ADVERTISEMENT

ಗಂಜಿ ಕೇಂದ್ರದಲ್ಲಿ ಬಡವಾದ ಬದುಕು

ಪ್ರಜಾವಾಣಿ ವಿಶೇಷ
Published 18 ಸೆಪ್ಟೆಂಬರ್ 2013, 8:47 IST
Last Updated 18 ಸೆಪ್ಟೆಂಬರ್ 2013, 8:47 IST

ಚಾಮರಾಜನಗರ: ‘ಪ್ರತಿವರ್ಷವೂ ಮಳೆ ಸುರಿಯುವ ವೇಳೆ ಮನೆಗೆ ನೀರು ನುಗ್ಗುತ್ತದೆ. ಎರಡು ದಿನದ ಹಿಂದೆ ಸುರಿದ ಮಳೆಗೆ ಮನೆ ಜಲಾವೃತವಾಗಿ ದಿನಸಿ ಪದಾರ್ಥಗಳು ಕಣ್ಣ ಮುಂದೆಯೇ ನೀರು ಪಾಲಾದವು. ನಾವೀಗ ಗಂಜಿ ಕೇಂದ್ರ­ದಲ್ಲಿ­ದ್ದೇವೆ. ಮನೆ ಗೋಡೆ ಕುಸಿದಿದ್ದು, ಅದರಡಿ ಸಿಲುಕಿದ ಗೃಹೋಪಯೋಗಿ ವಸ್ತುಗಳನ್ನು ಹೊರತೆಗೆಯುತ್ತಿದ್ದೇವೆ. ಈಗ ನೋಡಿ ಚಾಪೆ ಸಿಕ್ತು’ ಎಂದು ರಾಮಸಮುದ್ರದ ರಾಮಲಿಂಗೇಶ್ವರ ಬಡಾವಣೆಯ ನಾಗಮ್ಮ ತೋರಿಸಿದರು.

ಅದೇ ಬಡಾವಣೆಯ ರತ್ನಮ್ಮ ಅವರ ಮುಖದಲ್ಲೂ ನೋವು ಮಡುಗಟ್ಟಿತ್ತು. ‘ಇಳಿಜಾರಿನಲ್ಲಿ ನಮ್ಮ ಮನೆಯಿದೆ. ಶನಿವಾರ ರಾತ್ರಿ ಮಳೆ ಸುರಿದಾಗ ನಾವು ನೋಡುತ್ತಿದ್ದಂತೆಯೇ ಚರಂಡಿ ಉಕ್ಕಿ ಹರಿಯಿತು. ಚರಂಡಿಯ ಕಲ್ಮಷದೊಂದಿಗೆ ಬೆರೆತ ಮಳೆನೀರು ಮನೆಗೆ ನುಗ್ಗಿತು. ಈಗ  ದಿಕ್ಕೇ ತೋಚದಂತಾಗಿದೆ’ ಎಂದು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

ಜಿಲ್ಲಾ ಕೇಂದ್ರದಲ್ಲಿ ಮಳೆರಾಯನ ಆರ್ಭಟಕ್ಕೆ ಕೊಳಚೆ ಪ್ರದೇಶದಲ್ಲಿರುವ ಜನರ ಬದುಕು ತತ್ತರಿಸಿದೆ. ರೈಲ್ವೆ ಬಡಾವಣೆ, ಚೆನ್ನಿಪುರಮೋಳೆ, ರಾಮಸಮುದ್ರದ ಸ್ವೀಪರ್‌ ಕಾಲೊನಿ, ರಾಮಲಿಂಗೇಶ್ವರ ಬಡಾವಣೆ ಸೇರಿದಂತೆ ವಿವಿಧೆಡೆ ಮನೆಗಳು ಕುಸಿದು ಬಿದ್ದಿವೆ.
ಗಂಜಿ ಕೇಂದ್ರದಲ್ಲಿರುವ ಬಹುತೇಕ ಮಂದಿ ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಈಗ ಅವರಿಗೆ ಸ್ವಂತ ಮನೆಯೂ ಇಲ್ಲ. ಕುಸಿದಿರುವ ಮಣ್ಣು ತೆರವುಗೊಳಿಸುತ್ತಿದ್ದಾರೆ. ಹೀಗಾಗಿ, ಬೆಳಿಗ್ಗೆ ಕೂಲಿಗೂ ಹೋಗುವಂತಿಲ್ಲ. ಗಂಜಿ ಕೇಂದ್ರದಲ್ಲಿಯೇ ಅವರ ಬದುಕು ಬಡವಾಗುತ್ತಿದೆ.

ಈ ಪ್ರದೇಶದಲ್ಲಿ ಬಹುತೇಕ ಮಣ್ಣಿನ ಮನೆಗಳು ಹೆಚ್ಚಿವೆ. ಇದರ ಪರಿಣಾಮ ಸತತವಾಗಿ ಸುರಿದ ಮಳೆಗೆ ತೇವಾಂಶ ಹೆಚ್ಚಳಗೊಂಡು ಗೋಡೆಗಳು ಕುಸಿದು ಬಿದ್ದಿವೆ. ವರುಣನ ಆರ್ಭಟ ಮುಂದುವರಿದರೆ ಮತ್ತಷ್ಟು ಹಾನಿ ಸಂಭವಿಸಲಿದೆ.

