ADVERTISEMENT

ಕೈಮಗ್ಗ ವಸ್ತ್ರ ವೈಭವ ಆರಂಭ

​ಪ್ರಜಾವಾಣಿ ವಾರ್ತೆ
Published 4 ಜನವರಿ 2011, 9:50 IST
Last Updated 4 ಜನವರಿ 2011, 9:50 IST

ಚಾಮರಾಜನಗರ: ‘ಸಂಪನ್ಮೂಲ ಬಳಸಿಕೊಂಡು ಕೈಮಗ್ಗದ ವಸ್ತುಗಳ ಉತ್ಪಾದನೆಗೆ ಒತ್ತು ನೀಡಿದರೆ ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಗಲಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಸುಂದರನಾಯಕ್ ಹೇಳಿದರು. ನಗರದ ಲಕ್ಷ್ಮೀರಂಗನಾಥ ಕಲ್ಯಾಣ ಮಂಟಪದಲ್ಲಿ ಸೋಮವಾರ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಹಮ್ಮಿಕೊಂಡಿರುವ ಜಿಲ್ಲಾಮಟ್ಟದ ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವಾದ ‘ವಸ್ತ್ರ ವೈಭವ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಿಂಥೆಟಿಕ್ ಬಟ್ಟೆ ಬಳಕೆ ಹೆಚ್ಚಿದೆ. ಆದರೆ, ಈಗ ಖಾದಿ ಉಡುಪು ಖರೀದಿಗೆ ಜನರು ಆದ್ಯತೆ ನೀಡುತ್ತಿದ್ದಾರೆ. ಇದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮ. ಕೈಮಗ್ಗದ ವಸ್ತುಗಳ ಬಳಕೆ ಬಗ್ಗೆ ಹೆಚ್ಚಿನ ಪ್ರಚಾರ ನೀಡುವ ಅಗತ್ಯವಿದೆ ಎಂದು ಹೇಳಿದರು. ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎಲ್. ಸುಭಾಷ್‌ಚಂದ್ರ, ಜವಳಿ ಪರಿವರ್ತನಾ ಅಧಿಕಾರಿ ಯೋಗೀಶ್, ರಾಜೇಂದ್ರ ಪ್ರಸಾದ್ ಹಾಜರಿದ್ದರು.

ವಸ್ತ್ರ ವೈಭವ: ಜ. 8ರವರೆಗೆ ವಸ್ತ್ರ ವೈಭವ ನಡೆಯಲಿದೆ. ಜಿಲ್ಲಾ ಪಂಚಾಯಿತಿ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಈ ಮೇಳ ಆಯೋಜಿಸಲಾಗಿದೆ. ಕೈಮಗ್ಗಗಳಿಂದ ತಯಾರಿಸಿದ ಬಟ್ಟೆಗಳಿಗೆ ಮಾರಾಟದ ವೇದಿಕೆ ಕಲ್ಪಿಸುವುದು ಇದರ ಉದ್ದೇಶ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ನೇಕಾರರ ಸಹಕಾರ ಸಂಘದವರು ಶೇ. 20ರಷ್ಟು ರಿಯಾಯಿತಿ ದರದಡಿ ಉತ್ಪನ್ನ ಮಾರಾಟ ಮಾಡಲಿದ್ದಾರೆ. ಮೇಳದಲ್ಲಿ 20 ಮಳಿಗೆ ಸ್ಥಾಪಿಸಲಾಗಿದೆ. ಎನ್‌ಜಿಒಗಳು ಮತ್ತು ಸ್ವಸಹಾಯ ಸಂಘಗಳು ಕೂಡ ಮೇಳದಲ್ಲಿ ಪಾಲ್ಗೊಂಡಿವೆ.
ಜಿಲ್ಲೆಯ ಅಂಕನಶೆಟ್ಟಿಪುರ, ಕೊಳ್ಳೇಗಾಲ, ಹನೂರು ಮತ್ತು ಸಂದನಪಾಳ್ಯ ಇತ್ಯಾದಿ ಗ್ರಾಮಗಳಿಂದ ಬಂದಿರುವ ಕೈಮಗ್ಗದ ಉತ್ಪನಗಳು ಮೇಳದಲ್ಲಿವೆ. 30 ಲಕ್ಷ ರೂ ಮೌಲ್ಯದ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.