ADVERTISEMENT

ಕುಡಿತದಿಂದ ಏನು ಸಿಗುತ್ತದೆ: ಜಿ.ಪಂ ಸಿಇಒ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2017, 7:15 IST
Last Updated 18 ಡಿಸೆಂಬರ್ 2017, 7:15 IST

ಚಾಮರಾಜನಗರ: ‘ಮದ್ಯಪಾನದ ದುಶ್ಚಟಕ್ಕೆ ದಾಸರಾದವರು ಅದರಿಂದ ಕುಟುಂಬ ಮತ್ತು ಸಮಾಜದ ಮೇಲಾಗುವ ಪರಿಣಾಮಗಳ ಕುರಿತು ಚಿಂತಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‌ಕುಮಾರ್ ಸಲಹೆ ನೀಡಿದರು.

ನಗರದಲ್ಲಿ ಭಾನುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿರುವ 1173ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಕೆಲವರು ದುಃಖಕ್ಕೆ ಕುಡಿಯುತ್ತೇವೆ ಎನ್ನುತ್ತಾರೆ. ಇನ್ನು ಕೆಲವರು ಖುಷಿಗೆ ಕುಡಿಯುವುದಾಗಿ ಹೇಳುತ್ತಾರೆ. ಕುಡಿತದಿಂದ ಏನು ಸಿಗುತ್ತದೆ ಎಂಬು ದನ್ನು ಯೋಚಿಸಬೇಕು. ನಿಮ್ಮನ್ನು ಅವಲಂಬಿಸಿರುವ ಮನೆಯವರು ಸಹ ನಿಮ್ಮಂತೆಯೇ ಕುಡಿತದ ಚಟ ಅಂಟಿಸಿಕೊಂಡರೆ ಕುಟುಂಬದ ಗತಿ ಏನಾಗಬಹುದು? ನಿಮ್ಮನ್ನು ನಂಬಿಕೊಂಡವರು ತಮ್ಮ ಬದುಕಿನ ಎಷ್ಟೋ ಸಂತಸಗಳನ್ನು ತ್ಯಾಗ ಮಾಡಿರುತ್ತಾರೆ. ಇವುಗಳನ್ನು ಅರ್ಥಮಾಡಿಕೊಳ್ಳಬೇಕು’ ಎಂದು ಶಿಬಿ ರಾರ್ಥಿಗಳಿಗೆ ಕಿವಿಮಾತು ಹೇಳಿದರು.

ADVERTISEMENT

ಸರ್ಕಾರದ ಕಡೆಯಿಂದ ನಡೆಯಬೇಕಾದ ಕೆಲಸಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಮಾಡುತ್ತಿದೆ. ಮದ್ಯಕ್ಕೆ ದಾಸರಾದವರ ಮನಃಪರಿವರ್ತನೆ ಮಾಡುವ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕು. ಇಂತಹ ಕಾರ್ಯಗಳಿಗೆ ಜಿಲ್ಲಾಡಳಿತ ಕೈಜೋಡಿಸಲಿದೆ ಎಂದು ತಿಳಿಸಿದರು.

ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಸತೀಶ್‌ ಶೆಟ್ಟಿ ಮಾತನಾಡಿ, ಬೇರೆ ಬೇರೆ ಕಾಯಿಲೆಗಳಿಗೆ ಔಷಧ, ಚಿಕಿತ್ಸೆ ಇದೆ. ಆದರೆ, ಮದ್ಯಪಾನದ ಚಟವನ್ನು ಬಿಡಿಸಲು ಔಷಧವಿಲ್ಲ. ಮನಃಪರಿವರ್ತನೆಯಿಂದ ಮಾತ್ರ ಅದು ಸಾಧ್ಯ ಎಂದರು.

ಮುಂಬರುವ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ರಾಜ್ಯವನ್ನು ಮದ್ಯಪಾನ ಮುಕ್ತವನ್ನಾಗಿಸುವ ಘೋಷಣೆ ಮಾಡಬೇಕು. ಮದ್ಯ ನಿಷೇಧ ಮಾಡುವ ಕಾಳಜಿಯುಳ್ಳ ಪಕ್ಷಕ್ಕೆ ಬೆಂಬಲ ಸೂಚಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಕೆ. ಪುರಂದರ, ಜಿಲ್ಲಾ ಜನಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷ ರಾಜಶೇಖರ ಆರಾಧ್ಯ, ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ. ಚಂದ್ರಶೇಖರ್, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.