ರಾಮಸಮುದ್ರದ ಬಳಿಯ ತಿಬ್ಬಳ್ಳಿಕಟ್ಟೆ ಕಟ್ಟೆ ಒಡೆದು ಹೋಗಿ ಮನೆಗಳಿಗೆ ನೀರು ನುಗ್ಗಿದೆ. ಹೀಗಾಗಿ, ಈ ಪ್ರದೇಶದಲ್ಲಿ ಹೆಚ್ಚಿನ ಹಾನಿಯಾಗಿದೆ. ಈ ಪ್ರದೇಶದ ಜನರು ಮಲಗಲು ಸ್ಥಳವಿಲ್ಲದೆ ಪರದಾಡುವ ಸ್ಥಿತಿ ಸೃಷ್ಟಿಯಾಗಿದೆ.

ಸಂತ್ರಸ್ತರಿಗಾಗಿ ಈ ಮೊದಲು ರಾಮಸಮುದ್ರದ ಸರ್ಕಾರಿ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿತ್ತು. ಈಗ ರಾಮಲಿಂಗೇಶ್ವರ ದೇವಸ್ಥಾನದ ಬಳಿಯಿರುವ ಅಂಗನವಾಡಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಗಂಜಿ ಕೇಂದ್ರದಲ್ಲಿ 150 ಸಂತ್ರಸ್ತರು
ಗಂಜಿ ಕೇಂದ್ರದಲ್ಲಿ 150 ಸಂತ್ರಸ್ತರು ಇದ್ದಾರೆ. ಮೊದಲು ಎರಡು ದಿನ ನಗರಸಭೆ ಮತ್ತು ಜಿಲ್ಲಾಡಳಿತದಿಂದ ಅಡುಗೆ ತಯಾರಿಸಿ ಸಂತ್ರಸ್ತರಿಗೆ ನೀಡಲಾಗಿತ್ತು. ಈಗ ಮನೆ ಕಳೆದುಕೊಂಡವರಿಗೆ ಆಹಾರ ಪದಾರ್ಥ ನೀಡಲಾಗುತ್ತಿದೆ. ಅವರೇ ಅಡುಗೆ ತಯಾರಿಸಿ, ಸೇವಿಸಬೇಕಿದೆ.

ನಿತ್ಯವೂ ಉಪ್ಪಿಟ್ಟು, ರೈಸ್‌ಬಾತ್‌ ಹಾಗೂ ಅನ್ನ, ಸಾಂಬಾರು ತಯಾರಿಸಿಕೊಂಡು ಸಂತ್ರಸ್ತರು ಸೇವಿಸುತ್ತಾರೆ. ಬಿಡುವಿನ ವೇಳೆ ಕುಸಿದು ಬಿದ್ದಿರುವ ಮನೆಯತ್ತ ಹೋಗಿ ಅಳಿದುಳಿದಿರುವ ಸಾಮಗ್ರಿಗಳನ್ನು ಒಟ್ಟುಗೂಡಿಸುವ ದೃಶ್ಯ ಕರುಳಿಗೆ ಚುರುಕು ಮುಟ್ಟಿಸುತ್ತದೆ.
ರಾತ್ರಿವೇಳೆ ಪುರುಷರು ಮಾತ್ರ ಅಂಗನವಾಡಿ ಕೇಂದ್ರದಲ್ಲಿ ಮಲಗುತ್ತಾರೆ. ಮಹಿಳೆಯರು, ಮಕ್ಕಳು, ವೃದ್ಧರು ನೆರೆಹೊರೆಯ ಪರಿಚಯಸ್ಥರ ಮನೆಗೆ ಹೋಗಿ ನಿದ್ರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

‘ಮನೆ ಕಳೆದುಕೊಂಡು ಈಗ ನಾವು ಅಕ್ಷರಶಃ ಬೀದಿಗೆ ಬಿದ್ದಿದ್ದೇವೆ. ಈ ರಗಳೆ ನಮಗೆ ಪ್ರತಿ ವರ್ಷ ಇದ್ದದ್ದೇ. ಮಳೆ ಬಂದಾಗ ತೊಂದರೆ ಅನುಭವಿಸುತ್ತೇವೆ. ಜಿಲ್ಲಾಡಳಿತ, ನಗರಸಭೆ ಹಾಗೂ ಜನಪ್ರತಿನಿಧಿಗಳು ನಮಗೆ ತಾತ್ಕಾಲಿಕ ಪರಿಹಾರ ಕಲ್ಪಿಸಿ ಕೈ ತೊಳೆದುಕೊಳ್ಳದೇ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮಕೈಗೊಳ್ಳಬೇಕು’ ಎಂದು ಸಂತ್ರಸ್ತ ಅರಳಿ ಬಂಗಾರನಾಯಕ ಒತ್ತಾಯಿಸಿದರು.

