ADVERTISEMENT

‘ಕುಡಿತ ಬಿಟ್ಟು ಮಕ್ಕಳಿಗೆ ವಿದ್ಯೆ ಕೊಡಿಸಿ’

ದುಶ್ಚಟ ಬಿಟ್ಟರೆ ಅದುವೇ ಅಂಬೇಡ್ಕರ್‌ಗೆ ಶ್ರದ್ಧಾಂಜಲಿ: ಸಚಿವ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 11:31 IST
Last Updated 19 ಜೂನ್ 2018, 11:31 IST
ಯರಿಯೂರು ಗ್ರಾಮದಲ್ಲಿ ಭಾನುವಾರ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಸಚಿವ ಎನ್. ಮಹೇಶ್ ಮಾತನಾಡಿದರು
ಯರಿಯೂರು ಗ್ರಾಮದಲ್ಲಿ ಭಾನುವಾರ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಸಚಿವ ಎನ್. ಮಹೇಶ್ ಮಾತನಾಡಿದರು   

ಯಳಂದೂರು: ‘ಮದ್ಯ ವ್ಯಸನಿಗಳು ಕುಡಿತದ ಚಟವನ್ನು ತ್ಯಜಿಸಿ ಅದೇ ಹಣದಲ್ಲಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಮೂಲಕ ಅವರ ಭವಿಷ್ಯ ರೂಪಿಸಬೇಕು’ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ಸಲಹೆ ನೀಡಿದರು.

ತಾಲ್ಲೂಕಿನ ಯರಿಯೂರು ಗ್ರಾಮದಲ್ಲಿ ಭಾನುವಾರ ಅಂಬೇಡ್ಕರ್ ಸಂಘ ಹಾಗೂ ಗ್ರಾಮಸ್ಥರ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈಚೆಗೆ ಪರಿಶಿಷ್ಟರು ಹಾಗೂ ಹಿಂದುಳಿದ ವರ್ಗಗಳ ಸಮುದಾಯದಲ್ಲಿ ಕುಡಿತದ ಚಟ ಹೆಚ್ಚಾಗಿದೆ. ಇದು ಇಡೀ ಕುಟುಂಬವನ್ನು ಸರ್ವನಾಶ ಮಾಡುವ ಸಮೂಹ ಸನ್ನಿಯಾಗಿದೆ. ಇದರಿಂದ ಇಡೀ ಕುಟುಂಬವೇ ಬೀದಿಗೆ ಬೀಳುವ ಅಪಾಯವಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಅಂಬೇಡ್ಕರ್‌ ಅವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಬೇಕಾದರೆ ದುಶ್ಚಟಗಳಿಂದ ದೂರವಿರುವ ಶಪಥ ಮಾಡಬೇಕು. ಅಂಬೇಡ್ಕರ್ ಬೇರೆ ದೇಶದಲ್ಲಿ ಅನೇಕ ವರ್ಷಗಳಿದ್ದರೂ ಇಂತಹ ಚಟದಿಂದ ದೂರವಿದ್ದರು’ ಎಂದು ಹೇಳಿದರು.

‘ನಾನು ಬರೀ ಬಿಎಸ್‌ಪಿ ಶಾಸಕನಲ್ಲ, ಕೊಳ್ಳೇಗಾಲ ಕ್ಷೇತ್ರದ ಶಾಸಕ. ಸಾರ್ವಜನಿಕರು, ರಾಜಕಾರಣಿಗಳು ಪ್ರಬುದ್ಧತೆಯನ್ನು ಬೆಳೆಸಿಕೊಳ್ಳಬೇಕು. ಪಕ್ಷಕ್ಕಾಗಿ ಜಾತಿಯನ್ನು ಬಳಸಿಕೊಳ್ಳ ಬಾರದು’ ಎಂದು ತಿಳಿಸಿದರು.

ನಳಂದ ಬುದ್ಧ ವಿಹಾರದ ಬೋಧಿರತ್ನ ಭಂತೇಜಿ, ದೆಹಲಿಯ ಐಎಎಸ್ ತರಬೇತುದಾರ ಶಿವಕುಮಾರ್, ಜಿ.ಪಂ ಉಪಾಧ್ಯಕ್ಷ ಜೆ. ಯೋಗೇಶ್, ಕಿನಕಹಳ್ಳಿ ರಾಚಯ್ಯ, ತಾ.ಪಂ ಸದಸ್ಯ ನಂಜುಂಡಯ್ಯ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಚಿಕ್ಕಮಾದಯ್ಯ, ಸಿಪಿಐ ರಾಜೇಶ್, ಗ್ರಾ.ಪಂ ಸದಸ್ಯರಾದ ಚಂದ್ರಮ್ಮ, ವೈ.ಸಿ. ಲಿಂಗರಾಜು, ಸುಧಾ, ಆಶಾ, ಶಿವಗಂಗಮ್ಮ, ಮೂರ್ತಿ, ಮುಖಂಡರಾದ ವಾಸು, ಜವರಯ್ಯ, ಕೆ.ಜಯಣ್ಣ, ಮಲ್ಲಿಕಾರ್ಜುನ, ಅಂಬೇಡ್ಕರ್ ಸಂಘದ ಅಧ್ಯಕ್ಷ ಬಿ.ಕೃಷ್ಣಮೂರ್ತಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.