರ್ಪಕವಾಗಿ ಅನುಷ್ಠಾನವಾಗಬೇಕಾದರೆ  ಜನರ ಸಹಕಾರ ಅಗತ್ಯ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಪಿ. ನಂದೀಶ್ ಹೇಳಿದರು.

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಗುರುವಾರ ಓಪಿಡಿ ಸಂಸ್ಥೆ ಮೈಸೂರು, ಮಹಿಳೋದಯ ಮಹಿಳಾ ಒಕ್ಕೂಟದಿಂದ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹೆಣ್ಣಿಗೆ ಹೆಣ್ಣೆ ವೈರಿಗಳಾಗಿದ್ದಾರೆ. ಲಿಂಗಪತ್ತೆ  ಮಾಡಿಸಿ, ಗರ್ಭದಲ್ಲಿಯೆ ಹೆಣ್ಣು ಮಗುವನ್ನು ಕೊಲ್ಲುವ ಅಮಾನವೀಯ ಕೃತ್ಯ ನಡೆಯುತ್ತಲೆ ಬಂದಿದೆ. ಇದೇಲ್ಲ ನಿಲ್ಲಬೇಕಾದರೆ ಮಹಿಳೆಯರು ಜಾಗೃತರಾಗಬೇಕು ಎಂದು ತಿಳಿಸಿದರು.

ADVERTISEMENT

ಸಾಧನೆ ಮಾಡಲು ದೊಡ್ಡ ಅಧಿಕಾರಿ ಗಳೇ ಆಗಬೇಕಿಲ್ಲ. ನಿಜ ಜೀವನದಲ್ಲಿಯು ಸಾಧನೆ ಮಾಡಬಹುದು. ಈ ನಿಟ್ಟಿನಲ್ಲಿ ಮಹಿಳೆಯರು ಆಲೋಚಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ  ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಹರೀಶ್‍ಕುಮಾರ್ ಮಾತನಾಡಿ. ಮಹಿಳಾ ದಿನಾಚರಣೆ ಎಂದರೆ ಮಹಿಳೆ ಮತ್ತು ಪುರುಷರು ಸೇರಿ ಆಚರಿಸಬೇಕು. ಎಲ್ಲರ ಮನೋಭಾವನೆ ಬದಲಾಗಬೇಕು. ಕುಟುಂಬದಲ್ಲಿ ಮೇಲು, ಕೀಳು ಇರಬಾರದು. ಪೋಷಕರು ಗಂಡು, ಹೆಣ್ಣು ಇಬ್ಬರಲ್ಲೂ ಸಮಾನ ಪ್ರೀತಿ ತೋರಿಸಬೇಕು ಎಂದು ತಿಳಿಸಿದರು.

ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಚ್.ಎಸ್. ಪ್ರೇಮಲತಾ ಮಾತನಾಡಿ, ಸುಸ್ತಿರ ಅಭಿವೃದ್ಧಿ ಮಹಿಳೆಯರಿಂದ ಸಾಧ್ಯ. ಮಹಿಳೆ ಅತಿ ಹೆಚ್ಚು ಕ್ರಿಯಾಶೀಲಳಾ ಗಿದ್ದು, ಅನಾದಿ ಕಾಲದಿಂದಂದಲೂ ಲಿಂಗ ಸಮಾನತೆ ಬಗ್ಗೆ ಹೋರಾಟ ಮಾಡುತ್ತಿದ್ದಾಳೆ ಎಂದರು.

ನಬಾರ್ಡ್ ಬ್ಯಾಂಕ್‍ನ ವ್ಯವಸ್ಥಾಪಕ ಜಗದೀಶ್, ಆರ್ಥಿಕ ಸಲಹೆಗಾರ ಶಂಕರ್, ಓಪಿಡಿ ಸಂಸ್ಥೆಯ ನಿರ್ದೇಶಕ ವಂದನೆಸ್ವಾಮಿ ಸ್ಟ್ಯಾನಿ ಡಿ. ಆಲ್ಮೇಡಾ, ಸಂಸ್ಥೆ ಸಂಯೋಜಕಿ ಸುನಿತಾ ಮಾತನಾಡಿದರು.

ಕಾರ್ಯಕ್ರಮದಲ್ಲಿ ಓಡಿಪಿ ನಾಗವಳ್ಳಿ ತಾಲ್ಲೂಕು ಅಧ್ಯಕ್ಷರಾದ ಆಶಾಲತಾ, ಶಿವಮ್ಮ, ತಾಲ್ಲೂಕು ಅಧ್ಯಕ್ಷೆ ದೇವಮ್ಮ, ವಲಯ ಸಂಯೋಜಕರು, ಕಾರ್ಯಕರ್ತರು ಹಾಗೂ ಸಿಬಂದ್ದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.