ADVERTISEMENT

ಗಿರಿ ಏರುವ ಮುನ್ನ ಭಯದ ದರ್ಶನ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 5:55 IST
Last Updated 22 ಸೆಪ್ಟೆಂಬರ್ 2011, 5:55 IST
ಗಿರಿ ಏರುವ ಮುನ್ನ ಭಯದ ದರ್ಶನ
ಗಿರಿ ಏರುವ ಮುನ್ನ ಭಯದ ದರ್ಶನ   

ಯಳಂದೂರು: ಶಿಥಿಲವಾದ ನಡು ಮಂಟಪದ ಮೇಲೆ ಬೆಳೆಯುತ್ತಿರುವ ಕಳೆಗಿಡಗಳು. ಮೆಟ್ಟಿಲಿಗೆ ಅಡ್ಡವಾಗಿ ನಿಲ್ಲುವ ಬಿಡಾಡಿ ದನಗಳು. ನಾಯಿಗಳ ಓಡಾಟ. ಬೆಟ್ಟದ ಅಂಚಿನ ಅಪಾಯದ ಬಂಡೆಗಳ ನಡುವೆ ಕುಳಿತ ಪ್ರವಾಸಿಗರು.
-ಇವು ಬಿಳಿಗಿರಿರಂಗಪ್ಪ ಸ್ವಾಮಿಯನ್ನು ಕಾಣುವ ಮುನ್ನ ಆಗುವ ನಿತ್ಯ ದರ್ಶನ.

ತಾಲ್ಲೂಕಿನ ಪ್ರಸಿದ್ಧ ಶ್ವೇತಾದ್ರಿ ಗಿರಿ ಎಂದೇ ಬಿಂಬಿತವಾದ ಬಿಳಿಗಿರಿರಂಗನಾಥಸ್ವಾಮಿ ಬೆಟ್ಟ ಏರು ಹಾದಿಯ ಕಲ್ಲಿನ ಮೆಟ್ಟಿಲುಗಳ ಬಳಿ ಈ ದೃಶ್ಯ ಸಾಮಾನ್ಯ. ರಥ ಬೀದಿಯಿಂದ ಆಗಮಿಸುವ ಭಕ್ತರು ದೇವಾಲಯಕ್ಕೆ ನಡೆದು ಹೋಗುವ ಹಾದಿ ಇಲ್ಲಿಂದ ಆರಂಭವಾಗುತ್ತದೆ. ನಿಸರ್ಗ ರಮಣೀಯ  `ಕಮರಿ~ಯನ್ನು ಪಶ್ವಿಮದ ಕಡೆ ನೋಡಲು ಮೆಟ್ಟಲು ಏರುತ್ತಾರೆ ಭಕ್ತರು. ಆದರೆ ಜನನಿಬಿಡ ಸ್ಥಳದಲ್ಲಿ ಅಡ್ಡಲಾಗಿ ನಿಲ್ಲುವ ಹಸುಗಳು, ನಾಯಿಗಳ ಸುತ್ತಾಟ ಪ್ರವಾಸಿಗರ ಭಯಕ್ಕೂ ಕಾರಣವಾಗಿದೆ.

ವಿಶೇಷ ದಿನಗಳಲ್ಲಿ ನಡು ಮಂಟಪದ ನಡುವೆ ದೇವರ ಪೂಜೆ ಕೈಗೊಳ್ಳಲಾಗುತ್ತದೆ. ದೊಡ್ಡ ಜಾತ್ರೆಯಲ್ಲಿ ಇಲ್ಲಿ ಅರವಟ್ಟಿಗೆ ಮೂಲಕ ಪ್ರಸಾದ ವಿನಿಯೋಗ ನಡೆಯುತ್ತದೆ.

ಪೂರ್ಣ ಕಲ್ಲಿನಲ್ಲೇ ನಿರ್ಮಾಣವಾದ ಈ ಮಂಟಪ ಶಿಥಿಲವಾಗಿದೆ. ಮೇಲ್ಭಾಗದ ಮಾಡಿನಲ್ಲಿ ನೀರು ಜಿನುಗುತ್ತಿದೆ. ಹುಲ್ಲು ಸಹ ಬೆಳೆದಿದೆ. ಹಾಗಾಗಿ ಇದನ್ನು ಸುವ್ಯವಸ್ಥಿತ ಗೂಳಿಸಬೇಕು ಎನ್ನುತ್ತಾರೆ ಪೂಜಾರಿ ಸೋಮಣ್ಣ.

ದರ್ಶನಾರ್ಥಿಗಳು, ವಯಸ್ಸಾದವರಿಗೆ ಇದು ವಿಶ್ರಮಿಸಿಕೂಳ್ಳುವ ತಾಣ. ಸುತ್ತಲಿನ ಆಹ್ಲಾದಕರ ವಾತಾವರಣದಲ್ಲಿ ಪ್ರಕೃತಿ ವೀಕ್ಷಕರಿಗೂ ಈ ಸ್ಥಳ ಮುದ ನೀಡುತ್ತದೆ. ಇಲ್ಲಿಂದ ನೇರವಾಗಿ ಗಿರಿ ಮುಟ್ಟಬಹುದು ಎನ್ನುತ್ತಾರೆ ಬೆಂಗಳೂರು ಭಕ್ತರಾದ ಆಂಜನೇಯಪ್ಪ. 

`ಹಸುಗಳು ಒಂದೆಡೆ ನಿಲ್ಲುವುದಿಲ್ಲ. ದೇವರ ಅನುಗ್ರಹದಂತೆ ಇವು ಇವೆ. ಇಲ್ಲಿ ತನಕ ಯಾರಿಗೂ ತೊಂದರೆ ನೀಡಿಲ್ಲ. ನಾಯಿಗಳು ಹೆಚ್ಚಾದರೂ ಸಹ ಚಿರತೆಗಳು ಇವುಗಳನ್ನು ನಿಯಂತ್ರಿಸುತ್ತವೆ. ಇದರಿಂದ ಸಮತೋಲನ ಸಾಧ್ಯವಾಗುತ್ತದೆ~ ಎಂಬುದು ಇಲ್ಲಿನ ವಾಸಿಗಳ ಅಭಿಪ್ರಾಯ.

ಕೆಲವರು ಕಮರಿ ಅಂಚಿನಲ್ಲಿ ನಿಂತು ಸಾಹಸ ಪ್ರದರ್ಶಿಸುವ ಜನರಿಗೂ ಕೊರತೆ ಇಲ್ಲ. ಇಲ್ಲಿಂದ ಕಾಲು ಜಾರಿದರೆ ನೂರಾರು ಅಡಿ ಪ್ರಪಾತದಲ್ಲಿ ಬೀಳಬೇಕಾಗುತ್ತದೆ.

ಫೋಟೋ ತೆಗೆಸಿಕೊಳ್ಳವ ಶೋಕಿಗೆ ಜೀವಭಯ ತೊರೆದು ಕಲ್ಲಂಚಿನಲ್ಲಿ ಪ್ರವಾಸಿಗರು ನಿಲ್ಲುತ್ತಿದ್ದಾರೆ. ಈ ಸನ್ನಿವೇಶ ಇತರರನ್ನು ತಪ್ಪು ದಾರಿಗೆ ಎಳೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.