ಮಳೆ; 262 ಮನೆಗೆ ಹಾನಿ, ₨ 1 ಕೋಟಿ ನಷ್ಟ: ಸಂತ್ರಸ್ತರಿಗೆ ಪರಿಹಾರ ವಿತರಣೆ: ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ
ಚಾಮರಾಜನಗರ: ಧಾರಾಕಾರವಾಗಿ ಸುರಿದ ಮಳೆಗೆ ಜಿಲ್ಲೆಯಲ್ಲಿ 262 ಮನೆಗಳಿಗೆ ಹಾನಿಯಾಗಿದ್ದು, ಸುಮಾರು ₨ 1 ಕೋಟಿಯಷ್ಟು ನಷ್ಟವಾಗಿದೆ.

ಕಳೆದ ಎರಡು ವಾರದಿಂದಲೂ ಜಿಲ್ಲೆಯ 4 ತಾಲ್ಲೂಕು ವ್ಯಾಪ್ತಿಯಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದೆ. ಯಳಂದೂರು ತಾಲ್ಲೂಕಿನ ಬಸವಾಪುರ ಹಾಗೂ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಮಳೆಗೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ.

ಬೆಳೆ ನಷ್ಟ ಪ್ರಮಾಣ ಕಡಿಮೆ. ಆದರೆ, ಮನೆ, ರಸ್ತೆ, ಸೇತುವೆ, ಚರಂಡಿ ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹೆಚ್ಚು ಹಾನಿಯಾಗಿದೆ. ಜಿಲ್ಲಾಡಳಿತದಿಂದಲೂ ನಷ್ಟದ ಅಂದಾಜು ಗುರುತಿಸುವ ಕಾರ್ಯ ನಡೆಯುತ್ತಿದೆ. ಜತೆಗೆ, ಸಂತ್ರಸ್ತರಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ತ್ವರಿತವಾಗಿ ಪರಿಹಾರ ವಿತರಿಸುವ ಕಾರ್ಯವೂ ನಡೆದಿದೆ.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ, ‘ರಸ್ತೆ, ಸೇತುವೆ, ಮನೆ ಸೇರಿದಂತೆ ಚಾಮರಾಜನಗರ ನಗರಸಭೆ ವ್ಯಾಪ್ತಿ ಇಲ್ಲಿಯವರೆಗೆ ಮಳೆಯಿಂದ ಸುಮಾರು ₨ 70 ಲಕ್ಷದಷ್ಟು ನಷ್ಟವಾಗಿದೆ. 183 ಮನೆಗಳಿಗೆ ಹಾನಿಯಾಗಿದೆ. ಇದರಲ್ಲಿ ಭಾಗಶಃ ಹಾಗೂ ಸಂಪೂರ್ಣ ಕುಸಿದಿರುವ ಮನೆಗಳು ಸೇರಿವೆ. ಯಳಂದೂರು ತಾಲ್ಲೂಕಿನ ಬಸವಾಪುರ ಗ್ರಾಮದಲ್ಲಿ 79 ಮನೆಗಳಿಗೆ ಹಾನಿಯಾಗಿದ್ದು, ಸುಮಾರು ₨ 28 ಲಕ್ಷ ಪರಿಹಾರ ವಿತರಿಸಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಮಳೆಯಿಂದ ಸುಮಾರು ₨ 1 ಕೋಟಿ ನಷ್ಟ ಸಂಭವಿಸಿದೆ’ ಎಂದು ವಿವರಿಸಿದರು.

‘ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲಾಗುತ್ತಿದೆ. ಜತೆಗೆ, ನಷ್ಟದ ಪ್ರಮಾಣ ಗುರುತಿಸುವ ಕಾರ್ಯವೂ ನಡೆದಿದೆ. ಒಡೆದು ಹೋಗಿರುವ ಯಳಂದೂರು ತಾಲ್ಲೂಕಿನ ಯರಿಯೂರು ಕೆರೆ ದುರಸ್ತಿಪಡಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮಳೆಯಿಂದ ಆಗುವ ಹಾನಿ ತಪ್ಪಿಸಲು ಜಿಲ್ಲಾಡಳಿತ ಕೂಡ ಸಜ್ಜಾಗಿದೆ’ ಎಂದರು.

ಚಾಮರಾಜನಗರ ನಗರಸಭೆಯಿಂದ ಸುಮಾರು ₨ 70 ಲಕ್ಷ ನಷ್ಟದ ಆಗಿರುವ ವರದಿ ಸಲ್ಲಿಕೆಯಾಗಿದೆ. ಉಳಿದಂತೆ ಯಾವುದೇ ವರದಿ ಸಲ್ಲಿಕೆಯಾಗಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT