ADVERTISEMENT

‘ಗೂಬೆಮಾಟ’ಕ್ಕೆ ಇನ್ನಿಲ್ಲದ ಬೇಡಿಕೆ!

ಗೂಬೆ ಹಿಡಿಯಲು ಹೋದ ಆದಿವಾಸಿಗಳು ಜೈಲುಪಾಲು

ಕೆ.ಎಸ್.ಗಿರೀಶ್
Published 5 ಮೇ 2018, 10:10 IST
Last Updated 5 ಮೇ 2018, 10:10 IST

ಚಾಮರಾಜನಗರ: ಚುನಾವಣೆ ಬಂದರೆ ಕೊಳ್ಳೇಗಾಲ ಹಾಗೂ ಹನೂರು ಭಾಗದ ಮಾಟಗಾರರಿಗೆ ಇನ್ನಿಲ್ಲದ ಬೇಡಿಕೆ ಸೃಷ್ಟಿಯಾಗುತ್ತದೆ. ಇವರು ಮಾಡುವ ‘ಗೂಬೆಮಾಟ’ ಗೂಬೆಗಳ ಪ್ರಾಣಕ್ಕೆ ಕಂಟಕಪ್ರಾಯವಾಗಿದೆ.

ಗೂಬೆಗಳನ್ನು ಬಳಸಿಕೊಂಡು ಮಾಡುವ ಮಾಟ ಮಂತ್ರಗಳಿಂದ ಎದುರಾಳಿಯ ಗೆಲುವಿಗೆ ತಡೆ ಒಡ್ಡಬಹುದು ಎಂಬ ಮೂಢನಂಬಿಕೆಗೆ ಜೋತು ಬಿದ್ದ ರಾಜಕಾರಣಿಗಳು ಮಾಟಗಾರರ ಮೊರೆ ಹೋಗುತ್ತಾರೆ. ಗೂಬೆಗಳನ್ನಿಟ್ಟು ವಿವಿಧ ಪೂಜೆ ಮಾಡಿ, ಅದರ ರೆಕ್ಕೆಪುಕ್ಕಗಳನ್ನು ಕಿತ್ತು ಹಿಂಸಿಸಿ ಬಲಿ ಕೊಟ್ಟರೆ ಎದುರಾಳಿಯ ಮನಸ್ಸು ಹಾಳಾಗಿ, ಅನಾರೋಗ್ಯಕ್ಕೆ ಒಳಗಾಗಿ ಪ್ರಚಾರಕ್ಕೆ ಹೋಗುವುದಿಲ್ಲ. ಮಂಕು ಹಿಡಿದು ಗೆಲ್ಲುವ ರಣತಂತ್ರ ರೂಪಿಸಲಾರರು ಎಂಬ ಮೂಢನಂಬಿಕೆ ಇದೆ.

ಗೂಬೆಯ ರೆಕ್ಕೆ ಕತ್ತರಿಸಿ ಎದುರಾಳಿಯ ಮನೆಗೆ ಅಥವಾ ಅವರ ಕಾರಿನ ಮೇಲೆ ಬಿಡುವ ಮತ್ತೊಂದು ಬಗೆಯ ಮಾಟವೂ ಇದೆ. ಸ್ಥಳೀಯ ರಾಜಕಾರಣಿಗಳಿಗಿಂತ ಹೆಚ್ಚಾಗಿ ಉತ್ತರ ಕರ್ನಾಟಕ ಭಾಗದ ರಾಜಕಾರಣಿಗಳು ತಮ್ಮ ಬೆಂಬಲಿಗರ ಮೂಲಕ ಇಲ್ಲಿಗೆ ಬಂದು ಮಾಟ ಮಾಡಿಸುತ್ತಿದ್ದಾರೆ.

ADVERTISEMENT

ಏನಿದು ಗೂಬೆ ಮಾಟ?: ಎದುರಾಳಿಯನ್ನು ಸೋಲಿಸುವಂತೆ ಮಾಡುವುದು ಗೂಬೆ ಮಾಟ. ಸಾಮಾನ್ಯವಾಗಿ ಕೋರ್ಟ್‌ ವ್ಯಾಜ್ಯಗಳು, ವೈಷಮ್ಯ, ದ್ವೇಷ ಸಾಧಿಸುವ ಕುಟುಂಬಗಳು ಇಂತಹ ಮಾಟದ ಮೊರೆ ಹೋಗುತ್ತವೆ. ಆದರೆ, ಚುನಾವಣೆ ಬಂದರೆ ಹೆಚ್ಚಿನ ಸಂಖ್ಯೆಯಲ್ಲಿ ರಾಜಕಾರಣಿಗಳು ಈ ಮಾಟ ಮಾಡಿಸುವುದರಿಂದ ಕಾಳಸಂತೆಯಲ್ಲಿ ಗೂಬೆಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುತ್ತದೆ.

ಗೂಬೆಗಳು ಸುಲಭವಾಗಿ ಬಲೆಗೆ ಬೀಳುವುದಿಲ್ಲ. ಇದಕ್ಕೆ ಆದಿವಾಸಿಗಳ ನೆರವು ಬೇಕಾಗುತ್ತದೆ. ಮಧ್ಯವರ್ತಿಗಳು ಹಣದ ಆಸೆ ತೋರಿಸಿ ಆದಿವಾಸಿಗಳನ್ನು ಗೂಬೆ ಹಿಡಿಯಲು ಪುಸಲಾಯಿಸುತ್ತಾರೆ. ಗೂಬೆ ಹಿಡಿದ ನಂತರ ಇವರಿಗೆ ಸಿಗುವುದು ಕೆಲವೇ ಸಾವಿರ ರೂಪಾಯಿ. ಸಿಕ್ಕಷ್ಟು ಸಿಗಲಿ ಎಂದು ಆದಿವಾಸಿಗಳು ಕಡಿಮೆ ಹಣಕ್ಕೆ ಗೂಬೆ ಮಾರಾಟ ಮಾಡುತ್ತಾರೆ.

ಗೂಬೆ ಹಿಡಿಯುವಾಗ ಅಥವಾ ಗೂಬೆ ಮಾರಾಟ ಮಾಡುವಾಗ ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಾರೆ. ದಲ್ಲಾಳಿಗಳು ಮಾತ್ರ ಯಾರ ಕೈಗೂ ಸಿಗುವುದಿಲ್ಲ.

ಎರಡು ತಲೆ ಹಾವಿಗೂ ಭಾರಿ ಬೇಡಿಕೆ

ಸಾಮಾನ್ಯವಾಗಿ ಹಳ್ಳಿಗಳ ತಿಪ್ಪೆಗಳಲ್ಲಿ ಸಿಗುತ್ತಿದ್ದ ಮಣ್ಣಮುಕ್ಕು ಹಾವು ಅಥವಾ ಎರಡು ತಲೆ ಹಾವಿಗೂ ಕಾಳಸಂತೆಯಲ್ಲಿ ಬೇಡಿಕೆ ಇದೆ. ಈ ಹಾವನ್ನು ಮನೆಯಲ್ಲಿ ಇಟ್ಟುಕೊಂಡರೆ ಅದೃಷ್ಟ ಲಭಿಸುತ್ತದೆ ಎಂಬ ಕಾರಣಕ್ಕೆ ಲಕ್ಷಾಂತರ ರೂಪಾಯಿಗೆ ಮಾರಾಟವಾಗುತ್ತದೆ.

ವಾಸ್ತವ ಏನೆಂದರೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಸಲಾಗುತ್ತಿದ್ದ ಪ್ರಯೋಗವೊಂದಕ್ಕೆ ಇರಿಡಿಯಂ ಧಾತು ಅಗತ್ಯವಿತ್ತು. ಆದರೆ, ಇದು ಸುಲಭದಲ್ಲಿ ದೊರಕುತ್ತಿರಲಿಲ್ಲ. ಮಣ್ಣುಮುಕ್ಕು ಹಾವಿನ ದೇಹದಲ್ಲಿ ಜೈವಿಕ ಸ್ವರೂಪದ ಇರಿಡಿಯಂ ಇದೆ ಎಂಬ ಕಾರಣಕ್ಕೆ ಕೆಲ ಸಮಯ ಬೇಡಿಕೆ ಸೃಷ್ಟಿಯಾಯಿತು. ಕಾಳಸಂತೆಕೋರರು ಇಂತಹ ಹಾವುಗಳನ್ನು ಹಿಡಿಯಲು ಪ್ರಚೋದಿಸಿದರು. ಆದರೆ, ಇಲ್ಲೂ ಜೈಲುಪಾಲಾದವರು ಆದಿವಾಸಿಗಳು. ಜೈಲು ಸೇರದ ಅನೇಕರಿಗೆ ಸಿಕ್ಕಿದ್ದು ಕೆಲವೇ ಸಾವಿರ ರೂಪಾಯಿ.

ಲಕ್ಷಾಂತರ ಹಣ; ಉಹಾಪೋಹ

ಗೂಬೆ, ಮಣ್ಣುಮುಕ್ಕು ಹಾವು ಮೊದಲಾದ ಪ್ರಾಣಿಗಳಿಗೆ ಲಕ್ಷಾಂತರ ಹಣ ಸಿಗುತ್ತದೆ ಎಂಬ ಮಾತಿನಲ್ಲಿ ಸತ್ಯಾಂಶ ಇಲ್ಲ. ಕಾಳಸಂತೆಯಲ್ಲಿನ ದಲ್ಲಾಳಿಗಳು ಮೊದಲು ಲಕ್ಷಾಂತರ ರೂಪಾಯಿ ಆಸೆ ತೋರಿಸಿ, ನಂತರ ಕಡಿಮೆ ಹಣ ನೀಡುತ್ತಾರೆ ಎಂದು ಹೆಸರು ಹೇಳಲಿಚ್ಛಿಸದ ಆದಿವಾಸಿಯೊಬ್ಬರು ತಿಳಿಸಿದರು.

ಗೂಬೆಯೂ ವನ್ಯಜೀವಿ

ಗೂಬೆ ಸಹ ವನ್ಯಜೀವಿಯಾಗಿದೆ. ಒಂದು ವೇಳೆ ಇದನ್ನು ಹಿಡಿದರೆ, ಸಾಕಿದರೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಅರಣ್ಯ ಅಧಿಕಾರಿಗಳು ಎಚ್ಚರಿಕೆ ನೀಡುತ್ತಾರೆ.

**
ಮೂಢನಂಬಿಕೆ ತೊಡೆದು ಹಾಕಲು ಅರಿವು ಮೂಡಿಸಲಾಗುವುದು. ಆದಿವಾಸಿಗಳು ಗೂಬೆ ಹಿಡಿಯುವ ಕೆಲಸದಲ್ಲಿ ತೊಡಗಬಾರದು. ಇದು ಅಪರಾಧ
- ಏಡುಕುಂಡಲ, ಎಸಿಎಫ್‌, ಮಲೆಮಹದೇಶ್ವರಬೆಟ್ಟ ವನ್ಯಜೀವಿ ವಲಯ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.