ADVERTISEMENT

ಗಡಿನಾಡಿಗರಿಗೆ ದಾರಿ ತೋರಿದ ಚೆಂಬೆಳಕು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2011, 7:45 IST
Last Updated 25 ಮಾರ್ಚ್ 2011, 7:45 IST
ಗಡಿನಾಡಿಗರಿಗೆ ದಾರಿ ತೋರಿದ ಚೆಂಬೆಳಕು
ಗಡಿನಾಡಿಗರಿಗೆ ದಾರಿ ತೋರಿದ ಚೆಂಬೆಳಕು   

ಚಾಮರಾಜನಗರ: ಗಡಿನಾಡು ಜನರ ತವಕ- ತಲ್ಲಣ. ಭಾಷಾ ರಾಜ್ಯಗಳ ಬಲಿಷ್ಠತೆ. ಕೇಂದ್ರ ಸರ್ಕಾರದ ಹೊಣೆಗಾರಿಕೆ. ರಾಜ್ಯ ಸರ್ಕಾರದ ಕನ್ನಡಪರ ಕರ್ತವ್ಯ. ಕನ್ನಡಿಗರ ಜವಾಬ್ದಾರಿಯ ಮೇಲೆ ಹಿರಿಯ ಕವಿ ಚನ್ನವೀರ ಕಣವಿ ‘ಚೆಂಬೆಳಕು’ ಚೆಲ್ಲಿದರು!

ಜಿಲ್ಲೆಯ ಹನೂರು ಪಟ್ಟಣದಲ್ಲಿ ಗುರುವಾರ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಗಡಿನಾಡ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಿದ ಅವರ ಭಾಷಣದಲ್ಲಿ, ಕನ್ನಡ ನಾಡು-ನುಡಿ ಕುರಿತ ಕಾಳಜಿ ಅನಾವರಣಗೊಂಡಿತು. ಚೆಂಬೆಳಕಿನ ಕವಿಯಾದ ಕಣವಿ, ನೆರೆಹೊರೆಯ ರಾಜ್ಯಗಳ ಆಕ್ರಮಣಶೀಲತೆ ಬಗ್ಗೆ ಪ್ರಸ್ತಾಪಿಸುತ್ತಲೇ ಕನ್ನಡಿಗರ ಹೊಣೆಗಾರಿಕೆ ಯತ್ತಲೂ ಬೊಟ್ಟು ಮಾಡಿದರು. ಸುಮಾರು ಅರ್ಧಗಂಟೆ ಕಾಲದ ಭಾಷಣದಲ್ಲಿ ಕನ್ನಡದ ಸುಧೆ ಹರಿಸಿದರು. ಗಡಿನಾಡಿನ ಕನ್ನಡ ಪ್ರದೇಶಗಳ ರಕ್ಷಣೆ ಬಗ್ಗೆಯೂ ಕಹಳೆ ಮೊಳಗಿಸಿದರು.

‘ಪ್ರತಿಯೊಂದು ಭಾಷಾ ರಾಜ್ಯವೂ ಬಲಿಷ್ಠವಾಗಬೇಕು. ಕೇಂದ್ರ ಸರ್ಕಾರವೆಂಬುದು ಬಲಿಷ್ಠ ರಾಜ್ಯಗಳ ಸಮತೋಲನದಿಂದ ಪರಸ್ಪರ ಸಂಘರ್ಷ ತಪ್ಪಿಸಿ, ಶೋಷಣೆ ನಿಯಂತ್ರಿಸುವ ವ್ಯವಸ್ಥೆಯಾಗಬೇಕಿದೆ. ಆದರೆ, ಇಂಥ ಕರ್ತವ್ಯ ನಿರ್ವಹಿಸಲು ಕೇಂದ್ರ ವಿಮುಖವಾಗಿದೆ. ಇದರ ಪರಿಣಾಮ ದೇಶದ ತುಂಬೆಲ್ಲಾ ಪ್ರಾದೇಶಿಕ ಅಸಮಾನತೆಯ ಕೂಗು ಎದ್ದಿದೆ’ ಎಂದರು ಚನ್ನವೀರ ಕಣವಿ.

ಕನ್ನಡ ಅಥವಾ ಕರ್ನಾಟಕತ್ವ ಒಂದು ಭಾಷೆಯ ಹೆಸರಲ್ಲ. ಭೌಗೋಳಿಕ ಪ್ರದೇಶವೊಂದರಲ್ಲಿ ವಾಸಿಸುವ ಜನಸಮುದಾಯದ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದುಕಿನ ಐತಿಹಾಸಿಕ ದಾಖಲೆ. ಈ ಸಮುದಾಯದ ವರ್ತಮಾನ ಸಾವಿರಾರು ನಾಲಿಗೆಯ ಮೂಲಕ

ಅಭಿವ್ಯಕ್ತವಾಗುತ್ತಿದೆ. ಅದನ್ನು ರೂಪಿಸುವುದರೊಂದಿಗೆ ಆ ಮೂಲಕ ಭವಿಷ್ಯದ ಅನಂತ ಸಾಧ್ಯತೆ ತಿಳಿಸುವ ಮಾಧ್ಯಮವಾಗಿ ಕನ್ನಡ ರೂಪುಗೊಂಡಿದೆ ಎಂದು ಪ್ರತಿಪಾದಿಸಿದರು.
ಸಂಘರ್ಷಕ್ಕಿಂತ ನ್ಯಾಯಬದ್ಧವಾದ ಸಂಧಾನವನ್ನು ಕರ್ನಾಟಕ ಬಯಸುತ್ತದೆ. ಇದನ್ನು ದೌರ್ಬಲ್ಯವೆಂದು ಭಾವಿಸಬಾರದು. ಕನ್ನಡಿಗರು ನಿರಂತರವಾಗಿ ಎಚ್ಚರದಿಂದ ಇರಬೇಕು.ಜನಪ್ರತಿನಿಧಿಗಳು ಮತ್ತು ಸರ್ಕಾರವನ್ನು ಎಚ್ಚರಿಸುತ್ತಲೇ ಇರಬೇಕು. ವರ್ತಮಾನದ ಆತಂಕ ನಿವಾರಿಸಿಕೊಳ್ಳುವುದು ಒಳಿತು. ಆಗ ನಾಳೆಯ ಕಿಟಕಿ, ಬಾಗಿಲುಗಳನ್ನು ಹೊಸ ಹೊಸ ಬೆಳಕುಗಳಿಗೆ ತೆರೆದಿಡಲು ಸಾಧ್ಯ ಎಂದರು.

ರಾಜ್ಯದಲ್ಲಿರುವ ಅನ್ಯಭಾಷಿಕರೊಂದಿಗೆ ಕನ್ನಡ ಚಳವಳಿ ಕಟ್ಟುವ ಕೆಲಸವಾಗಬೇಕಿದೆ. ರಾಷ್ಟ್ರಭಾಷೆಯೊಂದಿಗೆ ಸಂಘರ್ಷಮಯ ಸಹಜೀವನ ಹಾಗೂ ಅಂತರ್ ರಾಷ್ಟ್ರೀಯ ಭಾಷೆಯೊಂದಿಗೆ ವ್ಯಾವಹಾರಿಕ ಸಂಪರ್ಕ ಸಾಧಿಸು ವುದು ಇಂದಿನ ಅನಿವಾರ್ಯತೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ನೆರೆಯವರ ರಾಜಕೀಯ ವಿದ್ಯಮಾನಗಳು ಕೂಡ ತೊಡಕು ಉಂಟು ಮಾಡುತ್ತಿವೆ. ತಮಿಳುನಾಡಿನ ರಾಜಕಾರಣ ವೀರಪ್ಪನ್ ಮೂಲಕ ಮುಂದಿಟ್ಟ ಬೇಡಿಕೆಗಳೇ ಇದಕ್ಕೆ ನಿದರ್ಶನ ಎಂದ ಅವರು, ಭಾಷೆ ಮತ್ತು ಸಂಸ್ಕೃತಿ ಆಧಾರದ ಮೇಲೆ ಚಳವಳಿ ನಿಂತಿವೆ. ವೈಚಾರಿಕ ನಾಯಕತ್ವದೊಂದಿಗೆ ಕಾರ್ಯಕರ್ತರಿಗೆ ಪ್ರಜ್ಞೆ ಮೂಡಿಸುತ್ತಿವೆ. ಅವರ ಪಾಲುದಾರಿಕೆಗೆ ಅರ್ಥ ತಂದುಕೊಡಲು ನಿರಂತರ ತರಬೇತಿ ಕೇಂದ್ರಗಳನ್ನು ತೆರೆಯಬೇಕಿದೆ ಎಂದು ಆಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT